ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಶಿಕ್ಷಣ ಅಸ್ತ್ರ

12NGD1
Published on

ನಂಜನಗೂಡು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ದೇಶದ ಪ್ರಗತಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದು ಅವರ ಚಿಂತನೆ ಹಾಗೂ ಸಂದೇಶಗಳು ಸದಾ ಕಾಲಕ್ಕೂ ಸ್ಫೂರ್ತಿಯಾಗಿವೆ ಎಂದು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು.


ತಾಲೂಕಿನ ದೇಬೂರು ಗ್ರಾಮದಲ್ಲಿ ಇತ್ತೀಚೆಗೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಲಾಗಿದ್ದ ‘ಅಂಬೇಡ್ಕರ್ ಮತ್ತು ಸಮಾನತೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ದೇಶದ ನಾಗರಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಬಾಬಾ ಸಾಹೇಬರು ದಲಿತರು, ಶೋಷಿತರು, ಮಹಿಳೆಯರು ಹಾಗೂ ಕಾರ್ಮಿಕರ ಉದ್ಧಾರಕ್ಕೆ ನೆರವಾಗುವ ಶ್ರೇಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.


ಪ್ರತಿಯೊಬ್ಬ ನಾಗರಿಕನೂ ಗೌರವಯುತವಾಗಿ ಬದುಕಬೇಕು ಎಂಬ ಆಶಯದೊಂದಿಗೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರು, ದೇಶದ ಮಹಾನ್ ಧೀಮಂತ ನಾಯಕ. ಎಲ್ಲರಿಗೂ ಸಮಾನ ಅವಕಾಶ, ಅಭಿವ್ಯಕ್ತಿ ಸ್ವಾತಂತ್ರ್ಯ, ಶಿಕ್ಷಣದ ಹಕ್ಕುಗಳನ್ನು ಒದಗಿಸುವ ಜತೆಗೆ ಶೋಷಿತ ಸಮುದಾಯದ ಜನರು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಶಿಕ್ಷಣವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದರು. ಅಸಮಾನತೆ ಹಾಗೂ ಜಾತೀಯತೆಯ ಬಂಧನಗಳಲ್ಲಿ ನಲುಗಿದ್ದ ದೇಶವನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯಲು ಶ್ರಮಿಸಿದರು ಎಂದರು.


ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಶಂಕರಪುರ ಸುರೇಶ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಡಿವೈಎಸ್ಪಿ ಗೋವಿಂದರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಕುಂಡಿ ಮಹದೇವಸ್ವಾಮಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಯಶ್ವಂತ್, ಹಗಿನವಾಳು ಚಿಕ್ಕಣ್ಣ, ತಾಪಂ ಮಾಜಿ ಸದಸ್ಯೆ ಚಿಕ್ಕೀರಮ್ಮ, ದೇಬೂರು ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ದಯಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net