

ತೆಲಂಗಾಣ: ಈ ಬಾರಿ ಕರೊನಾ ವೈರಸ್ ಇರುವುದರಿಂದ ಈದ್ ಉಲ್ ಅಧಾ ಸಭೆಗಳನ್ನು ನಡೆಸಲು ಅವಕಾಶ ಇಲ್ಲ. ಈದ್ಗಾ ಹಾಗೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು ಎಂದು ಕೇಂದ್ರ, ರಾಜ್ಯ ಸರ್ಕಾರಗಳು ಹೇಳಿವೆ. ಅಲ್ಲದೆ, ಸಮುದಾಯದ ಕೆಲವು ಮುಖಂಡರೂ ಕೂಡ ಇದೇ ಸಂದೇಶ ನೀಡುತ್ತಿದ್ದಾರೆ.
ಆದರೆ ತೆಲಂಗಾಣದಲ್ಲಿ ಈ ನಿಯಮದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಈದ್ ಹಬ್ಬದಂದು ಈದ್ಗಾ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರರ್ಥನೆ ಮಾಡಲು ಅವಕಾಶ ಇರುವುದಿಲ್ಲ. ಆದರೆ ಕೆಲವು ನಿರ್ಬಂಧನೆ, ನಿಯಂತ್ರಣಾ ಕ್ರಮಗಳೊಂದಿಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಹುದು ಎಂದು ತೆಲಂಗಾಣ ವಕ್ಫ್ ಬೋರ್ಡ್ ತಿಳಿಸಿದೆ. ಇದನ್ನೂ ಓದಿ: ಇಂದು ಸೋನಿಯಾ ಗಾಂಧಿ ನಡೆಸಿದ ಸಭೆಯಲ್ಲೂ ಮತ್ತದೇ ‘ರಾಗಾ’: ರಾಹುಲ್ ಗಾಂಧಿ ನಿರ್ಧಾರವೊಂದೇ ಬಾಕಿ
ಆಗಸ್ಟ್ 1ರಂದು ಆಚರಿಸಲಿರುವ ಈದ್ನಂದು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ವಕ್ಫ್ ಬೋರ್ಡ್ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ ಯಾವುದೇ ಮಸೀದಿಯಲ್ಲಾದರೂ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಸಾಮಾಜಿಕ ಅಂತರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲೇಬೇಕು ಎಂದು ಗೈಡ್ಲೈನ್ಸ್ನಲ್ಲಿ ಸೂಚಿಸಿದೆ.
ಹಾಗೇ, ಹಿರಿಯ ನಾಗರಿಕರು ಮತ್ತು 10 ವರ್ಷದ ಕೆಳಗಿನ ಮಕ್ಕಳು ಮಸೀದಿಗೆ ಬರುವುದು ಬೇಡ ಎಂದು ಕೂಡ ವಕ್ಫ್ ಬೋರ್ಡ್ ತಿಳಿಸಿದೆ. ಅಷ್ಟೇ ಅಲ್ಲ, ಶೀತ, ಜ್ವರ, ಕೆಮ್ಮು, ಡಯಾಬಿಟಿಸ್, ಬಿಪಿ ಮತ್ತಿತರ ಸಮಸ್ಯೆ ಇದ್ದವರೂ ಮಸೀದಿಗೆ ಬರದೆ, ಮನೆಯಲ್ಲೇ ಪ್ರಾರ್ಥನೆ ಮಾಡಿ ಎಂದು ಹೇಳಿದೆ. (ಏಜೆನ್ಸೀಸ್)