

ಸಾಗರ: ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪದವಿ ಶಿಕ್ಷಣ ಅತ್ಯಗತ್ಯ. ಪಾಲಕರು ಅನೇಕ ಕನಸುಗಳನ್ನು ಹೊತ್ತು ಮಕ್ಕಳನ್ನು ಕಾಲೇಜಿಗೆ ಕಳಿಸುತ್ತಾರೆ. ಪಾಲಕರ ಅಭಿಲಾಷೆ ಈಡೇರಿಸಲು ಸಂಕಲ್ಪ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಸಾಗರದ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ 2023-24ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿರಾ ಗಾಂಧಿ ಕಾಲೇಜಿಗೆ ರಾಜ್ಯದಲ್ಲಿ ಉತ್ತಮ ಹೆಸರಿದೆ. ಶಿಕ್ಷಣದ ಜತೆ ಕ್ರೀಡೆ, ಸಾಂಸ್ಕೃತಿಕ, ವಿವಿಧ ಚಟುವಟಿಕೆಗಳಲ್ಲೂ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಪದವಿ ಶಿಕ್ಷಣದ ನಂತರ ಓದಿದ ಕಾಲೇಜನ್ನು ಮರೆಯಬಾರದು. ಕಾಲೇಜು ದಿನಗಳು ನಿಮಗೆ ಅನೇಕ ನೆನಪುಗಳನ್ನು ನೀಡುತ್ತದೆ ಎಂದರು.
ಪ್ರಾಚಾರ್ಯೆ ಪ್ರೊ. ಎಚ್.ರಾಜೇಶ್ವರಿ, ಡಾ. ಶಿವಾನಂದ ಎಸ್. ಭಟ್, ನಗರಸಭೆ ಸದಸ್ಯ ಬಿ.ಎಚ್.ಲಿಂಗರಾಜ್, ಪ್ರೊ. ಎಚ್.ಎಸ್.ಚಂದ್ರಶೇಖರಪ್ಪ, ಪ್ರೊ. ಸೀಮಾ ಕೌಸರ್, ಪ್ರೊ. ಕೆ.ಎನ್.ಮಹಾಬಲೇಶ್ವರ, ಪ್ರೊ. ಎಂ.ಜಿ.ರಂಗಣ್ಣನವರ್, ಎನ್.ಉಷಾ, ಮಧುಮಾಲತಿ, ಡಾ. ಮೂಕಪ್ಪ ನಾಯ್ಕ ಇತರರಿದ್ದರು.