'ಜೈ ಶ್ರೀರಾಮ್​' ಘೋಷಣೆ ಕೂಗುವಂತೆ ಹೇಳಿ ಮುಸ್ಲಿಂ ಆಟೋ ಚಾಲಕನಿಗೆ ಹಲ್ಲು ಮುರಿಯುವಂತೆ ಹೊಡೆದರು...

Jai Shreeram
Published on

ಜೈಪುರ: 52ವರ್ಷ ಆಟೋ ಚಾಲಕನ ಮೇಲೆ ಇಬ್ಬರು ತೀವ್ರ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಸಿಕಾರ್​ ಜಿಲ್ಲೆಯಲ್ಲಿ ನಡೆದಿದೆ.

ಆಟೋ ಚಾಲಕನ ಹೆಸರು ಗಪ್ಪರ್​ ಅಹ್ಮದ್​ ಕಚವಾ. ಇವರ ಬಳಿ ಬಂದ ಇಬ್ಬರು, ಜೈ ಶ್ರೀರಾಮ್​, ಮೋದಿ ಜಿಂದಾಬಾದ್​ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ಹಾಗೇ ಹಲ್ಲೆಯನ್ನೂ ನಡೆಸಿದ್ದಾರೆ. ಈ ಬಗ್ಗೆ ಗಪ್ಪರ್​ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಇವರಿಬ್ಬರನ್ನೂ ಬಂಧಿಸಿ, ಎಫ್​ಐಆರ್​ ದಾಖಲು ಮಾಡಿದ್ದಾರೆ.

ಇವರಿಬ್ಬರೂ ತನ್ನ ಬಳಿ ಇದ್ದ ಹಣ ಹಾಗೂ ವಾಚ್​​ನ್ನು ಕಳವು ಮಾಡಿದ್ದಾರೆ ಎಂದೂ ಆಟೋ ಚಾಲಕ ದೂರಿದ್ದಾರೆ. ಹಳ್ಳಿಯೊಂದಕ್ಕೆ ಹೋಗಿ ಪ್ರಯಾಣಿಕರನ್ನು ಬಿಟ್ಟು ವಾಪಸ್ ಬರುವಾಗ ಘಟನೆ ನಡೆದಿದೆ. ಆಟೋ ಚಾಲಕನ ಹಲ್ಲು ಮುರಿದಿದ್ದು, ಕಣ್ಣು ಊದಿಕೊಂಡಿದೆ. ಕೆನ್ನೆಯ ಮೇಲೆ ಏಟು ಬಿದ್ದ ಗುರುತು ಕಾಣುತ್ತಿದೆ.

ಶುಕ್ರವಾರ ಮುಂಜಾನೆ 4 ಗಂಟೆಯ ಹೊತ್ತಿಗೆ ನನ್ನ ಅಂಕಲ್ ಹಳ್ಳಿಯೊಂದರಿಂದ ವಾಪಸ್​ ಬರುತ್ತಿದ್ದರು. ಆಗ ಕಾರಿನಲ್ಲಿ ಬಂದ ಇಬ್ಬರು ಅವರನ್ನು ಅಡ್ಡಗಟ್ಟಿ, ಮೊದಲು ತಂಬಾಕು ಕೊಡುವಂತೆ ಕೇಳಿದ್ದಾರೆ. ನನ್ನ ಅಂಕಲ್​ ಕೊಟ್ಟಿದ್ದಾರೆ. ಅದಾದ ಬಳಿಕ ಇಬ್ಬರೂ ಅವರ ಬಳಿ ಜೈ ಶ್ರೀರಾಮ್​ ಹೇಳುವಂತೆ ಕೇಳಿದ್ದಾರೆ. ಅಷ್ಟೇ ಅಲ್ಲ, ಮೋದಿ ಜಿಂದಾಬಾದ್​ ಎನ್ನುವಂತೆಯೂ ಒತ್ತಾಯಿಸಿದ್ದಾರೆ. ನಂತರ ಹಲ್ಲೆ ನಡೆಸಿದ್ದಾರೆ ಎಂದು ಕಚವಾ ಅವರ ಸಂಬಂಧಿಯೋರ್ವ ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ: ಯುವತಿಯ ಬಣ್ಣದ ಮಾತು ನಂಬಿದ ನಿವೃತ್ತ ವೈದ್ಯರಿಬ್ಬರಿಗೆ ಕಾದಿತ್ತು ಬಿಗ್​ ಶಾಕ್​!

ನಾನು ಜೈ ಶ್ರೀರಾಮ್​ ಹೇಳಲು ನಿರಾಕರಿಸಿದೆ. ಅಷ್ಟೇ ಅಲ್ಲ ಅಲ್ಲಿಂದ ಓಡಲು ಪ್ರಯತ್ನಿಸಿದೆ. ಆಗ ನನ್ನ ಗಡ್ಡವನ್ನು ಹಿಡಿದು ಎಳೆದು, ಒದ್ದಿದ್ದಾರೆ. ಮುಖಕ್ಕೆ ಗುದ್ದಿದ ಪರಿಣಾಮ ನನ್ನ 2-3 ಹಲ್ಲುಗಳು ಮುರಿದಿವೆ. ಕೋಲಿನಿಂದಲೂ ಹೊಡೆದಿದ್ದಾರೆ. ನನ್ನ ಎಡಗಣ್ಣಿಗೆ ತುಂಬ ಏಟಾಗಿದೆ. ನಿನ್ನನ್ನು ಪಾಕಿಸ್ತಾನಕ್ಕೆ ಕಳಿಸದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಗಪ್ಪರ್​ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net