

ವಿಚಾರವೇ ಈ ಅಹಂ ಅಂಶವನ್ನು ತೊರೆಯುವುದು. ಈ ಕಾರಣದಿಂದಲೇ ಭಕ್ತ ಕನಕ, ವ್ಯಾಸರಾಯರ ಪ್ರಶ್ನೆಗೆ ‘ಸ್ವರ್ಗಕ್ಕೆ ‘ನಾನು’ ಹೋದರೆ ಹೋದೇನು’ ಎಂದಿದ್ದು. ಅಹಂ ಇದ್ದವನು ಅಧ್ಯಾತ್ಮ ಪಥದಲ್ಲಿ ಪಥಿಸಲು ಅರ್ಹನಲ್ಲ ಎನ್ನಬಹುದು. ಈ ಅಹಂ ಹೇಗೆ ಮನುಷ್ಯನನ್ನು ಆವರಿಸಿಕೊಂಡು ಬಿಡುತ್ತದೆಯೆಂದರೆ ಆ ಮನುಷ್ಯನಿಗೆ, ಸಾಧಕನಿಗೆ, ಅಧ್ಯಾತ್ಮ ಜೀವಿಗೆ ಇದರ ಅರಿವು ಗೊತ್ತಾಗುವುದಿಲ್ಲ. ಅಹಂ ಬಹಳ ವಿನಾಶಕಾರಿ. ಇದನ್ನು ಅರಿತು ಸಂಪೂರ್ಣ ಶರಣಾಗತಿ ಹೊಂದಿದಲ್ಲಿ ಮಾತ್ರ ಮನುಷ್ಯ ಅಧ್ಯಾತ್ಮ ಪಥದಲ್ಲಿ ಪಥಿಸಬಹುದು.
ಅಧ್ಯಾತ್ಮ ಜೀವನವಿರಲಿ, ಪ್ರಾಪಂಚಿಕ ಜೀವನದಲ್ಲಿಯೂ ಈ ಅಹಂ ಅತ್ಯಂತ ವಿಷಮಯವಾದ ಪಾತ್ರ ವಹಿಸಿ ಮನುಷ್ಯನನ್ನು ಮೃಗವಾಗಿಸುತ್ತದೆ. ಯಾವಾಗ ಈ ಅಹಂ ಸಂಪೂರ್ಣವಾಗಿ ತ್ವಂ ಆಗಿ ಪರಿವರ್ತಿಸಲ್ಪಡುತ್ತದೆಯೋ ಆಗಲೇ ಮುಕ್ತಿಯ ಪಥಕ್ಕೆ ರಹದಾರಿ ಎನ್ನಬಹುದು. ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಅಹಂಕಾರದ ಬಗ್ಗೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಭೋಧಿ ಸುತ್ತಾರೆ. ಭಗವಂತನ ದರ್ಶನವೇಕೆ ದೊರೆ ಯುತ್ತಿಲ್ಲ ಎನ್ನುವುದಕ್ಕೆ ಅಹಂಕಾರವೆಂಬ ತೊಡಕು ಕಾರಣ ಎನ್ನುತ್ತಾರೆ.
ಅವರ ಮಾತುಗಳು ಹೀಗಿವೆ: ಅಹಂಕಾರ ಇರುವುದರಿಂದಲೇ ಮನುಷ್ಯನಿಗೆ ಭಗವದ್ದರ್ಶನ ಆಗುತ್ತಿಲ್ಲ. ಭಗವದಾಲಯದ ದ್ವಾರದಲ್ಲಿಯೇ ಈ ಅಹಂಕಾರವೆಂಬ ದೊಡ್ಡ ದಿಮ್ಮಿ ಬಿದ್ದುಕೊಂಡಿದೆ. ಇದನ್ನು ದಾಟಿ ಹೋಗದೇ ಇದ್ದರೆ ಭಗವಂತನ ಆಲಯವನ್ನು ಪ್ರವೇಶ ಮಾಡಲಾಗುವುದಿಲ್ಲ. ಈ ಅಹಂಕಾರ ಮರ್ದನ ಮಾಡದೆಯೇ ಮನುಷ್ಯ ಸುಖವಾಗಿ, ನೆಮ್ಮದಿಯಾಗಿರಲು ಅಸಾಧ್ಯ.
ರಾಮಕೃಷ್ಣರು ನೀಡುವ ಉದಾಹರಣೆ ನೋಡಿ: ಒಬ್ಬನಿಗೆ ಭೂತಸಿದ್ಧಿ ದೊರೆತಿತ್ತು. ಒಂದು ದಿನ ಆತನ ಇಚ್ಛೆಗನುಸಾರ ಒಂದು ಭೂತ ಆತನ ಹತ್ತಿರಕ್ಕೆ ಬಂತು. ‘ನಾನು ಏನು ಕೆಲಸ ಮಾಡಬೇಕಾಗಿದೆ ಎಂಬುದನ್ನು ತಿಳಿಸು, ನನಗೆ ನೀನು ಸಾಕಷ್ಟು ಕೆಲಸ ಕೊಡದಿದ್ದರೆ, ನಿನ್ನ ಕತ್ತು ಮುರಿದು ಹಾಕಿಬಿಡುತ್ತೇನೆ’ ಎಂದಿತು. ಏನೇನು ಕೆಲಸ ಆಗಬೇಕಾಗಿತ್ತೊ, ಆ ಕೆಲಸಗಳನ್ನೆಲ್ಲ ಆ ವ್ಯಕ್ತಿ ಆ ಭೂತದ ಕೈಯಿಂದ ಮಾಡಿಸಿಬಿಟ್ಟ. ಬಳಿಕ ಭೂತಕ್ಕೆ ಬೇರೆ ಯಾವ ಕೆಲಸವೂ ದೊರೆಯಲಿಲ್ಲ. ಆಗ ಆ ಭೂತ ಮತ್ತೆ ‘ಈಗ ನಿನ್ನ ಕತ್ತು ಮುರಿಯುವೆ’ ಎಂದಿತು. ಆ ವ್ಯಕ್ತಿ ‘ಒಂದು ನಿಮಿಷ ನಿಲ್ಲು, ಈಗಲೇ ಬರುತ್ತೇನೆ’ ಎಂದ. ಆತ ತನ್ನ ಗುರುವಿನ ಹತ್ತಿರಕ್ಕೆ ಹೋಗಿ ಪರಿಸ್ಥಿತಿ ವಿವರಿಸಿದ. ಗುರು ಒಂದು ಸಲಹೆ ನೀಡಿದ. ‘ಈ ತಿರುಚುಮುರುಚು ಕೂದಲನ್ನು ನೆಟ್ಟಗೆ ಮಾಡುವಂತೆ ಅದಕ್ಕೆ ಹೇಳು’ ಎಂಬುದೇ ಆ ಸಲಹೆ. ನಂತರ ಆ ಭೂತ ಹಗಲಿರುಳೆನ್ನದೆ ಆ ಕೂದಲನ್ನು ನೆಟ್ಟಗೆ ಮಾಡುವ ಕಾರ್ಯದಲ್ಲಿ ತೊಡಗಿತು. ಕೂದಲು ಎಂದಿಗಾದರೂ ನೆಟ್ಟಗಾಗುವುದೇ? ಅದು ಮೊದಲಿನ ಹಾಗೆಯೇ ಉಳಿದುಕೊಂಡಿತು.
ಈ ಉಪಮೆಯಿಂದ ‘ಅಹಂ’ ತೊರೆಯಲು ಎಷ್ಟು ಶ್ರಮಪಡಬೇಕು ಎಂಬುದನ್ನು ಅರಿಯಬಹುದಾಗಿದೆ.ಮನಸ್ಸು ಅತ್ಯಂತ ಶಿಸ್ತುಬದ್ದವಾಗಿ ಸಂಪೂರ್ಣ ಶರಣಾಗತಿ ಹೊಂದಿದಾಗಲೇ ಅಹಂ ಎಂಬ ಪೆಡಂಭೂತ ತೊಲಗುತ್ತದೆ.ಈ ಅಹಂನ ದುಃಷ್ಪರಿಣಾಮಗಳಿಂದ ಯುದ್ಧಗಳು, ಮಹಾಯುದ್ಧಗಳು ನಡೆದಿವೆ, ನಡೆಯುತ್ತಿವೆ. ಈ ಈ ಕಾರಣದಿಂದಲೇ ಸಾಧು ಸಂತರು, ಮಹಾತ್ಮರು, ಮಹಾನ್ ಭಕ್ತರು ಸುಲಭೋಪಾಯವನ್ನು ಕಂಡುಕೊಂಡಿರುತ್ತಾರೆ. ಅದೇ ಪೂರ್ಣ ಶರಣಾಗತಿ, ‘ತೇನವಿನಾ ತೃಣಮಪಿ ನ ಚಲತಿ’
ಎಂಬ ಭಾವ. ಅಧ್ಯಾತ್ಮ ಜೀವನಕ್ಕಂತೂ ಅಹಂಕಾರ ಒಂದು ಬಹುದೊಡ್ಡ ತೊಡಕು. ಪರಮಹಂಸರ ಪ್ರಕಾರ ಈ ಮಹಾನ್ ಶತ್ರುವನ್ನು ನಾಶಪಡಿಸುವ ಅತಿ ಸುಲಭ ಮಾರ್ಗವೆಂದರೆ ಶರಣಾಗತಿ. ನಿಜ, ಭವತಾರಿಣಿಯಲ್ಲಿ ಸಂಪೂರ್ಣ ಶರಣಾಗತಿ ಹೊಂದಿದಾಗ ಮಾತ್ರವೇ ಈ ಅಹಂಕಾರವೆಂಬುದು ನಾಶವಾಗುತ್ತದೆ. ಭಗವದ್ ಶಕ್ತಿಯಲ್ಲಿ ಸಂಪೂರ್ಣ ತನ್ನನ್ನೇ ತಾನು ಸಮರ್ಪಿಸಿಕೊಂಡು ಜೀವನದಲ್ಲಿ ನಡೆಯುತ್ತಿರುವುದೆಲ್ಲಾ ನಿನ್ನ ಇಚ್ಛೆ, ‘ನಾಹಂ ಕರ್ತಾಃ ಹರಿಃ ಕರ್ತಾ’ ಎಂಬ ಭಾವನೆಯಿಂದ ಸಂಪೂರ್ಣ ಶರಣಾಗತಿ ಹೊಂದಿದಲ್ಲಿ ಮುಕ್ತಿಯ ಪಥ ಪಡೆದಂತೆಯೇ ಸರಿ.
(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)
(ಪ್ರತಿಕ್ರಿಯಿಸಿ: vvsudina@gmail.com, swajapa@gmail.com)