Editorial: ಸರ್ಕಾರಿ ನೌಕರರ ಸೇವೆಗಾಗಿ ಹೊಸ ಆ್ಯಪ್​...ಸರ್ಕಾರದ ಕ್ರಮ ಸ್ವಾಗತಾರ್ಹ

Editorial
Published on

ಮಾಹಿತಿ-ತಂತ್ರಜ್ಞಾನದ ದೆಸೆ, ಡಿಜಿಟಲೀಕರಣದ ಲಭ್ಯತೆಯಿಂದ ಹಲವು ರಂಗಗಳು ಆಧುನಿಕತೆಯ ಸ್ಪರ್ಶ ಪಡೆದುಕೊಂಡು, ಸುಧಾರಣೆಗೆ ತೆರೆದುಕೊಂಡಿವೆ. ಅದು ಕಾಲದ ಅಗತ್ಯವೂ ಹೌದು. ಪ್ರಕ್ರಿಯೆಗಳು ಪಾರದರ್ಶಕ ಹಾಗೂ ಕ್ಷಿಪ್ರವಾಗಿ ಸಾಗಲು ಇದರಿಂದ ಅನುಕೂಲ. ಆದರೆ, ರಾಜ್ಯ ಸರ್ಕಾರಿ ನೌಕರರೇ ಹಲವು ಸವಲತ್ತುಗಳಿಗಾಗಿ, ಸಾಮಾನ್ಯ ಪ್ರಕ್ರಿಯೆಗಳಿಗಾಗಿ ಪದೇಪದೆ ಕಚೇರಿಗಳಿಗೆ ಅಲೆದಾಡಬೇಕಿತ್ತು. ಆದರೂ ಕಾಲಮಿತಿಯಲ್ಲಿ ಕೆಲಸಗಳು ಆಗುತ್ತಿರಲಿಲ್ಲ. ‘ದಾಖಲೆ (ಫೈಲ್) ಕಳೆದುಹೋಗಿದೆ, ಉನ್ನತ ಅಧಿಕಾರಿ ರಜೆಯಲ್ಲಿದ್ದಾರೆ’ ಎಂಬ ಸಬೂಬುಗಳೆಲ್ಲ ರೋಸಿಹೋಗುವಂತೆ ಮಾಡುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ನೌಕರಸ್ನೇಹಿ ಕ್ರಮವನ್ನು ಘೋಷಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೇವೆಗಳನ್ನು ಆನ್​ಲೈನ್ ಮೂಲಕ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ತಿಂಗಳೊಳಗೆ ಹೊಸ ಆಪ್ ಸಿದ್ಧವಾಗಲಿದೆ. ಇದರಿಂದ ಸರ್ಕಾರಿ ನೌಕರರ ಸಮಯ, ಶ್ರಮ ಎರಡೂ ಉಳಿತಾಯವಾಗಲಿದೆ. ಕಾಪೋರೇಟ್ ಕಂಪನಿಗಳ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು, ಪ್ರಮುಖವಾಗಿ 32 ಸೇವೆಗಳು ಲಭ್ಯ ಆಗಲಿವೆ. ಆನ್​ಲೈನ್​ನಲ್ಲಿ ಅರ್ಜಿ ಅಪ್​ಲೋಡ್ ಮಾಡುತ್ತಿದ್ದಂತೆ ಅದು ನೇರವಾಗಿ ಸಂಬಂಧಿಸಿದವರ ಗಮನಕ್ಕೆ ಬರುತ್ತದೆ. ಅವರು ಒಪ್ಪಿಗೆ ನೀಡುತ್ತಿದ್ದಂತೆ ನೌಕರರಿಗೆ ಮಾಹಿತಿ ರವಾನೆ ಆಗುತ್ತದೆ.

ಮುಂಬಡ್ತಿ, ಸೇವಾಜೇಷ್ಠತೆಗೆ ಸಂಬಂಧಿಸಿದಂತೆ ಇಲಾಖೆ ಪರೀಕ್ಷೆ ಉತ್ತೀರ್ಣ, ವೇತನ ಬಡ್ತಿ, ಜಿಪಿಎಫ್ ಸೇರಿದಂತೆ ನೌಕರರಿಗೆ ಅಗತ್ಯವಾದ ಮಾಹಿತಿ ಲಭ್ಯವಾಗಲಿದ್ದು, ಈ ಮೂಲಕ ಅವರ ದಶಕಗಳ ಬೇಡಿಕೆ ಈಡೇರಲಿದೆ ಮತ್ತು ವೃಥಾ ಅಲೆದಾಟ ತಪ್ಪಲಿದೆ. ನಮ್ಮಲ್ಲಿ ಉದ್ಯಮಗಳ ಕುರಿತಂತೆಯೂ ಸಮಸ್ಯೆ ಹಳೆಯದ್ದೇ; ಅನುಮತಿಗಾಗಿ ಹಲವು ಬಾರಿ ಓಡಾಡಬೇಕು ಮತ್ತು ಇಂಥ ಪ್ರಯತ್ನಗಳೇ ಹರಸಾಹಸವಾಗಿ ತುಂಬ ಸಮಯ ವ್ಯರ್ಥವಾಗುತ್ತದೆ ಎಂಬುದು ಹಲವು ವರ್ಷಗಳ ದೂರು. ಇದಕ್ಕೂ ಉತ್ತರ ಕಲ್ಪಿಸಲು ಸರ್ಕಾರ ಮುಂದಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ ಅನುಷ್ಠಾನಗೊಳ್ಳಲಿದ್ದು, ಆನ್​ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ವಿಲೇವಾರಿ ಮಾಡಲು ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ. ದೃಢೀಕರಣ ಪತ್ರ, ಗುತ್ತಿಗೆ-ಕ್ರಯ ಒಪ್ಪಂದ ಜಾರಿ, ಕಟ್ಟಡ ನಕ್ಷೆ ಮಂಜೂರಾತಿ ಸೇರಿ ಹಲವು ಸೇವೆಗಳು ಕಾಲಮಿತಿಯೊಳಗೆ ಲಭ್ಯ ಆಗಲಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಸ್ ಆಫ್ ಡೂಯಿಂಗ್ ಅನ್ನು ಇನ್ನಷ್ಟು ಉತ್ತಮವಾಗಿಸಲು ಮುಂದಾಗಿದೆ.

ಇಲಾಖೆಗಳು ಮತ್ತು ಜನರು ಹಲವು ವರ್ಷಗಳಿಂದ ಇಂಥ ಸುಧಾರಣೆಗಳನ್ನು ನಿರೀಕ್ಷಿಸುತ್ತಿದ್ದರು. ಈಗಲಾದರೂ, ಅವುಗಳ ಜಾರಿಗೆ ಮುಂದಾಗಿರುವುದು ಸಮಾಧಾನಕರ. ಆದರೆ, ಇಂಥ ಕ್ರಮಗಳು ಕಾಟಾಚಾರಕ್ಕೆ ಸೀಮಿತವಾಗಬಾರದು. ಒಂದುಬಗೆಯ ಜಡತ್ವ ರೂಢಿಸಿಕೊಂಡಿರುವ ಅಧಿಕಾರಶಾಹಿ ಸರ್ವರ್ ಸರಿ ಇಲ್ಲ, ಸಿಬ್ಬಂದಿ ಇಲ್ಲ, ಅರ್ಜಿಯೇ ಬಂದಿಲ್ಲ ಎಂಬಂಥ ಸಬೂಬುಗಳನ್ನು ನೀಡದಂತೆ, ಹಳೆದ ದೋಷ ಹಾಗೂ ವಿಳಂಬ ನೀತಿ ಪುನರಾವರ್ತನೆ ಆಗದಂತೆ ಸಮರ್ಪಕ ಅನುಷ್ಠಾನಕ್ಕೆ ಕಾಳಜಿ ತೋರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net