

ಮುಂಬೈ: ಕಡಿಮೆ ಹಣದುಬ್ಬರ ಅಂಕಿ-ಅಂಶಗಳ ಕಾರಣದಿಂದಾಗಿ, ಆರ್ಬಿಐ ಬಡ್ಡಿ ದರ ಕಡಿತದ ಭರವಸೆಯನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಈಕ್ವಿಟಿ ಬೆಂಚ್ವಾರ್ಕ್ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಹೊಸ ದಾಖಲೆ ಮಟ್ಟವನ್ನು ಮುಟ್ಟಿದವು.
ಇದಲ್ಲದೆ, ಬಂಡವಾಳ ಸರಕುಗಳು, ಗ್ರಾಹಕ ಉತ್ಪನ್ನಗಳು ಮತ್ತು ಕೈಗಾರಿಕಾ ಷೇರುಗಳಲ್ಲಿನ ಭಾರೀ ಖರೀದಿಯು ಸೂಚ್ಯಂಕ ಹೆಚ್ಚಳಕ್ಕೆ ಸಹಾಯ ಮಾಡಿತು. ಆಹಾರ ಸಾಮಗ್ರಿಗಳ ಬೆಲೆ ಅಲ್ಪ ಇಳಿಕೆಯಿಂದಾಗಿ ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಒಂದು ವರ್ಷದ ಕನಿಷ್ಠ ಮಟ್ಟವಾದ ಶೇ. 4.75ಕ್ಕೆ ತಲುಪಿತು. ಇದು ಆರ್ಬಿಐ ನಿಗದಿಪಡಿಸಿರುವ ಶೇ. 6ರ ಮಿತಿಯೊಳಗೆ ಇದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಗುರುವಾರ ಸತತ ಎರಡನೇ ದಿನವೂ ಏರಿಕೆ ಕಂಡಿರುವ 30-ಷೇರುಗಳ ಬಿಎಸ್ಇ ಸೂಚ್ಯಂಕ ದಿನದ ವಹಿವಾಟಿನಲ್ಲಿ 538.89 ಅಂಕ ಅಥವಾ ಶೇ.0.70 ಜಿಗಿದು ಈವರೆಗಿನ ಗರಿಷ್ಠ ಮಟ್ಟವಾದ 77,145.46ನ್ನು ತಲುಪಿತ್ತು. ಅಂತಿಮವಾಗಿ 204.33 ಅಂಕ ಅಥವಾ ಶೇ. 0.27ರಷ್ಟು ಏರಿಕೆಯಾಗಿ 76,810.90ರಲ್ಲಿ ಕೊನೆಗೊಂಡಿತು. ಬಿಎಸ್ಇಯಲ್ಲಿ 2,345 ಷೇರುಗಳ ಬೆಲೆ ಏರಿಕೆ ಕಂಡರೆ, 1,539 ಷೇರುಗಳ ದರ ಕುಸಿಯಿತು. 100 ಷೇರುಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.
ಎನ್ಎಸ್ಇ ನಿಫ್ಟಿ 50 ಸೂಚ್ಯಂಕ 75.95 ಅಂಕ ಅಥವಾ ಶೇ 0.33ರಷ್ಟು ಏರಿಕೆ ಕಂಡು 23,398.90ರ ಹೊಸ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನಲ್ಲಿ ಇದು 158.1 ಅಂಕ ಅಥವಾ ಶೇ. 0.67 ಏರಿಕೆಯಾಗಿ ತನ್ನ ದಾಖಲೆಯ ಗರಿಷ್ಠ ಮಟ್ಟವಾದ 23,481.05 ಮುಟ್ಟಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಬುಧವಾರ 426.63 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. ಬುಧವಾರ ಬಿಎಸ್ಇ 149.98 ಅಂಕ ಅಥವಾ ಶೇ. 0.20ರಷ್ಟು ಏರಿಕೆಯಾಗಿ 76,606.57 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕ 58.10 ಅಂಕ ಅಥವಾ ಶೇ. 0.25ರಷ್ಟು ಏರಿಕೆಯಾಗಿ 23,322.95ಕ್ಕೆ ಮುಟ್ಟಿತ್ತು.
ಯಾವುದು ಏರಿಕೆ?: ಪ್ರಮುಖ ಷೇರುಗಳ ಪೈಕಿ ಮಹೀಂದ್ರಾ ಆಂಡ್ ಮಹೀಂದ್ರಾ, ಟೈಟನ್, ಲಾರ್ಸೆನ್ ಅಂಡ್ ಟೂಬ್ರೊ, ಇಂಡಸ್ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ವಿಪೋ›, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಬಜಾಜ್ ಫೈನಾನ್ಸ್ ಮತ್ತು ನೆಸ್ಲೆ ಅತಿ ಹೆಚ್ಚು ಲಾಭ ಗಳಿಸಿದವು. ಹಿಂದುಸ್ತಾನ್ ಯೂನಿಲಿವರ್, ಪವರ್ ಗ್ರಿಡ್, ಆಕ್ಸಿಸ್ ಬ್ಯಾಂಕ್, ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಷೇರುಗಳ ಬೆಲೆಗಳು ಕುಸಿತ ದಾಖಲಿಸಿದವು.
ವಿದೇಶಿ ಮಾರುಕಟ್ಟೆ: ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್ ಮತ್ತು ಹಾಂಗ್ಕಾಂಗ್ ಲಾಭದಲ್ಲಿ ಮುಂದುವರಿದರೆ, ಟೋಕಿಯೊ ಮತ್ತು ಶಾಂಘೖ ಕುಸಿತ ಕಂಡವು. ಐರೋಪ್ಯ ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಸಿದವು. ಅಮೆರಿಕ ಮಾರುಕಟ್ಟೆಗಳು ಬುಧವಾರ ರಾತ್ರಿಯ ವಹಿವಾಟಿನಲ್ಲಿ ಹೆಚ್ಚಿನ ಲಾಭ ದೊಂದಿಗೆ ಕೊನೆ ಗೊಂಡವು.
ತಾಳೆ ಎಣ್ಣೆ ಆಮದು ಶೇ. 74ರಷ್ಟು ಹೆಚ್ಚಳ: ಭಾರತದ ತಾಳೆ ಎಣ್ಣೆ ಆಮದು ಈ ವರ್ಷದ ಮೇ ತಿಂಗಳಲ್ಲಿ ಶೇ. 74ರಷ್ಟು ಏರಿಕೆಯಾಗಿ 7,63,300 ಟನ್ಗಳಿಗೆ ತಲುಪಿದೆ. ಹಿಂದಿನ ವರ್ಷದ ಅವಧಿಯಲ್ಲಿ ಇದು 4,39,173 ಟನ್ಗಳಾಗಿತ್ತು. ಮೇ 2023ರಲ್ಲಿ 10.58 ಲಕ್ಷ ಟನ್ಗಳಿಂದ ಈ ವರ್ಷದ ಮೇ ತಿಂಗಳಲ್ಲಿ ಒಟ್ಟು ಸಸ್ಯಜನ್ಯ ಎಣ್ಣೆ ಆಮದು 15.29 ಲಕ್ಷ ಟನ್ಗಳಿಗೆ ಏರಿಕೆಯಾಗಿದೆ. ತಾಳೆ ಎಣ್ಣೆಯು ಆಮದಿನ ಪ್ರಮುಖ ಭಾಗವಾಗಿದೆ. ಹಿಂದಿನ ವರ್ಷದ ಅವಧಿಯಲ್ಲಿ 3,48,118 ಟನ್ಗಳಷ್ಟಿದ್ದ ಕಚ್ಚಾ ತಾಳೆ ಎಣ್ಣೆ (ಸಿಪಿಒ) ಆಮದು ಈ ವರ್ಷದ ಮೇ ತಿಂಗಳಲ್ಲಿ 5,32,555 ಟನ್ಗೆ ಏರಿದ್ದು, ಆರ್ಬಿಡಿ ಪಾಮೊಲಿನ್ ಆಮದು 85,205 ಟನ್ಗಳಿಂದ 2,25,746 ಟನ್ಗೆ ಹೆಚ್ಚಳವಾಗಿದೆ. ಆದರೂ, ಕಚ್ಚಾ ಪಾಮ್ ಕರ್ನಲ್ ಆಯಿಲ್ ಆಮದು ಒಂದು ವರ್ಷದ ಹಿಂದಿನ 5,850 ಟನ್ಗಳಿಂದ 4,999 ಟನ್ಗಳಿಗೆ ಇಳಿದಿದೆ. ಸೂರ್ಯಕಾಂತಿ ಎಣ್ಣೆ ಆಮದು 2,95,206 ಟನ್ಗಳಿಂದ 4,10,727 ಟನ್ಗೆ ಏರಿದೆ. ಸೋಯಾಬೀನ್ ಎಣ್ಣೆ 3,18,887 ಟನ್ನಿಂದ 3,24,016 ಟನ್ಗೆ ಏರಿದೆ.
ರಿಯಾಲ್ಟಿ ಅತಿ ಹೆಚ್ಚು ಏರಿಕೆ: ಬಿಎಸ್ಇ ಸ್ಮಾಲ್ಕ್ಯಾಪ್ ಸೂಚ್ಯಂಕ ಶೇ. 0.89ರಷ್ಟು ಏರಿದರೆ, ಮಿಡ್ಕ್ಯಾಪ್ ಸೂಚ್ಯಂಕ ಶೇ. 0.79ರಷ್ಟು ಹೆಚ್ಚಳ ಕಂಡಿತು. ವಲಯವಾರು ಸೂಚ್ಯಂಕಗಳ ಪೈಕಿ ರಿಯಾಲ್ಟಿ ಶೇ. 2.15, ಬಂಡವಾಳ ಸರಕುಗಳು (ಶೇ. 2.05), ಕೈಗಾರಿಕೆಗಳು (ಶೇ.1.67), ಐಟಿ (ಶೇ.1.08) ಮತ್ತು ಗ್ರಾಹಕ ವಿವೇಚನೆ (ಶೇ. 0.88) ಜಿಗಿದಿವೆ. ಇದಕ್ಕೆ ವ್ಯತಿರಿಕ್ತವಾಗಿ, ದೂರಸಂಪರ್ಕ, ಬ್ಯಾಂಕೆಕ್ಸ್ ಮತ್ತು ಲೋಹ ವಲಯದ ಷೇರುಗಳು ಹಿನ್ನಡೆ ಕಂಡವು.
ಯುಎಇಗೆ ಉತ್ತಮ ಗುಣಮಟ್ಟದ ಅನಾನಸ್ ರಫ್ತು: ಭಾರತವು 8.7 ಟನ್ ಉತ್ತಮ ಗುಣಮಟ್ಟದ ಅನಾನಸ್ಗಳ ಮೊದಲ ಕಂತನ್ನು ಯುಎಇಗೆ ರಫ್ತು ಮಾಡಿದೆ ಎಂದು ವಾಣಿಜ್ಯ ಸಚಿವಾಲಯ ಗುರುವಾರ ತಿಳಿಸಿದೆ. ಎಂಡಿ2 ತಳಿಯ ಅನಾನಸ್ಅನ್ನು ಗೋಲ್ಡನ್ ರೈಪ್ ಅಥವಾ ಸೂಪರ್ ಸ್ವೀಟ್ ಎಂದೂ ಕರೆಯುತ್ತಾರೆ. ಇದು ಅಸಾಧಾರಣ ಮಾಧುರ್ಯ ಮತ್ತು ಗುಣಮಟ್ಟಕ್ಕೆ ಹೆಸರುವಾಸಿ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಿಂಧುದುರ್ಗ ಜಿಲ್ಲೆಯಲ್ಲಿ ಇದನ್ನು ಬೆಳೆಯುತ್ತಾರೆ. ಭಾರತದ ಕೃಷಿ ರಫ್ತು ಇತಿಹಾಸದಲ್ಲಿ ಇದು ಒಂದು ಪ್ರಮುಖ ಕ್ಷಣ. ಎಂಡಿ2 ಅನಾನಸ್ಅನ್ನು ಆಯ್ದ ತಳಿಗಳ ಮೂಲಕ ಡೆಲ್ ಮಾಂಟೆ 1980ರ ದಶಕದಲ್ಲಿ ಅಭಿವೃದ್ಧಿಪಡಿಸಿದೆ. ಇದರ ಗುಣಮಟ್ಟ ಅತ್ಯುತ್ತಮವಾಗಿದ್ದು, ಕೋಸ್ಟರಿಕಾ, ಫಿಲಿಪೈನ್ಸ್, ಥಾಯ್ಲೆಂಡ್ನಂತಹ ದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ.
ಎಲೆಕ್ಟ್ರಿಕ್ ವಾಹನಗಳಿಗೆ ಭಾರತ್ ಎನ್ಸಿಎಪಿ 5 ಸ್ಟಾರ್ ರೇಟಿಂಗ್ ಗರಿ: ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ 5 ಸ್ಟಾರ್ ಭಾರತ್ ನ್ಯೂ ಕಾರ್ ಅಸೆಸ್ವೆುಂಟ್ ಪೋ›ಗ್ರಾಂ (ಭಾರತ್ ಎನ್ಸಿಎಪಿ) ರೇಟಿಂಗ್ ಪಡೆದ ಮೊದಲ ವಾಹನಗಳಾಗಿ ಟಾಟಾ ಮೋಟಾರ್ಸ್ನ ಪಂಚ್ ಇವಿ ಮತ್ತು ನೆಕ್ಸಾನ್ ಇವಿ ಹೊರಹೊಮ್ಮಿವೆ. ಇವೆರಡಕ್ಕೂ ಎಕ್ಸ್ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿನಂದನೆ ತಿಳಿಸಿದ್ದಾರೆ. ‘ಭಾರತೀಯ ವಾಹನ ಮಾರುಕಟ್ಟೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಎಲೆಕ್ಟ್ರಿಕ್ ವಾಹನಗಳಿವು’ ಎಂದು ಪ್ರಶಂಸಿಸಿದ್ದಾರೆ. ಭಾರತ್-ಎನ್ಸಿಎಪಿ ಅತ್ಯುತ್ತಮ ಜಾಗತಿಕ ಮಾನದಂಡವಾಗಿದೆ.
ಜುಲೈ ಮಧ್ಯದಲ್ಲಿ ಬಜೆಟ್ ಮಂಡನೆ ಸಾಧ್ಯತೆ: ಕೇಂದ್ರ ಸರ್ಕಾರವು 2024-25ರ ಸಂಪೂರ್ಣ ಬಜೆಟ್ಅನ್ನು ಜುಲೈ ಮಧ್ಯದ ವೇಳೆಗೆ ಮಂಡಿಸುವ ಸಾಧ್ಯತೆಯಿದೆ. ಹಣಕಾಸು ಸಚಿವಾಲಯ ತನ್ನ ಬಜೆಟ್ಪೂರ್ವ ಸಭೆಗಳನ್ನು ವಿವಿಧ ಸಚಿವಾಲಯಗಳು ಮತ್ತು ಮಧ್ಯಸ್ಥಗಾರರೊಂದಿಗೆ ಜೂ. 17ರೊಳಗೆ ಪ್ರಾರಂಭಿಸಲಿದೆ.
ಲೋಕಸಭೆ ಅಧಿವೇಶನ ಜೂ. 24ರಿಂದ ಜು. 3ರವರೆಗೆ ನಡೆಯಲಿದೆ. ಹೊಸದಾಗಿ ಆಯ್ಕೆಯಾದ ಸದಸ್ಯರ ಪ್ರಮಾಣವಚನ, ಸ್ಪೀಕರ್ ಆಯ್ಕೆ, ಅಧ್ಯಕ್ಷರ ಭಾಷಣ ದ ಬಳಿಕ ಚರ್ಚೆ ನಡೆಯಲಿದೆ. ಆರ್ಥಿಕ ಸಮೀಕ್ಷೆಯ ಪ್ರಸ್ತುತಿಯೊಂದಿಗೆ ಎರಡನೇ ಭಾಗ ಪ್ರಾರಂಭವಾಗುತ್ತದೆ. ನಂತರ ಪೂರ್ಣ ಬಜೆಟ್ ಮಂಡಿಸಲಾಗುತ್ತದೆ. ಕಳೆದ ಫೆ. 1ರಂದು, ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದರು.
ಏನೇನಿರುತ್ತೆ?: ಮುಂಬರುವ ಬಜೆಟ್ ಬಗ್ಗೆ ಕೇಂದ್ರ ಸರ್ಕಾರವು ವಿವರಗಳನ್ನು ಬಹಿರಂಗಪಡಿಸದಿದ್ದರೂ, ಇದು 2.11 ಲಕ್ಷ ಕೋಟಿ ರೂ.ಗಳ ಆರ್ಬಿಐ ಲಾಭಾಂಶದ ಬಳಕೆಯ ವಿವರಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರವು ತನ್ನ ಸುಧಾರಣಾ ಕಾರ್ಯಸೂಚಿಯನ್ನು ಮುಂದುವರಿಸಬಹುದು ಮತ್ತು ಹೆಚ್ಚುವರಿ ವೆಚ್ಚಗಳಿಗೆ ಅವಕಾಶಗಳನ್ನು ಅನ್ವೇಷಿಸಬಹುದಾಗಿದೆ.