ಮುಖ್ಯಮಂತ್ರಿ ಸ್ಥಾನಕ್ಕೆ Eknath Shinde ರಾಜೀನಾಮೆ; ಮುಂದಿನ ಸಿಎಂ ಯಾರು ಗೊತ್ತಾ?

Untitled design - 2024-11-26T142731.268
Published on

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ನಂತರ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಂಡ ಕೆಲ ದಿನಗಳಲ್ಲಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮಂಗಳವಾರ(ನವೆಂಬರ್​ 26) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶಿಂಧೆ ಮಂಗಳವಾರ ಬೆಳಗ್ಗೆ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್ ಅವರ ಜತೆಗಿದ್ದರು. ಆದರೆ ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಂತೆ ಶಿಂಧೆ ಅವರಿಗೆ ರಾಜ್ಯಪಾಲರು ಸೂಚಿಸಿದರು. ವಾಸ್ತವವಾಗಿ ಮಹಾರಾಷ್ಟ್ರ ವಿಧಾನಸಭೆಯ ಅಧಿಕಾರಾವಧಿ ಇಂದಿಗೆ ಮುಕ್ತಾಯವಾಗುತ್ತಿದೆ.

ಬಿಜೆಪಿಗೆ ಸಿಎಂ ಸ್ಥಾನ ನೀಡಲು ಮಹಾಮೈತ್ರಿಕೂಟದಲ್ಲಿ ಒಪ್ಪಂದಕ್ಕೆ ಬಂದಿದ್ದು ದೇವೇಂದ್ರ ಫಡ್ನವಿಸ್ ಬಿಜೆಪಿಯಿಂದ ಈ ಜವಾಬ್ದಾರಿಯನ್ನು ಪಡೆಯಬಹುದು ಎನ್ನಲಾಗಿದೆ. ಅಲ್ಲದೆ ಶಿವಸೇನೆ ಮತ್ತು ಎನ್‌ಸಿಪಿ ಬಣಗಳಿಂದ ತಲಾ ಒಬ್ಬ ಉಪಮುಖ್ಯಮಂತ್ರಿ ಇರಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತ ಪಡೆದ ನಂತರ ಸಿಎಂ ಸ್ಥಾನಕ್ಕಾಗಿ ಬಿಜೆಪಿ ಮತ್ತು ಶಿವಸೇನೆ ನಡುವೆ ಹಣಾಹಣಿ ನಡೆಯುತ್ತಿದೆ. ಶಿವಸೇನೆಯು ಏಕನಾಥ್ ಶಿಂಧೆಯನ್ನು ಸಿಎಂ ಮಾಡಬೇಕೆಂದು ಒತ್ತಾಯಿಸುತ್ತಿದೆ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ನಿತೀಶ್ ಕುಮಾರ್ ಅವರನ್ನು ಸಿಎಂ ಮಾಡಿದ ಬಿಹಾರ ಸೂತ್ರವನ್ನು ಮಹಾರಾಷ್ಟ್ರದಲ್ಲಿ ಜಾರಿಗೆ ತರಲು ಶಿವಸೇನೆ ಒತ್ತಾಯಿಸುತ್ತಿದೆ.

ಶಿವಸೇನಾ ಶಾಸಕ ಮತ್ತು ಪಕ್ಷದ ವಕ್ತಾರ ಸಂಜಯ್ ಪಾಂಡುರಂಗ್ ಶಿರ್ಸಾತ್, ನವೆಂಬರ್ 30 ರಂದು ಅಂದರೆ ಶನಿವಾರದಂದು ರಾಜ್ಯದ ನೂತನ ಮುಖ್ಯಮಂತ್ರಿಯನ್ನು ಘೋಷಿಸಲಾಗುವುದು ಎಂದು ಹೇಳಿದ್ದಾರೆ. ಈ ಹಿಂದೆ ಮಂಗಳವಾರ ಸಂಜೆಯೊಳಗೆ ಸಿಎಂ ಹೆಸರು ಘೋಷಣೆಯಾಗಬಹುದು ಎಂಬ ವರದಿಗಳು ಬಂದಿದ್ದವು. ಆದರೆ ಇದೀಗ ಶಿವಸೇನೆ ಶಾಸಕರ ಹೇಳಿಕೆಯಿಂದ ಮಹಾಯುತಿಯಲ್ಲಿ ಸಿಎಂ ಸ್ಥಾನಕ್ಕೆ ಹಕ್ಕೊತ್ತಾಯ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಏಕನಾಥ್ ಶಿಂಧೆ ಸಿಎಂ ಆಗದಿದ್ದರೆ, ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅವರ ಸ್ಥಾನದಲ್ಲಿ ಪಕ್ಷದ ಯಾವುದೇ ನಾಯಕರನ್ನು ಉಪಮುಖ್ಯಮಂತ್ರಿ ಮಾಡಬಹುದು. ಮಹಾರಾಷ್ಟ್ರದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭ ಯಾವಾಗ ನಡೆಯಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ್ದು, ರಾಜ್ಯದ 288 ಸ್ಥಾನಗಳ ಪೈಕಿ 234 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಪೈಕಿ ಬಿಜೆಪಿ ಗರಿಷ್ಠ 132, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net