ಸಂಪಾದಕೀಯ| ದೀರ್ಘಕಾಲೀನ ಕ್ರಮ ಅಗತ್ಯ

Water Logging
Published on

ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಬೀಳುತ್ತಿರುವ ಹಿಂಗಾರು ಮಳೆಯ ಆರ್ಭಟ ಜನರನ್ನು ಬೆಚ್ಚಿಬೀಳಿಸಿದೆ. ಹೆಚ್ಚಿನ ಪ್ರಾಣಹಾನಿ ಆಗದಿದ್ದರೂ, ಸಾಕಷ್ಟು ಬೆಳೆಹಾನಿ, ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ರಾಜ್ಯ ರಾಜಧಾನಿಯ ಹಲವು ಬಡಾವಣೆಗಳ ಬಂಡವಾಳವನ್ನೂ ಈ ಮಳೆ ಬಯಲು ಮಾಡಿದೆ. ಯಲಹಂಕ ಪ್ರದೇಶದ ಹಲವು ಅಪಾರ್ಟ್​ವೆುಂಟ್​ಗಳು ಜಲಾವೃತವಾದ್ದರಿಂದ ಅಲ್ಲಿನ ನಿವಾಸಿಗಳು ಪರದಾಡುವಂತಾಯಿತು. ಅಲ್ಲದೆ, ಹೆಣ್ಣೂರು ಸಮೀಪದ ವಡ್ಡರಪಾಳ್ಯದಲ್ಲಿ ನಿರ್ಮಾಣ ಹಂತದ ಅಪಾರ್ಟ್​ವೆುಂಟ್ ಕುಸಿದು ಆರು ಜನ ಕಾರ್ವಿುಕರು ಬಲಿಯಾಗಿದ್ದಾರೆ. ಇನ್ನು, ರಾಜಕಾಲುವೆ, ಚರಂಡಿಗಳ ನೀರು ರಸ್ತೆಗಳಿಗೆ ನುಗ್ಗಿದ್ದರಿಂದ ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ಹೈರಾಣಾದರು. ಹಲವೆಡೆ ತಗ್ಗು ಪ್ರದೇಶಗಳಲ್ಲಿನ ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳಿಗೂ ನೀರು ನುಗ್ಗಿತು. ಕೆಲ ಬಡಾವಣೆಗಳಲ್ಲಂತೂ ದೋಣಿಗಳನ್ನು ಬಳಸಿ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.

ಕಳೆದ ಆರು ತಿಂಗಳಲ್ಲೇ ಬೆಂಗಳೂರಿಗರು ಮೂರನೇ ಬಾರಿ ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ. ಮೇ ತಿಂಗಳಿನಲ್ಲಿ ಮುಂಗಾರುಪೂರ್ವ ಮಳೆ ಸುರಿದಾಗ, ಆಗಸ್ಟ್​ನಲ್ಲಿ ಮುಂಗಾರು ಮಳೆ ಹೆಚ್ಚು ಪ್ರಮಾಣದಲ್ಲಿ ಸುರಿದಾಗ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಸೃಷ್ಟಿಯಾಗಿತ್ತು ಮತ್ತು ಈಗ ಹಿಂಗಾರು ಮಳೆಯಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ. ನದಿಯಂತಾಗಿರುವ ರಸ್ತೆಗಳ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಗರ ವ್ಯವಸ್ಥೆ ಕುರಿತಾಗಿ ಹಲವು ಬಗೆಗಳಲ್ಲಿ ಚರ್ಚೆ ನಡೆಯುತ್ತಿದೆ. ಅದೇನಿದ್ದರೂ, ಮಳೆಯನ್ನು ಎದುರಿಸಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಸಮರ್ಪಕವಾಗಿ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂಬುದು ಈ ಚಿತ್ರಣದಿಂದ ಸ್ಪಷ್ಟವಾಗುತ್ತದೆ. ಕೆರೆಗಳು ಹಾಗೂ ರಾಜಕಾಲುವೆಗಳ ಒತ್ತುವರಿ ತೆರವಿಗೆ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಈ ವರ್ಷ ಮಳೆಗಾಲಕ್ಕೂ ಮುನ್ನ ಚರಂಡಿಗಳು ಮತ್ತು ರಾಜಕಾಲುವೆಗಳಲ್ಲಿನ ಹೂಳು ತೆಗೆಯುವ ಕೆಲಸವೂ ಸಮರ್ಪಕವಾಗಿ ನಡೆದಿಲ್ಲ. ‘ಮಳೆಗಾಲ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಪಾಲಿಕೆ ಅಧಿಕಾರಿಗಳು ಹಲವು ಬಾರಿ ಹೇಳಿದ್ದರು. ಆದರೆ, ಬೆಂಗಳೂರು ಸಾಧಾರಣ ಮಳೆಗೂ ಮತ್ತೆ ಮತ್ತೆ ಪ್ರವಾಹಕ್ಕೆ ತುತ್ತಾಗುತ್ತಿರುವುದನ್ನು ನೋಡಿದರೆ, ಪ್ರವಾಹ ತಡೆಗೆ ದೀರ್ಘಕಾಲಿನ ಯೋಜನೆ, ಕ್ರಮಗಳನ್ನು ಕೈಗೊಳ್ಳುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂಬುದು ಸ್ಪಷ್ಟ.

ಒಂದೆಡೆ ಸರ್ಕಾರದ ನಿರ್ಲಕ್ಷ್ಯ ಇನ್ನೊಂದೆಡೆ ರಿಯಲ್ ಎಸ್ಟೇಟ್/ ಗುತ್ತಿಗೆದಾರರ ವಲಯದ ಲಾಭಕೋರತನ, ಮತ್ತೊಂದೆಡೆ ಸಾರ್ವಜನಿಕರ ಅಸಹಾಯಕತೆಯನ್ನು ಈ ಮಳೆ ತೆರೆದಿಟ್ಟಿದೆ. ಇನ್ನು ಮುಂದಾದರೂ ವೈಯಕ್ತಿಕ ಲಾಭದಾಸೆಗೆ ಸಾರ್ವಜನಿಕ ಹಿತ ಬಲಿ ಕೊಡುವುದನ್ನು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳು ನಿಲ್ಲಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ‘ಬ್ರಾ್ಯಂಡ್ ಬೆಂಗಳೂರು’ ಬರೀ ಘೋಷಣೆಯಾಗಿ ಉಳಿಯದೆ, ರಾಜಕಾಲುವೆ, ಕೆರೆಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು. ಪ್ರವಾಹ ನಿಯಂತ್ರಣಕ್ಕೆ ಪೂರಕವಾದ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net