Bihar Election | ಇಂದು ಸಂಜೆ 4 ಗಂಟೆಗೆ ಬಿಹಾರ ಚುನಾವಣೆ ವೇಳಾಪಟ್ಟಿ ಪ್ರಕಟ ಸಾಧ್ಯತೆ

Bihar Election
Published on

Bihar Election: ಬಿಹಾರ ವಿಧಾನಸಭಾ ಚುನಾವಣೆಯ ರಣಕಣ ದಿನೇ ದಿನೇ ರಂಗೇರುತ್ತಿದ್ದು, ಭಾರತೀಯ ಚುನಾವಣಾ ಆಯೋಗ ಇಂದು ಸಂಜೆ 4 ಗಂಟೆಗೆ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಚುನಾವಣಾ ಸಿದ್ಧತೆಗಳ ಕುರಿತಾಗಿ ಇಸಿಐ ಅಧಿಕಾರಿಗಳು ಎರಡು ದಿನಗಳ ಪರಿಶೀಲನೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಎಲ್ಲಾ 243 ಸ್ಥಾನಗಳಿಗೂ ಚುನಾವಣೆ ನಡೆಯಲಿದ್ದು, ಆಡಳಿತರೂಢ ಜನತಾದಳ (ಯುನೈಟೆಡ್) ಮತ್ತು ಭಾರತೀಯ ಜನತಾ ಪಕ್ಷ ನೇತೃತ್ವದ ಮೈತ್ರಿಕೂಟವು ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಕಾಂಗ್ರೆಸ್ ಮಿತ್ರಪಕ್ಷಗಳನ್ನು ಒಳಗೊಂಡ ವಿರೋಧ ಪಕ್ಷ ಮಹಾಘಟಬಂಧನ್‌ನಿಂದ ಕಠಿಣ ಸವಾಲು ಎದುರಿಸುವ ನಿರೀಕ್ಷೆಯಿದೆ.

ಮತದಾನ ಪ್ರಮಾಣವನ್ನು ಹೆಚ್ಚಿಸುವ ಗುರಿ ಹೊಂದಿರುವ ಆಯೋಗ, 17 ಹೊಸ ಉಪಕ್ರಮಗಳನ್ನು ಪರಿಚಯಿಸಿದೆ. ಇದರಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಅನುಷ್ಠಾನ, ಪ್ರತಿ ಮತಗಟ್ಟೆಗೆ ನಿಗದಿಪಡಿಸಲಾದ ಮತದಾರರ ಸಂಖ್ಯೆಯನ್ನು 1,200 ಕ್ಕೆ ಮಿತಿಗೊಳಿಸಲಾಗಿದೆ, ಇವಿಎಂಗಳಲ್ಲಿ ಬಣ್ಣದ ಛಾಯಾಚಿತ್ರಗಳ ಬಳಕೆ ಮತ್ತು ಮತಗಟ್ಟೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇದಿಸಿ ಆದೇಶ ಹೊರಡಿಸಿದೆ. ಈ ಎಲ್ಲ ಸುಧಾರಣೆಗಳು ದೇಶಾದ್ಯಂತ ಭವಿಷ್ಯದ ಚುನಾವಣೆಗಳಿಗೆ ಮಾದರಿಯಾಗಲಿದ್ದು, ಇದನ್ನು ಮುಂಬರುವ ಎಲ್ಲ ರಾಜ್ಯಗಳ ಚುನಾವಣೆಗೂ ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, 22 ವರ್ಷಗಳ ಬಳಿಕ ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ವಿಶೇಷ ತೀವ್ರ ಪರಿಷ್ಕರಣೆ ಆಯಾಮದ ಮೂಲಕ ಶುದ್ಧೀಕರಿಸಲಾಗಿದೆ ಎಂದು ಘೋಷಿಸಿದರು. ಇದು ಮತದಾರರ ಪಟ್ಟಿಯಲ್ಲಿ ದೀರ್ಘಕಾಲದ ತಪ್ಪುಗಳು ಮತ್ತು ನಕಲಿ ಮತದಾರರನ್ನು ತೆಗೆದುಹಾಕಿದೆ. ಪರಿಷ್ಕೃತ ಪಟ್ಟಿಯು ಕಾನೂನುಬದ್ಧವಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದರು.

ಪರಿಷ್ಕರಣೆ ಪ್ರಕ್ರಿಯೆ ಆರಂಭವಾದಾನಿಂದಲೂ, ವಿರೋಧ ಪಕ್ಷಗಳು SIR ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದು, ಹೆಚ್ಚಿನ ಸಂಖ್ಯೆಯ ಅರ್ಹ ಮತದಾರರನ್ನು ಹೊರಗಿಡಲಾಗಿದೆ ಮತ್ತು ಈ ಪ್ರಕ್ರಿಯೆಯು ಪ್ರಮುಖ ಕ್ಷೇತ್ರಗಳಲ್ಲಿ ಮತದಾನದ ಮೇಲೆ ಪರಿಣಾಮ ಬೀರಬಹುದು ಎಂದು ಆರೋಪಿಸುತ್ತಿವೆ. ಪರಿಷ್ಕರಿಸಿದ ಪಟ್ಟಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ನಿರ್ವಹಿಸಲು ಮತದಾನದ ಮೊದಲು ಯಾವುದೇ ಲೋಪಗಳನ್ನು ಸರಿಪಡಿಸಬೇಕೆಂದು ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಮುಂಬರುವ ಚುನಾವಣೆಯ ಕುರಿತು ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಬಿಹಾರದ ಪ್ರಮುಖ ಆಚರಣೆಯಾದ ಛಠ್ ಪೂಜಾ ಹಬ್ಬದ ನಂತರ ಚುನಾವಣೆಯನ್ನು ನಿಗದಿಪಡಿಸುವಂತೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗವನ್ನು ಒತ್ತಾಯಿಸಿವೆ. ಚುನಾವಣಾ ದಿನಾಂಕಗಳನ್ನು ಅಂತಿಮಗೊಳಿಸುವಾಗ ಆಯೋಗವು ಈ ಮನವಿಯನ್ನು ಪರಿಗಣಿಸುವ ನಿರೀಕ್ಷೆಯಿದೆ.

ಬಿಹಾರದಲ್ಲಿ ಮಹಾಮಾರಿ ಕೋವಿಡ್-19 ಅಬ್ಬರದ ನಡುವೆಯೂ 2020 ರ ವಿಧಾನಸಭಾ ಚುನಾವಣೆಗಳು ಮೂರು ಹಂತಗಳಲ್ಲಿ ನಡೆದವು. ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದ ನಿತೀಶ್ ಕುಮಾರ್ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಲಾಯಿತು.

2022 ರಲ್ಲಿ ನಡೆದ ದಿಢೀರ್​ ಬೆಳವಣಿಗೆಯಲ್ಲಿ ನಿತೀಶ್​​​, ಎನ್‌ಡಿಎ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಜೊತೆ ಆಡಳಿತ ನಡೆಸಿದರು, ಇದಾದ ಸುಮಾರು ಎರಡು ವರ್ಷಗಳ ಬಳಿಕ 2024 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕುಮಾರ್, ಇಂಡಿಯಾ ಕೂಟದೊಂದಿಗಿನ ಮುನಿಸಿನ ಕಾರಣದಿಂದ ಹೊರಬಂದು ಬಿಜೆಪಿಯೊಂದಿಗೆ ಕೈ ಜೋಡಿಸಿ ಮತ್ತೊಮ್ಮೆ ಬಿಹಾರದ ಅಧಿಕಾರದ ಗದ್ದುಗೆ ಏರಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net