ತಾಲೂಕು ಅಭಿವೃದ್ಧಿಗೆ ಶ್ರಮಿಸಿದ ಚಿಕ್ಕಮಾದು

17 HDK 01
Published on

ಎಚ್.ಡಿ.ಕೋಟೆ: ತಾಲೂಕಿನಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸಿದ ಕೀರ್ತಿ ಮಾಜಿ ಶಾಸಕ ದಿ.ಎಸ್.ಚಿಕ್ಕಮಾದು ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸೀಪುರ ರವಿ ಹೇಳಿದರು.


ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿರುವ ಶಾಸಕರ ಕಚೇರಿಯಲ್ಲಿ ದಿ.ಎಸ್.ಚಿಕ್ಕಮಾದು ಅಭಿಮಾನಿ ಬಳಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಹಾಗೂ ಜಿಲ್ಲಾ ಎಸ್ಸಿ, ಎಸ್ಟಿ ಜಾಗೃತಿ ಸಮಿತಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದರು.


ದಿ.ಎಸ್.ಚಿಕ್ಕಮಾದು ಅವರು ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಎಂದು ಕೂಡ ದ್ವೇಷದ ರಾಜಕೀಯ ಮಾಡಲಿಲ್ಲ. ಜೆಡಿಎಸ್ ಪಕ್ಷದ ಶಾಸಕರಾಗಿದ್ದರೂ ಕಾಂಗ್ರೆಸ್ ಪಕ್ಷದ ಸಂಸದ ದಿ.ಆರ್.ಧ್ರುವನಾರಾಯಣ ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದು ತಾಲೂಕು ಅಭಿವೃದ್ಧಿಗೆ ಮುಂದಾಗಿದ್ದರು ಎಂದು ಹೇಳಿದರು.


ಚಿಕ್ಕಮಾದು ಅವರು ತಾಲೂಕಿನಲ್ಲಿ ಎಲ್ಲ ವರ್ಗದ ಜತೆ ಒಡನಾಟ ಇಟ್ಟುಕೊಂಡು ಉತ್ತಮ ಆಡಳಿತ ಮಾಡಿದರು. ಅಂದು ಅವರು ಮಾಡಿದ ಸೇವೆ ಇಂದು ಅನಿಲ್ ಚಿಕ್ಕಮಾದು ಅವರು ಎರಡು ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಲು ಕಾರಣವಾಯಿತು. ಅನಿಲ್ ಚಿಕ್ಕಮಾದು ಅವರು ತಂದೆ ಹಾದಿಯಲ್ಲಿ ನಡೆದು ಎಲ್ಲ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದರ ಜತೆಗೆ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೋಗಲಾಡಿಸಲು ಶ್ರಮಿಸುತ್ತಿದ್ದಾರೆ ಎಂದರು.


ದಿ.ಎಸ್.ಚಿಕ್ಕಮಾದು ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಜಿನ್ನಹಳ್ಳಿ ರಾಜನಾಯಕ ಮಾತನಾಡಿ, ಚಿಕ್ಕಮಾದು ಅವರು ಶಾಸಕರಾಗಿದ್ದ ಕೊನೆಯ ಅವಧಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೂ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದರು. ಅವರ ಕುಟುಂಬ ರಾಜಕೀಯವಾಗಿ ಬೆಳವಣಿಗೆ ಆಗಬೇಕು ಎಂಬ ಉದ್ದೇಶದಿಂದ ಅವರ ಹೆಸರಿನಲ್ಲಿ ಸಂಘವನ್ನು ಕಟ್ಟಿದ್ದೇವೆ. ಅವರ ಕುಟುಂಬಕ್ಕೆ ಯಾವುದೇ ಚ್ಯುತಿ ಬಾರದಂತೆ ನಡೆಸಿಕೊಂಡು ಬರಲಾಗಿದೆ ಎಂದು ತಿಳಿಸಿದರು.


ದಿ.ಎಸ್.ಚಿಕ್ಕಮಾದು ಅಭಿಮಾನಿ ಬಳಗದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸಿಂಡಿಕೇಟ್ ಸದಸ್ಯರಾದ ಕ್ಯಾತನಹಳ್ಳಿ ನಾಗರಾಜು ಹಾಗೂ ಜಿಲ್ಲಾ ಎಸ್‌ಸಿ, ಎಸ್ಟಿ ಜಾಗೃತಿ ಸಮಿತಿ ಸದಸ್ಯ ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.
ನಾಗಮ್ಮ, ಕ್ಯಾತನಹಳ್ಳಿ ನಾಗರಾಜು, ಶಂಭುಲಿಂಗನಾಯಕ, ಅಂಕಪ್ಪ, ಪರಶಿವಮೂರ್ತಿ, ನಾಗರಾಜು, ಮಂಜುನಾಥ್, ರಾಜು ಬಿದರಹಳ್ಳಿ, ಪಿ.ರವಿ, ಸೀತಾರಾಮ್, ನರಸಿಂಹಮೂರ್ತಿ, ಪ್ರಭುಸ್ವಾಮಿ, ಪ್ರದೀಪ್, ವೇಣುಗೋಪಾಲ್, ಧನಂಜಯ, ಮಹೇಶನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net