ಸಂಪಾದಕೀಯ: ನೆಮ್ಮದಿಯ ಬೆಳಕು ತರಲಿ

Health (6)
Published on

ಸಂಪಾದಕೀಯ: ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿ ವಿಶಿಷ್ಟ ಪರ್ವ. ದೈನಂದಿನ ಜಂಜಾಟಗಳನ್ನು ಮರೆಸಿ, ಜೀವನೋತ್ಸಾಹ ಹೆಚ್ಚಿಸುವ ಮತ್ತು ಬಾಂಧವ್ಯಗಳನ್ನು ಬಲಪಡಿಸುವ ಹಬ್ಬ. ಅಧರ್ಮದ ವಿರುದ್ಧ ಧರ್ಮದ ವಿಜಯ, ಕೆಡುಕಿನ ವಿರುದ್ಧ ಒಳಿತಿನ ಗೆಲುವು, ಅಂಧಕಾರದ ವಿರುದ್ಧ ಬೆಳಕಿನ ಆಹ್ಲಾದ... ಹೀಗೆ ವ್ಯಷ್ಟಿ ಹಾಗೂ ಸಮಷ್ಟಿಯ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ ಈ ಹಬ್ಬ. ಭಗವಾನ್ ಶ್ರೀರಾಮಚಂದ್ರ ಹದಿನಾಲ್ಕು ವರ್ಷಗಳ ವನವಾಸದಿಂದ ಅಯೋಧ್ಯೆಗೆ ಮರಳಿದ ಸುದಿನ, ಲೋಕಕ್ಕೆ ಕಂಟಕವಾಗಿದ್ದ ನರಕಾಸುರನನ್ನು ಶ್ರೀಕೃಷ್ಣ ಪರಮಾತ್ಮ ವಧಿಸಿ ಧರ್ಮ ಸಂಸ್ಥಾಪನೆ ಮಾಡಿದ ನೆನಪಿಗಾಗಿ ದೇಶದ ಉದ್ದಗಲಕ್ಕೂ ದೀಪಾವಳಿಯನ್ನು ಸಂಭ್ರಮ ಮತ್ತು ಹಷೋಲ್ಲಾಸಗಳಿಂದ ಆಚರಿಸಲಾಗುತ್ತದೆ. ವಿದೇಶಗಳಲ್ಲೂ ಅನಿವಾಸಿ ಭಾರತೀಯರು ಈ ಹಬ್ಬವನ್ನು ಒಟ್ಟಾಗಿ ಆಚರಿಸುತ್ತಿದ್ದಾರೆ. ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಂತೂ ದೀಪಾವಳಿ ಸಂಭ್ರಮ ಮುಗಿಲುಮುಟ್ಟಿದ್ದು, ಎರಡು ಗಿನ್ನೆಸ್ ದಾಖಲೆಯನ್ನೂ ಸೃಷ್ಟಿಸಿರುವುದು ಗಮನಾರ್ಹ. ಭಾನುವಾರ ಸಂಜೆ ಅಯೋಧ್ಯೆಯಲ್ಲಿ 26 ಲಕ್ಷ 17 ಸಾವಿರದ 215 ದೀಪಗಳನ್ನು ಏಕಕಾಕಲದಲ್ಲಿ ಬೆಳಗಿದ್ದು ಮೊದಲ ದಾಖಲೆಯಾದರೆ, ಸರಯೂ ನದಿತೀರದಲ್ಲಿ 2128 ಅರ್ಚಕರು ಒಟ್ಟಾಗಿ ಸರಯೂಗೆ ಆರತಿ ಬೆಳಗಿದ್ದು ಮತ್ತೊಂದು ದಾಖಲೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಮ ಮಂದಿರದಲ್ಲಿ ದೀಪ ಬೆಳಗುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಅದೇ ರೀತಿ ವಿಶ್ವನಾಥನ ಸನ್ನಿಧಿ ಕಾಶಿ ಕ್ಷೇತ್ರ ಸಾವಿರಾರು ದೀಪಗಳಿಂದ ಕಂಗೊಳಿಸಿದೆ.

ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವ ಪಡೆದಿರುವ ದೀಪಾವಳಿಯ ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳು ಕೂಡ ಅಷ್ಟೇ ಗಮನಾರ್ಹ. ಸೌಹಾರ್ದವನ್ನು ಹೆಚ್ಚಿಸಿ, ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಮೂಲಕ ದ್ವೇಷ, ಅಸೂಯೆಗಳನ್ನು ಕರಗಿಸಿ, ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುತ್ತದೆ. ಇನ್ನು ಆರ್ಥಿಕವಾಗಿ ಸಣ್ಣ ವ್ಯಾಪಾರಿಗಳಿಂದ ಹಿಡಿದು, ದೊಡ್ಡ ಉದ್ಯಮಿಗಳವರೆಗೂ ಅವಕಾಶದ ಬಾಗಿಲನ್ನು ತೆರೆಯುತ್ತದೆ. ಹೂವು ಮಾರುವ ವ್ಯಾಪಾರಿಯಿಂದ ಹಿಡಿದು, ಶೋರೂಮ್ಳಲ್ಲಿ ಕಾರು ಮಾರಾಟ ಮಾಡುವ ಉದ್ಯಮಿಯವರೆಗೂ ಎಲ್ಲರಿಗೂ ಈಗ ಶುಕ್ರದೆಸೆ. ದೀಪಾವಳಿ ಸಂದರ್ಭದಲ್ಲಿನ ಖರೀದಿ ಶುಭದಾಯಕ ಮತ್ತು ಇದು ಸಂಪತ್ತನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯೇ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತಿದೆ.

ಧನತೇರಸ್ ದಿನದಂದೇ (ಶನಿವಾರ) ದೇಶದಲ್ಲಿ 1 ಲಕ್ಷ ಕೋಟಿ ರೂ, ವಹಿವಾಟು ನಡೆದಿದ್ದು, ಈ ಪೈಕಿ 60 ಸಾವಿರ ಕೋಟಿ ರೂ. ವಹಿವಾಟು ಚಿನ್ನ ಮತ್ತು ಬೆಳ್ಳಿಯದ್ದೇ. ಭಾನುವಾರದ ಹೊತ್ತಿಗೆ ಒಟ್ಟು ವಹಿವಾಟು 5 ಲಕ್ಷ ಕೋಟಿ ರೂ. ದಾಟಿದ್ದು, ಹಬ್ಬದ ಋತು ಮುಗಿಯುವ ಹೊತ್ತಿಗೆ ಇದು ಹೊಸ ಎತ್ತರಕ್ಕೆ ತಲುಪಬಹುದು. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಪರಿಷ್ಕರಣೆ ಸೆಪ್ಟೆಂಬರ್ 22ರಂದು ಜಾರಿಗೆ ಬಂದಿದೆ. ತೆರಿಗೆ ಇಳಿಕೆಯ ಲಾಭ ಈ ಬಾರಿ ಹಬ್ಬದ ಸಂಭ್ರಮವನ್ನು ಮತ್ತು ಖರೀದಿಯ ಭರಾಟೆಯನ್ನು ಹೆಚ್ಚಿಸಿರುವುದು ಹೌದು. ವಾಹನ ಮತ್ತು ಗೃಹಬಳಕೆಯ ಇತರ ವಸ್ತುಗಳ ಬೆಲೆ ಕಡಿಮೆಯಾಗಿದ್ದು, ಮಧ್ಯಮವರ್ಗಿಯರ ಪಾಲಿಗಂತೂ ಒಳ್ಳೆಯ ಕೊಡುಗೆ. ಜಿಎಸ್​ಟಿ ಇಳಿಕೆಯ ಲಾಭ ಜನರಿಗೆ ತಲುಪುತ್ತಿದೆ ಎಂಬುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟಪಡಿಸಿದ್ದಾರೆ.

ಆರ್ಥಿಕ ಸಮೃದ್ಧಿಯ ಜತೆಗೆ ದೀಪಾವಳಿ ನೆಮ್ಮದಿಯನ್ನೂ ತರಲಿ. ಎಲ್ಲರೂ ಒಟ್ಟಿಗೆ ಸಾಗುವ, ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುವ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ದೇಶಹಿತಕ್ಕಾಗಿ ಕಾರ್ಯನಿರ್ವಹಿಸುವ ಸಂಕಲ್ಪ ಜಾಗೃತಗೊಳ್ಳಲಿ. ಬಾಹ್ಯ ಸುಧಾರಣೆ ಜತೆಗೆ ದೀಪಾವಳಿ ವ್ಯಕ್ತಿಯ ಆಂತರ್ಯದಲ್ಲೂ ಸಕಾರಾತ್ಮಕ ಬದಲಾವಣೆ ತರಲಿ. ಆ ಮೂಲಕ ನಿಜವಾದ ಬೆಳಕು ಎಲ್ಲ ಕಡೆ ಆವರಿಸಿಕೊಳ್ಳಲಿ ಎಂಬುದೇ ಆಶಯ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net