

Election Commission: ಪ್ರತಿ ಚುನಾವಣೆಗೂ ಮುನ್ನ ಮತದಾರರ ಪಟ್ಟಿಗಳ ಪರಿಷ್ಕರಣೆ ತುಂಬಾ ಅಗತ್ಯವಾಗಿದ್ದು, ಚುನಾವಣೆಯ ಬಳಿಕ ಪರಿಶೀಲನೆ ಮಾಡುವುದು ಕಾನೂನಿಗೆ ಅನುಗುಣವಾಗಿರುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಭಾನುವಾರ (ಅ 5) ಹೇಳಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿ ವೀಕ್ಷಿಸಲು ಎರಡು ದಿನಗಳ ಕಾಲ ರಾಜ್ಯದಲ್ಲಿರುವ ಆಯೋಗದ ಮುಖ್ಯಸ್ಥರು, ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು. ಇತ್ತೀಚೆಗೆ ಬಿಹಾರದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆಯು 22 ವರ್ಷಗಳ ನಂತರ ರಾಜ್ಯದ ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ಕಾರಣವಾಯಿತು ಎಂದು ಹೇಳಿದರು.
ಭಾರತದ ಪ್ರತಿಯೊಬ್ಬ ಮತದಾರರನ್ನು ನಾವು ಅಭಿನಂದಿಸುತ್ತೇವೆ, ಯಶಸ್ವಿ SIR ಪ್ರಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ಬಿಹಾರದ ಎಲ್ಲಾ ಮತದಾರರು ಛಠ್ ಆಚರಿಸುವಂತೆಯೇ, ಪ್ರಜಾಪ್ರಭುತ್ವದ ಹಬ್ಬವನ್ನು ಅದೇ ಉತ್ಸಾಹದಿಂದ ಆಚರಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು. ಬಿಹಾರದ ಸರ್ಕಾರದ ಅವಧಿ ನವೆಂಬರ್ 22 ರ ಮೊದಲು ಪೂರ್ಣಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.
ಪ್ರತಿ ಮತಗಟ್ಟೆಗೆ ಮತದಾರರ ಸಂಖ್ಯೆಯನ್ನು 1,200 ಕ್ಕೆ ಮಿತಿಗೊಳಿಸಲಾಗಿದ್ದು, ಯಾವುದೇ ಮತದಾರರು ತಮ್ಮ ಫೋನ್‌ಗಳನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗಲು ಅನುಮತಿಯನ್ನು ನಿರಾಕರಿಸಿದೆ. ಪ್ರತಿ ಮತಗಟ್ಟೆಯಲ್ಲಿ 100 ಪ್ರತಿಶತ ವೆಬ್‌ಕಾಸ್ಟಿಂಗ್ ಇರುತ್ತದೆ, ಇವಿಎಂಗಳಲ್ಲಿನ ಮತಪತ್ರಗಳು ಕಪ್ಪು ಮತ್ತು ಬಿಳಿ ಬಣ್ಣದ್ದಾಗಿರುವುದರಿಂದ ಅಭ್ಯರ್ಥಿಯನ್ನು ಗುರುತಿಸುವುದು ಕಷ್ಟವಾಗಬಹುದು ಎಂದು ಮನಗಂಡಿರುವ ಆಯೋಗ, ಬಿಹಾರ ಚುನಾವಣೆಯಿಂದಲೇ ಸರಣಿ ಸಂಖ್ಯೆಯ ಫಾಂಟ್ ಮತ್ತು ಅಭ್ಯರ್ಥಿಯ ಫೋಟೋಗಳು ಈಗ ಬಣ್ಣದಲ್ಲಿ ಇರುತ್ತವೆ ಎಂದು ಹೊಸ ಬದಲಾವಣೆಯನ್ನು ಘೋಷಿಸಿದರು.
ರಾಜ್ಯದ ಬಿಜೆಪಿ ನಾಯಕರುಗಳು ಬುರ್ಖಾ ಧರಿಸಿದ ಮಹಿಳೆಯರನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಮತದಾನ ಮತ್ತು ಮತದಾರರ ಗುರುತಿಸುವಿಕೆಯನ್ನು ನಿಯಮಗಳ ಪ್ರಕಾರ ನಡೆಸಲಾಗುವುದು, ಆಧಾರ್ ಕಾರ್ಡ್, ಪೌರತ್ವದ ಪುರಾವೆಯಲ್ಲ, ಇದು ಕೇವಲ ಗುರುತಿನ ಆಯ್ಕೆಯಾಗಿರಲಿದೆ ಎಂದರು.(ಏಜೆನ್ಸೀಸ್)