ಸಂಪಾದಕೀಯ| ಕೃಷಿಗೆ ತಂತ್ರಜ್ಞಾನದ ಬಲ

Onion
Published on

ದೇಶದ ಆರ್ಥಿಕತೆಯಲ್ಲಿ ಅದರಲ್ಲೂ ಗ್ರಾಮೀಣ ಆರ್ಥಿಕತೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಪ್ರಮುಖ ಪಾತ್ರ ವಹಿಸುತ್ತಿವೆ. 2022-23ರ ಆರ್ಥಿಕ ಸಮೀಕ್ಷೆ ವರದಿಯಲ್ಲಿ ಕೇಂದ್ರ ಸರ್ಕಾರ ತಿಳಿಸಿರುವಂತೆ ಭಾರತದಲ್ಲಿ 1.2 ಕೋಟಿಗೂ ಅಧಿಕ ಸ್ವಸಹಾಯ ಸಂಘಗಳು/ಗುಂಪುಗಳು ಇವೆ. ತಲಾ 20-25 ಸದಸ್ಯರನ್ನು ಹೊಂದಿರುವ ಇವು, ಕಿರುಸಾಲ ವಿತರಣೆ, ಆರ್ಥಿಕ ಚಟುವಟಿಕೆಗಳ ನಿರ್ವಹಣೆ, ಮಹಿಳೆಯರಿಗೆ ನೆರವು ಸೇರಿದಂತೆ ಮೈಕ್ರೋ ಫೈನಾನ್ಸ್ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿವೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಕುಟುಂಬಗಳನ್ನು ಆರ್ಥಿಕ ವಿಪತ್ತಿನಿಂದ ಕಾಪಾಡಿದ್ದು ಈ ಸ್ವಸಹಾಯ ಗುಂಪುಗಳೇ. ಹಂತಹಂತದ ಬೆಳವಣಿಗೆ, ಶಿಸ್ತುಬದ್ಧ ಕಾರ್ಯಾಚರಣೆ, ಪಾರದರ್ಶಕತೆ, ವಿಶ್ವಾಸಾರ್ಹ ವಾತಾವರಣದಿಂದಾಗಿ ಇವು ಆರ್ಥಿಕತೆಯಲ್ಲಿ ಭರವಸೆಯ ಕಿರಣವನ್ನು ಮೂಡಿಸಿವೆ. ಅಲ್ಲದೆ, ಬಡ ಮತ್ತು ಕೆಳಮಧ್ಯಮ ವರ್ಗದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಗುಂಪುಗಳ ಸದಸ್ಯರಾಗಿರುವುದು ಗಮನಾರ್ಹ.

ಈ ಸ್ವಸಹಾಯ ಗುಂಪುಗಳ ಸಬಲೀಕರಣ, ಆ ಮೂಲಕ ಕೃಷಿಗೂ ತಂತ್ರಜ್ಞಾನದ ಪ್ರಯೋಜನ ಒದಗಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವಸಂಪುಟ ಸಭೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ 1,261 ಕೋಟಿ ರೂಪಾಯಿ ವೆಚ್ಚದಲ್ಲಿ ಡ್ರೋನ್​ಗಳನ್ನು ಒದಗಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ನ್ಯಾನೋ ರಸಗೊಬ್ಬರ ಮತ್ತು ಕೀಟನಾಶಕಗಳ ಸಿಂಪಡಣೆ ಸೇರಿ ಕೃಷಿಯ ವಿವಿಧ ಉದ್ದೇಶಗಳಿಗಾಗಿ ರೈತರಿಗೆ ಬಾಡಿಗೆ ಸೇವೆ ಒದಗಿಸಲು ಆಯ್ದ 15,000 ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ಒದಗಿಸಲಾಗುತ್ತದೆ. ‘ಮಹಿಳಾ ಸ್ವಸಹಾಯ ಗುಂಪುಗಳ ಸಬಲೀಕರಣ ಮತ್ತು ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಬಳಕೆಯ ಉದ್ದೇಶ ಈ ಯೋಜನೆ ಹಿಂದಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಡ್ರೋನ್​ಗಳ ಖರೀದಿಗೆ ಶೇಕಡ 80ರಷ್ಟು ಹಣವನ್ನು ಕೇಂದ್ರ ನೀಡಲಿದೆ. ಸ್ವಸಹಾಯ ಗುಂಪುಗಳಿಗೆ ಗರಿಷ್ಠ 8 ಲಕ್ಷ ರೂ.ವರೆಗಿನ ಪರಿಕರ/ಪೂರಕ ಶುಲ್ಕ ಒದಗಿಸಲಾಗುತ್ತದೆ.

ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾದರೆ ತಂತ್ರಜ್ಞಾನದ ಲಾಭ ಕೃಷಿ ಕ್ಷೇತ್ರಕ್ಕೆ ತಲುಪಿ, ರೈತರಿಗೆ ನೆರವಾಗುವುದರಲ್ಲಿ ಅನುಮಾನವಿಲ್ಲ. ಅಲ್ಲದೆ, ಮಹಿಳಾ ಸ್ವಸಹಾಯ ಗುಂಪುಗಳು ಸಬಲಗೊಳ್ಳಲು ಇದರಿಂದ ಸಾಧ್ಯವಾಗಲಿದ್ದು, ಆರ್ಥಿಕ ಚಟುವಟಿಕೆ ಹೆಚ್ಚಳಗೊಂಡು, ಆದಾಯವೂ ಏರಿಕೆ ಆಗಲಿದೆ. ಅದರ ಲಾಭ ಗ್ರಾಮೀಣ ಮಹಿಳೆಯರಿಗೆ ತಲುಪುವ ಮೂಲಕ, ಒಂದು ಯೋಜನೆ ಹಲವು ಹಂತದಲ್ಲಿ ಸುಧಾರಣೆಗೆ ಪೂರಕವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net