

ಕೇರಳ: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚಕರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಅಪರಿಚಿತ ವ್ಯಕ್ತಿಗಳ ನಂಬರ್ನಿಂದ ದೂರವಾಣಿ, ವಿಡಿಯೋ ಕಾಲ್ಗಳು ಬರುತ್ತಿವೆ. ಈ ಕರೆಗಳನ್ನು ಸ್ವೀಕರಿಸಿದ ವ್ಯಕ್ತಿಗಳು ತಮ್ಮದೇನು ತಪ್ಪಿಲ್ಲದೇ ಹೋದರು ಕೇವಲ ಒಂದು ಬೆದರಿಕೆ, ಆಮಿಷಗಳಿಗೆ ಸಿಲುಕಿ ಕೋಟಿಗಟ್ಟಲೇ ಹಣವನ್ನು ಕಳೆದುಕೊಂಡು ಬೀದಿಪಾಲಾದ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಮುಂದಿವೆ. ಇದೀಗ ಈ ಸಾಲಿಗೆ ಇಲ್ಲೊಬ್ಬರು ವೃದ್ಧೆ ಸೇರ್ಪಡೆಯಾಗಿದ್ದು, ಒಂದು ಸಣ್ಣ ತಪ್ಪಿನಿಂದ ಬರೋಬ್ಬರಿ 72 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ಸದ್ಯ ಭಾರೀ ಅಚ್ಚರಿ ಮೂಡಿಸಿದೆ.
ಕೇರಳದ ಕುಡಪ್ಪನಕುನ್ನು ತಾಲೂಕಿನ ವೃದ್ಧೆಯೊಬ್ಬರು ಆನ್ಲೈನ್ ವಂಚಕರ ಕೈಚಳಕಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ತಾನೊಬ್ಬ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ವೃದ್ಧೆಗೆ ಕರೆ ಮಾಡಿದ ವಂಚಕ, ಭದ್ರತಾ ವಿಷಯಗಳ ಕಾರಣ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಆತನ ಬೆನ್ನಲ್ಲೇ ಸಂತ್ರಸ್ತೆಗೆ ಮತ್ತೊಂದು ಕರೆ ಬಂದಿದೆ. ನಾನು ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿ ಎಂದು ಬಿಂಬಿಸಿದ ವ್ಯಕ್ತಿಯೊಬ್ಬ, ನಿಮ್ಮ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾನೆ. ಇದರಿಂದ ತೀವ್ರ ಆತಂಕಕ್ಕೀಡಾದ ವೃದ್ಧೆ ಹಣ ಕಳೆದುಕೊಂಡಿದ್ದಾರೆ.
ಸಿಬಿಐ ಆಫೀಸರ್ ಎಂದು ಕರೆ ಮಾಡಿದ ವಂಚಕ, ನಿಮ್ಮ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಹೀಗಾಗಿ ನೀವು ಡಿಜಿಟಲ್ ಅರೆಸ್ಟ್ಗೆ ಒಳಪಡುತ್ತೀರಿ ಎಂದಿದ್ದಾನೆ. ಇದರಿಂದ ಕಂಗಾಲಾದ ವೃದ್ಧೆ ಮುಂದೇನು ಮಾಡಬೇಕೆಂದು ತಿಳಿಯದೆ, ಫೇಕ್ ಅಧಿಕಾರಿಗಳ ಬಳಿಯೇ ಮಾಹಿತಿ ಪಡೆದಿದ್ದಾರೆ. ವೃದ್ಧೆಯ ಅಸಹಾಯಕತೆಯನ್ನು ಬಳಸಿಕೊಂಡ ವಂಚಕರು, ನಿಮ್ಮ ಕ್ರೆಡಿಟ್ ಕಾರ್ಡ್ನ ಪಾಸ್ವರ್ಡ್ಗಳನ್ನು ಕೊಡಿ ನಾವು ಅನ್ಬ್ಲಾಕ್ ಮಾಡಿಕೊಡ್ತೇವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಖದೀಮರ ಮೋಸದ ಜಾಲಕ್ಕೆ ಬಿದ್ದ ವೃದ್ಧೆ, ತಮ್ಮ ಖಾತೆಯ ಸಂಪೂರ್ಣ ಡಿಟೇಲ್ಸ್ನ ಕೊಟ್ಟಿದ್ದಾರೆ.
ವೃದ್ಧೆಯ ಪಾಸ್ವರ್ಡ್ ಸೇರಿದಂತೆ ಇನ್ನಿತರ ವಿವರಗಳನ್ನು ಪಡೆದಿದ್ದೇ ತಡ ವಂಚಕರು ಆಕೆಯ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಬ್ಯಾಂಕ್ ಖಾತೆಯಲ್ಲಿದ್ದ 72 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು, ಸಂದೇಶ ಮತ್ತು ದೂರವಾಣಿ ಕರೆಗೆ ಸಿಗದೆ ಪರಾರಿಯಾಗಿದ್ದಾರೆ. ಹಲವು ವರ್ಷಗಳ ಉಳಿತಾಯ ಕೆಲವೇ ಕ್ಷಣಗಳಲ್ಲಿ ವಂಚಕರ ಪಾಲಾಯಿತು ಎಂದು ವೃದ್ಧೆ ಕಣ್ಣೀರಿಟ್ಟಿದ್ದಾರೆ. ಸದ್ಯ ಈ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ,(ಏಜೆನ್ಸೀಸ್).