ಸಂಪಾದಕೀಯ| ಗಂಭೀರ ಕ್ರಮ ಅಗತ್ಯ

War
Published on

ರಷ್ಯಾ ಮತ್ತು ಯೂಕ್ರೇನ್ ನಡುವಿನ ಸಮರ ಮೂರನೇ ವರ್ಷವೂ ಮುಂದುವರಿದಿದ್ದು, ಇದರಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಜಾಗತಿಕ ಒತ್ತಡ, ಹಲವು ರಾಷ್ಟ್ರಗಳ ಒತ್ತಾಯದ ನಂತರವೂ ಯುದ್ಧ ಕೊನೆಗೊಳಿಸಲು ಎರಡೂ ರಾಷ್ಟ್ರಗಳು ತಯಾರಿಲ್ಲ. ಸಮರ ದೀರ್ಘಾವಧಿಯವರೆಗೆ ಮುಂದುವರಿದರೆ ಅದರಿಂದಾಗುವ ಅನಾಹುತ, ನಷ್ಟ ಅಷ್ಟಿಷ್ಟಲ್ಲ. ಯುದ್ಧದ ದುಷ್ಪರಿಣಾಮವನ್ನು ಜನರು ಹಲವು ವರ್ಷಗಳವರೆಗೆ ಎದುರಿಸಬೇಕಾಗುತ್ತದೆ. ಈ ಮಧ್ಯೆ, ಉದ್ಯೋಗ ಕೊಡಿಸುವ ನೆಪದಲ್ಲಿ ಕೆಲ ದುಷ್ಟ ಜಾಲಗಳು ಭಾರತೀಯ ಯುವಕರನ್ನು ಮೋಸಗೊಳಿಸಿ, ರಷ್ಯಾ ಸೇನೆಗೆ ಸೇರಿಸಿದ್ದು, ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ಹೊತ್ತಲ್ಲೇ ಓರ್ವ ಭಾರತೀಯ ಮೃತಪಟ್ಟಿರುವ ಅಹಿತಕರ ಘಟನೆ ನಡೆದಿದೆ. ರಷ್ಯಾದ ಸರ್ಕಾರಿ ಕಚೇರಿಯೊಂದರಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ನಂತರ ಯೂಕ್ರೇನ್ ವಿರುದ್ಧದ ಯುದ್ಧದಲ್ಲಿ ನಿಯೋಜನೆ ಮಾಡಲಾಗಿದ್ದ ಹೈದರಾಬಾದ್​ನ 30 ವರ್ಷದ ಮಹಮದ್ ಅಫ್ಸಾನ್ ಯುದ್ಧಭೂಮಿಯಲ್ಲಿ ಮೃತಪಟ್ಟಿದ್ದಾನೆಂದು ವರದಿಯಾಗಿದೆ. ‘ಅವರನ್ನು ವಂಚಿಸಲಾಗಿದೆ. ಅವರು ಮಾಸ್ಕೋದಲ್ಲಿ ಮಾತ್ರವೇ ಕೆಲಸ ಮಾಡಲಿದ್ದಾರೆ ಎಂದು ಏಜೆಂಟ್ ಹೇಳಿದ್ದ’ ಎಂಬುದಾಗಿ ಮೃತನ ಸೋದರ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ, ಉದ್ಯೋಗ ಅರಸಿ ಹೋದ ತಮ್ಮನ್ನು ರಷ್ಯಾ ಸರ್ಕಾರ ಯುದ್ಧಕ್ಕೆ ಕಳಿಸಿದೆ ಎಂಬುದಾಗಿ ಮತ್ತೆ 7 ಜನ ಭಾರತೀಯರು ವಿಡಿಯೋ ಬಿಡುಗಡೆ ಮಾಡಿದ್ದು, ಚಿಂತೆಯ ವಿಷಯ. ಇದೇ ರೀತಿ 20 ಭಾರತೀಯರನ್ನು ಯುದ್ಧಕ್ಕೆ ಬಳಸಿಕೊಳ್ಳುತ್ತಿರುವುದು ಇತ್ತೀಚೆಗಷ್ಟೆ ವರದಿಯಾಗಿತ್ತು. ಇದರಲ್ಲಿ ಕೆಲವು ಕನ್ನಡಿಗರೂ ಇದ್ದಾರೆ. ಈ ಪ್ರಮಾಣದಲ್ಲಿ ಯುವಕರನ್ನು ಯುದ್ಧದಲ್ಲಿ ನಿಯೋಜಿಸಿರುವುದನ್ನು ಗಮನಿಸಿದರೆ, ಕೆಲ ಜಾಲಗಳು ಇದರಲ್ಲಿ ವ್ಯವಸ್ಥಿತವಾಗಿ ಕೆಲಸ ಮಾಡಿದ್ದು, ಯುವಕರ ಉದ್ಯೋಗದ ಅನಿವಾರ್ಯತೆಯನ್ನು ದುರುಪಯೋಗ ಮಾಡಿಕೊಂಡಿವೆ.

ಇಂಥ ಜಾಲಗಳು ಈ ಹಿಂದೆ ಸೌದಿ ರಾಷ್ಟ್ರಗಳಲ್ಲಿ ಅಥವಾ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ, ಅದಕ್ಕೆ ಭಾರಿ ಪ್ರಮಾಣದ ಶುಲ್ಕವನ್ನು ಪಡೆದು, ಆ ಬಳಿಕ ಎಲ್ಲೋ ಸಣ್ಣಪುಟ್ಟ ಕೆಲಸಗಳನ್ನು ಕೊಡಿಸುತ್ತಿದ್ದವು. ಇಲ್ಲವೆ ಅಪಾಯಕಾರಿ ಪ್ರದೇಶಗಳಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಬಿಡುತ್ತಿದ್ದರು. ಮೋಸದ ಹೊಸ ಸ್ವರೂಪ ಈಗ ಬಯಲಾಗಿದ್ದು, ಯುವಕರನ್ನು ಯುದ್ಧಕ್ಕೆ ನಿಯೋಜಿಸಲಾಗುತ್ತಿರುವುದು ಆತಂಕಕಾರಿ. ರಷ್ಯಾ ಸೇನೆಯ ಬೆಂಬಲಿಗ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಸುಮಾರು 20 ಭಾರತೀಯರನ್ನು ಆದಷ್ಟು ಬೇಗನೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ಗರಿಷ್ಠ ಪ್ರಯತ್ನ ಮಾಡುವುದಾಗಿ ವಿದೇಶಾಂಗ ಸಚಿವಾಲಯ ಕೆಲವು ದಿನಗಳ ಹಿಂದೆ ಹೇಳಿತ್ತಾದರೂ, ಮತ್ತೆ ಇಂಥ ಘಟನೆಗಳು ಮರುಕಳಿಸುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ವಿಷಯದ ಬಗ್ಗೆ ರಷ್ಯಾ ಸರ್ಕಾರದ ಜತೆ ವಿಳಂಬವಿಲ್ಲದೆ ರಾಜತಾಂತ್ರಿಕ ಮಾತುಕತೆ ನಡೆಸಬೇಕು. ಅಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಬಿಡುಗಡೆ ಮಾಡಿಸಿ, ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net