

Bihar Voter Roll: ಬಿಹಾರದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಬಳಿಕ ಬಿಡುಗಡೆಯಾಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳಿವೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಮೇಶ್, ಚುನಾವಣಾ ಆಯೋಗ, ಆಡಳಿತಾರೂಢ ಬಿಜೆಪಿಯ ಪ್ರಭಾವ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಬಿಜೆಪಿಯ ಬಿ ಟೀಮ್ ಎಂದರು.
ಬಿಡುಗಡೆಯಾದ ಅಂತಿಮ ಪಟ್ಟಿಯ ಪ್ರಕಾರ, ಒಂದೇ ಮನೆಯಲ್ಲಿ 247 ಮತದಾರರು ನೋಂದಾಯಿಸಲ್ಪಟ್ಟಿದ್ದಾರೆ, ಒಂದೇ ಬೂತ್‌ನಲ್ಲಿ ಒಬ್ಬ ವ್ಯಕ್ತಿಯ ಹೆಸರು ಮೂರು ಬಾರಿ ಕಾಣಿಸಿಕೊಂಡಿದೆ. ಇದು ಎಷ್ಟರ ಮಟ್ಟಿಗಿನ ಸರಿಯಾದ ಪರಿಷ್ಕರಣೆ ಎಂದು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದರು. ಬಿಜೆಪಿಯ ಆಜ್ಞೆಯ ಮೇರೆಗೆ ಎಸ್ಐಆರ್ನ್ನು ಆಯೋಜಿಸಿದ್ದು, ಬಿಹಾರದ ಎಲ್ಲಾ ಪ್ರದೇಶಗಳ ವರದಿಗಳು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ರಾಜಕೀಯ ಲಾಭವನ್ನು ಮಾಡುವ ಏಕೈಕ ಉದ್ದೇಶದಿಂದ ಈ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪರಿಷ್ಕರಣೆ ಪ್ರಕ್ರಿಯೆಯು ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದು, ಈ ವಿಷಯವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಂದ ವಿವರಣೆಯನ್ನು ಕೋರಿದ್ದಾರೆ. ಒಂದೇ ಮನೆಯಲ್ಲಿ 247 ಮತದಾರರು ಹೇಗೆ ಕಂಡುಬಂದರು ಮತ್ತು ಒಂದೇ ಮತಗಟ್ಟೆಯಲ್ಲಿ ಒಬ್ಬ ವ್ಯಕ್ತಿಯ ಹೆಸರು ಮೂರು ಬಾರಿ ಏಕೆ ಕಾಣಿಸಿಕೊಂಡಿತು ಎಂಬುದನ್ನು ಸಿಇಸಿ ವಿವರಿಸುತ್ತದೆಯೇ? ಅಂತಿಮ ಮತದಾರರ ಪಟ್ಟಿಯಲ್ಲಿ ಇಷ್ಟೊಂದು ಬೃಹತ್ ಅಕ್ರಮಗಳು ಹೇಗೆ ಹೊರಹೊಮ್ಮುತ್ತಿವೆ? ಆಯುಕ್ತರು ಮೊದಲಿನಂತೆ ಮೌನ ವಹಿಸುತ್ತಾರೆಯೇ? ಎಂದು ಪ್ರಶ್ನಿಸಿದರು. ಕೇಂದ್ರ ಚುನಾವಣಾ ಆಯೋಗ ಇಡೀ ದೇಶಕ್ಕೆ ಸೇರಿದ್ದು, ಅದು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸಬಾರದು, ಆಯೋಗದ ಪ್ರಸ್ತುತ ರಾಜಕೀಯ ಪಕ್ಷಪಾತದ ನೀತಿಗಳು ಭಾರತದ ಪ್ರಜಾಪ್ರಭುತ್ವ ಮತ್ತು ಅಂತರರಾಷ್ಟ್ರೀಯ ಇಮೇಜ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ರಮೇಶ್ ಹೇಳಿದರು.
ಬಿಹಾರದ ವಿಧಾನಸಭಾ ಚುನಾವಣೆಗೆ ಮುನ್ನ ಅಂತಿಮ ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದ ಒಂದು ದಿನದ ನಂತರ ಈ ಆರೋಪಗಳು ಕೇಳಿ ಬಂದಿವೆ. ಆಯೋಗದ ಪ್ರಕಾರ, ಒಟ್ಟು ಮತದಾರರ ಸಂಖ್ಯೆ ಈಗ 7.42 ಕೋಟಿಗೆ ತಲುಪಿದ್ದು, ಈ ವರ್ಷದ ಜೂನ್ 24 ರ ವೇಳೆಗೆ 7.89 ಕೋಟಿ ಇತ್ತು. ಪರಿಷ್ಕರಣೆ ಸಂದರ್ಭದಲ್ಲಿ 65 ಲಕ್ಷ ಹೆಸರುಗಳನ್ನು ಕರಡು ಪಟ್ಟಿಯಿಂದ ಅಳಿಸಲಾಗಿದೆ, 3.66 ಲಕ್ಷ ಅನರ್ಹ ಮತದಾರರನ್ನು ತೆಗೆದುಹಾಕಲಾಗಿದೆ ಮತ್ತು 21.53 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿದೆ ಎಂದು ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ ತಿಳಿಸಿದೆ (ಫಾರ್ಮ್ 6). (ಏಜೆನ್ಸೀಸ್)