ಪೀಣ್ಯ ಮೇಲ್ಸೇತುವೆ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತ: ಆದರೆ ಕಂಡೀಷನ್ಸ್ ಅಪ್ಲೈ!

penya
Published on

ಬೆಂಗಳೂರು: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಶೀಘ್ರದಲ್ಲೇ ಪೀಣ್ಯ ಮೇಲ್ಸೇತುವೆ ಮೇಲೆ ಎಲ್ಲ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಸಿಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಟ್ರಾಫಿಕ್ ಪೊಲೀಸರು ಈ ಬಗ್ಗೆ ಮಹತ್ವದ ಮಾಹಿತಿ ಪ್ರಕಟಿಸಿದ್ದಾರೆ.

ನಗರದ ಪೀಣ್ಯ ಮೇಲ್ಸೇತುವೆಯಲ್ಲಿ ಸದ್ಯ ಲಘು ವಾಹನಗಳು ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಜುಲೈ 29 ಸೋಮವಾರದಿಂದ ಪೀಣ್ಯ ಫ್ಲೈಓವರ್​​ ಭಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದ್ದು, ಬಸ್, ಲಾರಿ, ಟ್ರಕ್ ಸೇರಿದಂತೆ ಭಾರೀ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿದೆ. ಇದರಿಂದ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸ ಗೈಡ್‌ಲೈನ್ಸ್ ಏನು? : ಜುಲೈ 29ರಿಂದ ಪೀಣ್ಯ ಪ್ಲೇಓವರ್​ ಮೇಲೆ ಬೆಳಗ್ಗೆ, ರಾತ್ರಿ ವೇಳೆ ನಗರ ಪ್ರವೇಶಿಸುವ, ನಗರದಿಂದ ನಿರ್ಗಮಿಸುವ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಭಾರಿ ವಾಹನಗಳು ಮೇಲ್ಸೇತುವೆಯಲ್ಲಿ ಎಡಭಾಗದಲ್ಲಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಸಂಚಾರ ಮಾಡಬೇಕು. ಪೀಣ್ಯ ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಎಲ್ಲಾ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ.

ಸಿಮೆಂಟ್ ಗ್ರೌಟಿಂಗ್ ಕೆಲಸದ ಸಮಯದಲ್ಲಿ ಕಂಪನಗಳನ್ನು ತಡೆಗಟ್ಟಲು ಭಾರೀ ವಾಹನಗಳು ವಾರಕ್ಕೊಮ್ಮೆ (ಶುಕ್ರವಾರ ಬೆಳಿಗ್ಗೆ 6 ರಿಂದ ಶನಿವಾರ ಬೆಳಿಗ್ಗೆ 6 ರವರೆಗೆ) ಮೇಲ್ಸೇತುವೆ ಬಳಸುವುದನ್ನು ನಿಷೇಧಿಸಲಾಗಿದೆ. ಉಳಿದ 6 ದಿನವೂ ಸಂಚಾರಕ್ಕೆ ಅವಕಾಶ ಕೊಟ್ಟು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ.

2021ರ ಡಿಸೆಂಬರ್‌ನಲ್ಲಿ ಪೀಣ್ಯ ಫ್ಲೈಓವರ್‌ನ 102-103ರ ಪಿಲ್ಲರ್‌ ನಡುವಿನ 5 ಕೇಬಲ್‌ ಬಾಗಿದ್ದರಿಂದ ಸಮಸ್ಯೆ ಆಗಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ಎಲ್ಲ ಬಗೆಯ ವಾಹನಗಳನ್ನು ನಿಷೇಧಿಸಿತ್ತು. ಬಳಿಕ 2022ರ ಫೆಬ್ರವರಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ, ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್‌ ಹಾಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net