

ಶಿಕಾರಿಪುರ: ಜನರ ಮನಸ್ಸಿನ ಕಲ್ಮಶ ತೊಳೆದು ಸರ್ವರಲ್ಲಿಯೂ ಸಹೃದಯತೆ ಮತ್ತು ಸದ್ವಿಚಾರಗಳನ್ನು ಮೂಡಿಸಲು ಪ್ರಯತ್ನಿಸಿದ ಮಾನವತಾವಾದಿ ಬಸವಣ್ಣ ಎಂದು ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೀರೇಂದ್ರ ತಿಳಿಸಿದರು. ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ 12ನೇ ಶತಮಾನದ ತತ್ವಜ್ಞಾನಿ. ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದರು. ಅವರ ವಚನಗಳಲ್ಲಿರುವ ಸಾರ ಸಾರ್ವಕಾಲಿಕ ಸತ್ಯ. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ಕೊಟ್ಟು ಸಮಾಜದಲ್ಲಿ ಜಾತಿ ಪದ್ಧತಿ ಹೋಗಲಾಡಿಸಲು ಅಂದಿನ ಕಾಲದಲ್ಲೇ ಪ್ರಯತ್ನಿಸಿದ್ದರು. ಅನುಭವ ಮಂಟಪದಲ್ಲಿ ಜಾತಿಗೆ ಒಬ್ಬರಂತೆ ಪ್ರತಿನಿಧಿಯನ್ನು ಆಯ್ಕೆ ಮಾಡಿ ಸಮಾಜದಲ್ಲಿ ಸಮಾನತೆ ಸಾರುವ ಪ್ರಯತ್ನ ಮಾಡಿದ್ದರು ಎಂದು ತಿಳಿಸಿದರು. ಉಪನ್ಯಾಸಕರಾದ ಯೋಗರಾಜ್, ಚಂದ್ರಶೇಖರ್, ದೇವರಾಜ್ ಇತರರಿದ್ದರು.