

ಭುವನೇಶ್ವರ್: ಇಬ್ಬರು ವ್ಯಕ್ತಿಗಳಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ 28 ವರ್ಷದ ಯುವತಿಯೊಬ್ಬಳನ್ನು ಒಡಿಶಾದ ಅನುಗುಲ್ ಜಿಲ್ಲೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆರೋಪಿಯನ್ನು ಸುಪ್ರಿಯಾ ಸ್ವೈನ್ ಅಲಿಯಾಸ್ ದೀಪಾ ಎಂದು ಗುರುತಿಸಲಾಗಿದೆ. ತನ್ನ ಒರಿಜಿನಲ್ ಹೆಸರು ಬದಲಾಯಿಸಿ ಅನೇಕರಿಗೆ ವಂಚಿರುವ ಈಕೆ ತಲ್ಚಾರ್ನ ಮಜಿಕಸಾಹಿ ನಿವಾಸಿ.
ತಲ್ಚಾರ್ನಲ್ಲಿ ತನ್ನ ಸಹೋದರನೊಂದಿಗೆ ವಾಸವಿದ್ದ ಧೆಂಕನಾಲ್ ಜಿಲ್ಲೆಯ ಪರ್ಜಾಂಗ್ ನಿವಾಸಿ ಬಿಜಯ್ ಪ್ರಧಾನ್ ಎಂಬ ನಿವೃತ್ತ ವೈದ್ಯರನ್ನು ಸುಪ್ರಿಯಾ ಪರಿಚಯ ಮಾಡಿಕೊಂಡಿದ್ದಳು. ತಾನೋರ್ವ ಇನ್ಶುರೆನ್ಸ್ ಏಜೆಂಟ್ ಎಂದು ನಂಬಿಸಿ, ಸ್ನೇಹ ಬೆಳೆಸಿದ್ದಳು.
ದೀಪಾ ಹೆಸರಿನಲ್ಲಿ ಪರಿಚಯ ಮಾಡಿಕೊಂಡ ಬೆನ್ನಲ್ಲೇ ಬಣ್ಣದ ಮಾತುಗಳನ್ನಾಡಿ ಪ್ರಧಾನ್ ಬಳಿ ನಂಬಿಕೆ ಗಿಟ್ಟಿಸಿಕೊಂಡಿದ್ದಾಳೆ. ಕೆಲ ದಿನಗಳ ಬಳಿಕ ವೈದ್ಯರು ತೆಗೆದುಕೊಂಡ ಇನ್ಶುರೆನ್ಸ್ ಪಾಲಿಸಿಯ ಮೆಚುರಿಟಿ ಹಣವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತೇನೆಂದು ಹೇಳಿ, ಅವರಿಂದ ಹೇಗೋ ಬ್ಯಾಂಕ್ ಮಾಹಿತಿ ಪಡೆದುಕೊಂಡಿದ್ದಾಳೆ. ಇದರ ಬೆನ್ನಲ್ಲೇ ಇನ್ಸ್ಟಾಲ್ಮೆಂಟ್ಗಳಲ್ಲಿ ಅವರ ಖಾತೆಯಿಂದ 4.57 ಲಕ್ಷ ರೂ. ಹಣವನ್ನು ವಿತ್ಡ್ರಾ ಮಾಡಿ ಪರಾರಿಯಾಗಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಮೋಸ ಹೋದ ನಿವೃತ್ತ ವೈದ್ಯ ಪ್ರಧಾನ್, ನಾನು ಬಜಾಜ್ ಫೈನಾನ್ಸ್ನಲ್ಲಿ ಒಂದು ಪಾಲಿಸಿ ಹೊಂದಿದ್ದೆ. ಆ ಹುಡುಗಿ ನನ್ನ ಬಳಿ ಬಂದು ನಿಮ್ಮ ಪಾಲಿಸಿಯ ಮೆಚುರಿಟಿ ಮೊತ್ತವನ್ನು ಕೊಡಿಸುತ್ತೇನೆಂದು ಹೇಳಿ ಸೇವಿಂಗ್ಸ್ ಬ್ಯಾಂಕ್ ಖಾತೆಯ ಮಾಹಿತಿ ಪಡೆದುಕೊಂಡಳು. ಆದರೆ, ಎಸ್ಬಿಐನಲ್ಲಿದ್ದ ನನ್ನ ಹಣವನ್ನು ಇನ್ಸ್ಟಾಲ್ಮೆಂಟ್ನಲ್ಲಿ ವಿತ್ಡ್ರಾ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೆ, ಕೊಲಿಯರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ನಿರ್ಮಲ್ ಬೆಹೆರಾ ಹೆಸರಿನ ಮತ್ತೊರ್ವ ವೈದ್ಯನಿಗೂ ಸುಪ್ರಿಯಾ ವಂಚಿಸಿದ್ದಾಳೆ. ಬಜಾಜ್ ಫೈನಾನ್ಸ್ನಲ್ಲಿ ಇನ್ಶುರೆನ್ಸ್ ಪಾಲಿಸಿ ಮಾಡಿಸಿದ್ದೆ. ಸುಪ್ರಿಯಾ ಸ್ವೈನ್ ಎಂಬಾಕೆ ನನ್ನ ಬಳಿ ಬಂದು ನಿಮ್ಮ 2 ಲಕ್ಷ ರೂ. ಮೆಚುರಿಟಿ ಹಣವನ್ನು ಕೊಡಿಸುತ್ತೇನೆಂದು ಹೇಳಿ ಎರಡು ಖಾಲಿ ಚೆಕ್ ಮೇಲೆ ಸಹಿ ಮಾಡಿಸಿಕೊಂಡು ಹೋದರು. ಆದರೆ, ಆಕೆ ನನ್ನ ಉಳಿತಾಯ ಖಾತೆಯಲ್ಲಿ 1.05 ಲಕ್ಷ ರೂ. ಹಣವನ್ನು ವಿತ್ ಡ್ರಾ ಮಾಡಿದ್ದಾಳೆ ಎಂದು ದೂರಿದ್ದಾರೆ.
ಇದೀಗ ಇಬ್ಬರು ವೈದ್ಯರು ತಲ್ಚಾರ್ ಹಾಗೂ ಕೊಲಿಯರಿ ಪೊಲೀಸ್ ಠಾಣೆಗಳಲ್ಲಿ ಯುವತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಇದೀಗ ಯುವತಿಯನ್ನು ಬಂಧಿಸಿರುವ ಅನುಗುಲ್ ಜಿಲ್ಲೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)