

ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದು (1993) ಮೂರು ದಶಕಗಳು ಕಳೆದಿವೆ. 30 ವರ್ಷಗಳು ಪೂರ್ಣಗೊಂಡ ನಿಮಿತ್ತ ರಾಜ್ಯ ಸರ್ಕಾರ ಸಂಭ್ರಮಾಚರಣೆಯ ಜತೆಗೆ ‘ರಾಷ್ಟ್ರೀಯ ಸ್ವರಾಜ್ ಸಮ್ಮೇಳನ’ ಆಯೋಜಿಸಲು ಸಿದ್ಧತೆ ನಡೆಸಿದೆ. ಮತ್ತೊಂದೆಡೆ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯಾದ್ಯಂತ ಶುಕ್ರವಾರದಿಂದ 5,598 ಗ್ರಾಮ ಪಂಚಾಯಿತಿಗಳ ಒಂದು ಲಕ್ಷಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿಗಳ ಆಡಳಿತಯಂತ್ರ ಸ್ತಬ್ಧವಾಗಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆ ಆಗಿದೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು, ನೌಕರರ ಜ್ಯೇಷ್ಠತಾ ಪಟ್ಟಿ ಅಂತಿಮಗೊಳಿಸುವುದು, ಬಡ್ತಿಗೆ ಸಂಬಂಧಿಸಿದ ತೊಡಕುಗಳ ನಿವಾರಣೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಹುದ್ದೆಯನ್ನು ಬಿ ಗುಂಪಿನ ಹುದ್ದೆಯನ್ನಾಗಿ ಉನ್ನತಿಕರಿಸುವುದು, ಕರ ವಸೂಲಿ ಮಾಡುವವರು, ಕ್ಲರ್ಕ್/ಡಾಟಾ ಎಂಟ್ರಿ ಆಪರೇಟರ್ಗಳು, ನೀರಗಂಟಿಗಳು, ಜವಾನರು ಮತ್ತು ಸ್ವಚ್ಛತಾ ಕೆಲಸದಲ್ಲಿ ತೊಡಗಿರುವವರಿಗೆ ಕಾರ್ವಿುಕರ ರಾಜ್ಯ ವಿಮೆ, ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸುವುದು, ಆರೋಗ್ಯ ವಿಮೆ ಮೊತ್ತದ ಹೆಚ್ಚಳ ಸೇರಿದಂತೆ ಕೆಲವು ಬೇಡಿಕೆಗಳು ದೀರ್ಘಕಾಲದಿಂದ ನನೆಗುದಿಗೆ ಬಿದ್ದಿವೆ. ಹೀಗಾಗಿ, ನೌಕರರು ಈಗ ಅನಿವಾರ್ಯವಾಗಿ ಹೋರಾಟದ ಹಾದಿ ತುಳಿದಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಈ ಬೇಡಿಕೆಗಳ ಈಡೇರಿಕೆಗೆ ಹಿಂದೆಯೇ ಆಶ್ವಾಸನೆ ನೀಡಿದ್ದರು. ಆದರೆ, ಅವು ಕಾರ್ಯರೂಪಕ್ಕೆ ಬರದಿರುವ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಮುಷ್ಕರ ನಡೆಯುತ್ತಿದೆ.
ಗ್ರಾಮ ಪಂಚಾಯಿತಿಗಳನ್ನು ಸ್ವಾಯತ್ತ ಸ್ಥಳೀಯ ಸರ್ಕಾರಗಳಾಗಿ ಪರಿವರ್ತಿಸಬೇಕು ಎಂಬುದು ಗ್ರಾಮ ಪಂಚಾಯಿತಿ ಸದಸ್ಯರ ಪ್ರಮುಖ ಬೇಡಿಕೆಯಾಗಿದೆ. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಗಳಿಗೆ ಬಲ ತುಂಬುವುದು, ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳನ್ನು ರಾಜ್ಯ ಶಿಷ್ಟಾಚಾರದ ವ್ಯಾಪ್ತಿಗೆ ತರುವುದು ಮತ್ತು ಅವರಿಗೆ ಕೇರಳ ಮಾದರಿಯಲ್ಲಿ ಗೌರವಧನ ಹಾಗೂ ಸೌಲಭ್ಯಗಳನ್ನು ನೀಡಬೇಕೆಂಬ ಬೇಡಿಕೆಗಳೂ ಇವೆ. ಅಷ್ಟಕ್ಕೂ, ಇದು ಏಕಾಏಕಿ ಆರಂಭವಾದ ಹೋರಾಟವೇನಲ್ಲ. ನೌಕರರು ಹಲವು ಬಾರಿ ಈ ಹಿಂದೆ ಸರ್ಕಾರಕ್ಕೆ ಮನವಿ ಮಾಡಿ, ಬಳಿಕ ಎಚ್ಚರಿಕೆ ನೀಡಿ, ಕೊನೆಗೆ ಪರಿಹಾರ ಕಾಣದಿದ್ದಾಗ ಹೋರಾಟ ಆರಂಭಿಸಿದ್ದಾರೆ. ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಮತ್ತು ಚುನಾಯಿತ ಸದಸ್ಯರು ಒಗ್ಗೂಡಿ ಮುಷ್ಕರ ನಡೆಸುತ್ತಿದ್ದು, ಸ್ಥಳೀಯ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಯ ತೀವ್ರತೆಗೆ ಸಾಕ್ಷಿ. ಅಧಿಕಾರಿಗಳು ಈ ಹಿಂದೆಯೇ ಮಾತುಕತೆಗೆ ಆಹ್ವಾನಿಸಿ, ಯೋಗ್ಯ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರೆ ಪರಿಸ್ಥಿತಿ ಹದಗೆಡುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಧರಣಿ ನಿರತರ ಜತೆ ಮಾತುಕತೆ ನಡೆಸಿ, ಅವರ ಮನವೊಲಿಸಿ, ಬೇಡಿಕೆಗಳನ್ನು ಸಹಾನುಭೂತಿಯಿಂದ ಆಲಿಸಬೇಕು. ಈ ವಿಚಾರದಲ್ಲಿ ಹಠಮಾರಿ ಧೋರಣೆಯನ್ನು ತಳೆಯದೆ, ಮಾತುಕತೆಯ ಪ್ರಕ್ರಿಯೆ ಶೀಘ್ರ ಪ್ರಾರಂಭಿಸಬೇಕು. ಆ ಮೂಲಕ ಗ್ರಾಮ ಪಂಚಾಯಿತಿಗಳ ಆಡಳಿತವನ್ನು ಹಳಿಗೆ ತರಬೇಕು.