ಶ್ರದ್ಧಾ, ಭಕ್ತಿಯಿಂದ ರಂಜಾನ್ ಆಚರಣೆ

Published on

ಬೀರೂರು: ರಾಷ್ಟ್ರೀಯ ಹೆದ್ದಾರಿ 206ರ ಬದಿಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಗುರುವಾರ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಶ್ರದ್ಧಾ, ಭಕ್ತಿಯಿಂದ ರಂಜಾನ್ ಆಚರಿಸಿದರು.
ಹಳೇಪೇಟೆಯ ಜಾಮಿಯಾ ಮಸೀದಿಯ ಮುಸಲ್ಮಾನರು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಅಂಜುಮಾನ್ ಮಸೀದಿ, ಬಳ್ಳಾರಿ ಕ್ಯಾಂಪ್‌ನ ಮೆಕ್ಕಾ ಮಸೀದಿ, ಹಾಲಪ್ಪ ಬಡಾವಣೆಯ ಮದೀನಾ ಮಸೀದಿಯ ಬಹಳಷ್ಟು ಅನುಯಾಯಿಗಳು ತಮ್ಮ ಮಸೀದಿಗಳಿಂದ ಮೆರವಣಿಗೆಯಲ್ಲಿ ಮಹಾತ್ಮ ಗಾಂಧಿ ವೃತ್ತದವರೆಗೆ ಬಂದು ಅಲ್ಲಿಂದ ಒಗ್ಗೂಡಿ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮಕ್ಕಳು, ಪುರುಷರು ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು. ಹಬ್ಬದ ಅಂಗವಾಗಿ ಮನೆಗಳಲ್ಲಿ ವಿಶೇಷ ಅಡುಗೆ ತಯಾರಿಸಿ ಮನೆಯವರೆಲ್ಲಾ ಹೊಸ ವಸ, ಆಭರಣಗಳನ್ನು ಧರಿಸಿ ರಂಜಾನ್‌ನ ಅಂಗವಾಗಿ ದಾನ, ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು.
ಸುಡುಬಿಸಿಲು ಇದ್ದರಿಂದ ಪ್ರಾರ್ಥನೆಗೆ ಅನುಕೂಲವಾಗಲಿ ಎಂದು ಈದ್ಗಾ ಮೈದಾನದಲ್ಲಿ ಶಾಮಿಯಾನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೀರೂರು ಪೊಲೀಸರು ಶಾಂತಿಯುತ ಹಬ್ಬದ ಆಚರಣೆಗೆ ಭದ್ರತೆ ಒದಗಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net