

ದೇಶದ 70 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಎಲ್ಲ ಹಿರಿಯರಿಗೂ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಭಾರತ್ನ ವಿಸ್ತರಿತ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಮಂಗಳವಾರ ಚಾಲನೆ ನೀಡುವ ಮೂಲಕ, ಹಿರಿಯ ನಾಗರಿಕರಿಗೆ ನೆರವಿನ ಹಸ್ತ ಚಾಚಿದ್ದಾರೆ. ದೇಶದ 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಆದಾಯ ಮಿತಿ ಇಲ್ಲದೆ 70 ವರ್ಷ ಮೇಲ್ಪಟ್ಟ ಪ್ರತಿ ಹಿರಿಯರಿಗೂ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ನೀಡುವ ಯೋಜನೆ ಇದಾಗಿದೆ. ಸೆಪ್ಟೆಂಬರ್ನಲ್ಲಿ ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿತ್ತು. ದೇಶದ ಅಸಂಖ್ಯ ಕುಟುಂಬಗಳು ಹಿರಿಯ ನಾಗರಿಕರ ಆರೈಕೆ, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ, ಈ ಆರೋಗ್ಯ ಸೇವೆಯನ್ನು ವಿಸ್ತಾರಗೊಳಿಸಿರುವುದು ಸ್ವಾಗತಾರ್ಹ.
ಆರೋಗ್ಯ ವಿಮೆಯನ್ನು ಸಾಮಾನ್ಯ ಜನರ ಕೈಗೆಟುಕುವಂತೆ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಭಾರತದಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಕೋಟ್ಯಂತರ ಕುಟುಂಬಗಳು ಇನ್ನೂ ಆರೋಗ್ಯ ವಿಮೆಯಿಂದ ವಂಚಿತವಾಗಿದ್ದು, ಅನಾರೋಗ್ಯದ ತುರ್ತಿನಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿವೆ. ಕುಟುಂಬದ ಒಬ್ಬ ವ್ಯಕ್ತಿ ಅನಾರೋಗ್ಯಕ್ಕೀಡಾಗಿ, ವೈದ್ಯಕೀಯ ಚಿಕಿತ್ಸೆ ಪಡೆದರೆ ಅದರಿಂದ ಕುಟುಂಬದ ಆರ್ಥಿಕತೆಯೇ ಬುಡಮೇಲಾಗುತ್ತದೆ. ಕೆಲ ದಿನಗಳ ಚಿಕಿತ್ಸೆಗಾಗಿ ಮಾಡಿದ ಸಾಲವನ್ನು ಹತ್ತಾರು ವರ್ಷಗಳ ಕಾಲ ಭರಿಸುವಂಥ ದಾರುಣ ಸ್ಥಿತಿ.
ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ಹೊರೆಯಿಂದ ಆರೋಗ್ಯ ವಿಮೆಯ ಕಂತು ದುಬಾರಿಯಾಗಿ ಪರಿಣಮಿಸಿರುವುದು ಗೊತ್ತೇ ಇದೆ. ಆರೋಗ್ಯ ವಿಮೆ ಮತ್ತು ಜೀವ ವಿಮೆ ಮೇಲೆ ಪ್ರಸ್ತುತ ಶೇಕಡ 18ರಷ್ಟು ಜಿಎಸ್ಟಿ ವಿಧಿಸಲಾಗಿದೆ. ಇದರಿಂದ ಪಾಲಿಸಿಗಳ ಪ್ರೀಮಿಯಂ ಮೊತ್ತ ದುಬಾರಿಯಾಗಿರುವುದು ಸಾರ್ವಜನಿಕರಿಗೆ ಹೊರೆಯಾಗಿ ಪರಿಣಮಿಸಿದೆ.
ಈ ವಿಮೆಗಳ ಮೇಲೆ ಶೇ.18ರಷ್ಟು ಜಿಎಸ್ಟಿ ವಿಧಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಪಕ್ಷಾತೀತವಾಗಿ ಕೇಳಿಬರುತ್ತಿದೆ. ಈ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲು ರಚಿಸಲಾಗಿದ್ದ ಸಚಿವರ ಗುಂಪು ಕೂಡ 5 ಲಕ್ಷ ರೂ.ಗಳವರೆಗಿನ ಆರೋಗ್ಯ ವಿಮೆಗೆ ಜಿಎಸ್ಟಿ ತಗ್ಗಿಸಲು ಶಿಫಾರಸು ಮಾಡಿದೆ. ನವೆಂಬರ್ನಲ್ಲಿ ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆ ಆರೋಗ್ಯ ಮತ್ತು ಜೀವ ವಿಮೆ ಮೇಲಿನ ತೆರಿಗೆಯನ್ನು ಕೊನೆಗೊಳಿಸಿದರೆ ಜನಸಾಮಾನ್ಯರವರೆಗೆ ವಿಮೆ ಸೌಲಭ್ಯ ತಲುಪಲು ಸಾಧ್ಯವಾಗುತ್ತದೆ.
ಜಿಎಸ್ಟಿ ವ್ಯವಸ್ಥೆ ಅಡಿಯಲ್ಲಿ ಸಂಗ್ರಹವಾಗುತ್ತಿರುವ ವರಮಾನ ಮೊತ್ತವು ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿರುವ ಕಾರಣಕ್ಕೆ, ವಿಮೆ ಕಂತುಗಳ ಮೇಲಿನ ತೆರಿಗೆ ಪ್ರಮಾಣ ಕಡಿಮೆ ಮಾಡಬಹುದು ಎಂಬ ವಿಚಾರಕ್ಕೆ ಬಹುತೇಕ ರಾಜ್ಯಗಳು ಸಹಮತ ವ್ಯಕ್ತಪಡಿಸಿರುವುದು ಗಮನಾರ್ಹ. ಸರ್ಕಾರದ ಆರೋಗ್ಯ ವಿಮೆ ಹೊಂದಲು ನಿಗದಿ ಪಡಿಸಿರುವ ಕಠಿಣ ಮಾನದಂಡಗಳು ಜನರನ್ನು ಇಂಥ ಯೋಜನೆಗಳಿಂದ ವಂಚಿತವಾಗಿಸಿವೆ ಎಂಬುದು ಕಹಿ ವಾಸ್ತವ. ಹೀಗಾಗಿ, ಆರೋಗ್ಯ ಸೇವೆಯ, ಆರೋಗ್ಯ ವಿಮೆಯ ವ್ಯಾಪ್ತಿಯನ್ನು ವಿಸ್ತರಿಸುವ ಜತೆಗೆ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಖಾತ್ರಿಪಡಿಸಬೇಕಿದೆ.