ಅತಿಯಾದ ಬಾಯಾರಿಕೆಯ ಎಂಟು ವಿಧಗಳು!

Thirst
Published on
ಧನ್ವಂತರಿ
ನೀರು ಕುಡಿಯುವ ಇಚ್ಛೆ ಉಂಟಾಗುವುದೇ ತೃಷ್ಣಾ ಅರ್ಥಾತ್ ಬಾಯಾರಿಕೆ. ದೈನಂದಿನ ಜೀವನದಲ್ಲಿ ಅನೇಕ ಬಾರಿ ಬಾಯಾರಿಕೆ ಆದಾಗ ನೀರನ್ನು ಸೇವಿಸಿದಾಕ್ಷಣ ಅದು ಶಾಂತವಾಗುತ್ತದೆ. ಇದು ಜೀವನದ ಸಹಜ ಕ್ರಿಯೆ. ಸತತವಾಗಿ ನೀರನ್ನು ಕುಡಿದರೂ ಪುನಃಪುನಃ ನೀರಿನ ಸೇವನೆ ಮಾಡಬೇಕೆಂಬ ತುಡಿತವಾಗುವುದನ್ನು ರೋಗ ರೂಪದಲ್ಲಿ ಕಂಡ ಆಯುರ್ವೆದ, ತೃಷ್ಣಾವನ್ನು ಎಂಟು ವಿಧವಾಗಿ ವರ್ಣಿಸಿದೆ. ಪದೇಪದೇ ನೀರನ್ನು ಕುಡಿದರೂ ಸಾಲದೆ ಭಾದಿಸುವುದಿದೆ. ಅತಿಬಾಯಾರಿಕೆಯೂ ಒಂದು ರೋಗವೇ! ಉಗ್ರರೂಪದ ಇನ್ನೊಂದು ಕಾಯಿಲೆಯ ಪರಿಣಾಮದಿಂದ, ಬಿಸಿಲಿನ ಝುಳದಿಂದ ಅಥವಾ ಸೇವಿಸಿದ ಆಹಾರದಿಂದಾಗಿ ದೇಹವನ್ನೇ ದುರ್ಬಲಗೊಳಿಸುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಒಣ ಆಹಾರ, ಸುಲಭವಾಗಿ ಜೀರ್ಣವಾಗದ ಆಹಾರ, ಅತಿ ಉಪ್ಪು, ಹುಳಿ, ತೀಕ್ಷ್ಣ, ಖಾರವಾದ ಪದಾರ್ಥಗಳು, ಮದ್ಯಪಾನ, ಬಿಸಿಲು, ಬೆಂಕಿಗಳಿಗೆ ಮೈಯೊಡ್ಡುವುದರಿಂದ, ಅತಿಯಾದ ವ್ಯಾಯಾಮ ಹಾಗೂ ಶ್ರಮದಾಯಕ ಕೆಲಸಗಳಿಂದ ದಣಿದಾಗ, ನೀರನ್ನು ಕುಡಿಯದೆ ತಡೆಯುವುದು, ಭಯ, ಕೋಪ, ಚಿಂತೆಯೇ ಮೊದಲಾದ ಮಾನಸಿಕ ಕಾರಣಗಳಿಂದ ಬಾಯಾರಿಕೆ ಆಗುತ್ತದೆ. ಅಗತ್ಯವಿರುವಷ್ಟು ನೀರು ಕುಡಿದಾಕ್ಷಣ ನೀಗುತ್ತದೆ.

ವಿಕೃತವಾಗಿ ರೋಗ ರೂಪದಲ್ಲಿ ಕಾಡುವ ಅತಿಬಾಯಾರಿಕೆಗೆ ಹಲವು ಕಾರಣಗಳಿವೆ. ತೀವ್ರ ಜ್ವರವಿದ್ದಾಗ ಅತಿಯಾಗಿ ಬೆವರುವುದರಿಂದ ಚರ್ಮದ ಮೂಲಕ, ಪುರುಷಗ್ರಂಥಿಯ ಊತವಿದ್ದಾಗ ಅಥವಾ ಮಧುಮೇಹಿಗಳಲ್ಲಿ ಪದೇಪದೇ ಮೂತ್ರ ಮಾಡುವುದರಿಂದ ಮೂತ್ರ ವಿಸರ್ಜನೆಯ ಮೂಲಕ, ವಾಂತಿಯಿದ್ದಾಗ ಬಾಯಿಯಿಂದ, ಭೇದಿ, ಮೂಲವ್ಯಾಧಿಗಳಿದ್ದಾಗ ಗುದದ್ವಾರದಿಂದ ಹಾಗೂ ತೀವ್ರಗತಿಯ ಉಸಿರಾಟದ ವ್ಯಾಧಿಗಳಲ್ಲಿ ಶ್ವಾಸನಾಳದಿಂದ ದೇಹದ ದ್ರವಾಂಶವು ಕಡಿಮೆಯಾಗುತ್ತದೆ. ಇದು ಧಾತು-ಉಪಧಾತುಗಳ ಪ್ರಮಾಣವನ್ನು ಕ್ಷೀಣಗೊಳಿಸಿ ಅತಿಬಾಯಾರಿಕೆಗೆ ಕಾರಣವಾಗುತ್ತದೆ. ಉಪವಾಸದಿಂದ ದೇಹದಂಡನೆಯಾದರೆ, ಪಚನಕ್ರಿಯೆ ಸರಿಯಾಗಿ ನಡೆಯದೆ ಇದ್ದಾಗ ರಸಧಾತು ಕ್ಷೀಣವಾಗಿಯೂ ಅತಿಬಾಯಾರಿಕೆ ಉಂಟಾಗುತ್ತದೆ. ಅಪಘಾತ ಹಾಗೂ ಗಾಯಗಳಿಂದಲೂ ಶರೀರದ ರಸ ರಕ್ತಗಳು ಹೊರಹೋದಾಗ, ಬೆಂಕಿಯಿಂದ ಸುಟ್ಟ ಗಾಯಗಳಾದಾಗ, ವಿಷ ಸೇವನೆ ಸಂದರ್ಭಗಳಲ್ಲಿ, ತೀವ್ರತೆರನಾದ ರೋಗಗಳಿಂದ ಶರೀರದ ಜಲಾಂಶ ಕಡಿಮೆ ಆದಾಗ ಪಿತ್ತ ಹಾಗೂ ವಾತಗಳು ಉಲ್ಬಣಿಸಿ ಉಷ್ಣತೆ ಹಾಗೂ ಒಣತ್ವ ಹೆಚ್ಚಾಗುತ್ತದೆ. ಇದರಿಂದ ರಕ್ತನಾಳಗಳಲ್ಲಿ, ನಾಲಿಗೆಯ ಬುಡಭಾಗ, ಗಂಟಲು, ಅಂಗುಳ ಪ್ರದೇಶಗಳಲ್ಲಿ ಶುಷ್ಕತೆಯುಂಟಾಗುತ್ತದೆ. ಇದು ತೀವ್ರವಾಗಿದ್ದಾಗ ಎಷ್ಟು ನೀರು ಕುಡಿದರೂ ತೃಪ್ತಿಯೇ ಆಗುವುದಿಲ್ಲ. ದ್ರವಾಹಾರ ಕಡಿಮೆಯಾಗಿ ಅಥವಾ ದೇಹದ ಉಪಧಾತುಗಳ ಅತಿಯಾದ ವಿಸರ್ಜನೆಯಿಂದ -ತೃಷ್ಣಾ ರೋಗಕ್ಕೆ ಎಡೆ ಮಾಡಿಕೊಡುತ್ತದೆ. ಜಲಾಂಶವು ಕಡಿಮೆಯಾಗಿ ಧಾತುಗಳೇ ಜೀರ್ಣಗೊಳ್ಳಲು ಪ್ರಾರಂಭವಾದರೆ ತೊಂದರೆಯು ಅತಿರೇಕಕ್ಕೆ ಹೋಗಬಹುದು.

ಬಾಯಿ ಒಣಗಿ, ನಿರಂತರವಾಗಿ ನೀರು ಕುಡಿಯುವ ಬಯಕೆ ಪ್ರಾರಂಭದಲ್ಲೇ ಕಾಣಿಸಿಕೊಳ್ಳುತ್ತದೆ. ಒಡಕುಸ್ವರ, ತಲೆ ತಿರುಗುವುದು, ಮೈಉರಿ, ಅಸಂಬದ್ಧ ಮಾತು, ದೇಹದ ಬಿಗಿತ, ಅಂಗುಳ, ತುಟಿ, ಗಂಟಲು, ನಾಲಿಗೆಗಳು ಒಣಗುವುದು, ಏಕಾಗ್ರತೆ ಇಲ್ಲದಿರುವುದು, ನಾಲಿಗೆ ಚಾಚುವುದು, ಬಾಯಿರುಚಿ ಇಲ್ಲದಿರುವುದು, ಕಿವಿಕೇಳಿಸದಿರುವುದು, ಹೃದಯ ಹಾಗೂ ಶಿರಸ್ಸು ಬಾಧೆ ಅತಿಬಾಯಾರಿಕೆಯ ಮುಖ್ಯ ಲಕ್ಷಣಗಳು. ವಾತಜ ತೃಷ್ಣಾ: ವಾತದಿಂದಾಗಿ ದೇಹದಲ್ಲಿರುವ ಜಲಾಂಶವು ಕಡಿಮೆಯಾಗಿ ಅತಿಬಾಯಾರಿಕೆಯಾಗುತ್ತದೆ. ನಿದ್ರಾಹೀನತೆ, ತಲೆಸುತ್ತುವುದು, ಬಾಯಿರುಚಿ ಇಲ್ಲದಿರುವುದು, ಬಾಯಿ ಒಣಗುವುದು, ಸೂಕ್ಷ್ಮ ನಾಡಿಗಳಲ್ಲಿ ಪರಿಚಲನೆಗೆ ತಡೆಯಾಗುವುದು. ತಣ್ಣೀರು ಕುಡಿದರೆ ಬಾಯಾರಿಕೆ ಮತ್ತಷ್ಟು ಹೆಚ್ಚಾಗುವುದು. ಪಿತ್ತಜ ತೃಷ್ಣಾ: ಪಿತ್ತವು ಅಗ್ನಿಯ ಜತೆಗೂಡಿ ಅನ್ನನಾಳದಲ್ಲಿ ತೀವ್ರ ಉರಿ, ಕಹಿರುಚಿ, ತಲೆಉರಿ, ತಂಪಾದ ಅನ್ನಪಾನಾದಿಗಳ ಇಚ್ಛೆ, ಎಚ್ಚರ ತಪ್ಪುವುದು, ಕಣ್ಣು, ಮಲ, ಮೂತ್ರಗಳು ಹಳದಿಯಾಗುವುದು, ಆಹಾರ ಬೇಡವೆನಿಸುವುದು, ಅಸಂಬದ್ಧ ಮಾತು, ಕಣ್ಣು ಕೆಂಪಾಗುವುದು, ತೀವ್ರ ಬಾಯಾರಿಕೆ ಉಂಟಾಗುವುದು. ಕಫಜ ತೃಷ್ಣಾ: ಹೆಚ್ಚಾದ ಕಫದೋಷದಿಂದಾಗಿ ಬಾಷ್ಪದ ಚಲನೆಗೆ ತಡೆಯೊಡ್ಡಿ ನಿದ್ರೆ, ಬಾಯಿ ಸಿಹಿಯಾಗುವುದು, ಶರೀರ ಭಾರವಾದ ಅನುಭವದೊಂದಿಗೆ ಅತಿ ಬಾಯಾರಿಕೆಯಾಗುವುದು. ಆಮಜ ತೃಷ್ಣಾ: ಸರಿಯಾಗಿ ಜೀರ್ಣವಾಗದೆ ಉಂಟಾಗುವ ಆಮದಿಂದ ಬಾಯಿರುಚಿ ಇಲ್ಲದಿರುವುದು, ಹೊಟ್ಟೆಉಬ್ಬರ, ಅತಿಲಾಲಾಸ್ರಾವ, ಉಗುಳುವುದು, ಎದೆನೋವು, ಮೈಕೈ ನೋವು ಇರುವುದು. ಕ್ಷಯಜ ತೃಷ್ಣಾ: ರಸಧಾತು ಕ್ಷಯದಿಂದಾಗಿ ದೀನಸ್ವರ,

ಕಣ್ಣುಕತ್ತಲು ಬರುವುದು, ಹೃದಯ, ಅಂಗುಳ, ಗಂಟಲು ಒಣಗಿದ ಅನುಭವ, ಹೃದಯ ಪೀಡನೆ, ನಡುಕ, ಬಲಹೀನತೆ ಉಂಟಾಗುವುದು. ಕ್ಷತಜ ತೃಷ್ಣಾ: ಗಾಯ, ಅಪಘಾತಗಳಿಂದಾಗುವ ರಕ್ತಸ್ರಾವದ ಪರಿಣಾಮ. ಭಕ್ತೋದ್ಭವ ತೃಷ್ಣಾ: ಅತಿಯಾದ ಜಿಡ್ಡು, ಹುಳಿ, ಉಪ್ಪು, ಆಹಾರ ಜೀರ್ಣವಾಗದೆ ಅತಿಬಾಯಾರಿಕೆ. ಉಪಸರ್ಗಜ ತೃಷ್ಣಾ: ಜ್ವರ, ಮಧುಮೇಹ, ಮೂತ್ರದ ಸೋಂಕು, ಕ್ಷಯರೋಗ, ಅಸ್ತಮಾ ಮೊದಲಾದ ರೋಗಗಳಿಂದಾಗುವ ಅತಿಬಾಯಾರಿಕೆ. ಇವೆಲ್ಲವುಗಳಿಗೆ ಸುಲಭದ ಪರಿಹಾರ ತಿಳಿದುಕೊಳ್ಳುವುದು ಅಪೇಕ್ಷಣೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net