ಸಂಪಾದಕೀಯ| ಉಗ್ರವಾದ ಸೋಲಲಿ

Khalistani
Published on

ಕೆನಡಾದಲ್ಲಿ ಕುಳಿತು ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಕೆಲವು ಸಿಖ್ಖರು ಆ ರಾಷ್ಟ್ರದಲ್ಲಿ ಅಕ್ರಮ ಶಸ್ತ್ರಾಸ್ತ್ರ, ಮಾದಕವಸ್ತು ಮತ್ತು ಮಾನವ ಕಳ್ಳಸಾಗಣೆಯಂತಹ ಹಲವಾರು ಅಪರಾಧಿಕ ಚಟುವಟಿಕೆಗಳ ಜಾಲದಲ್ಲಿ ಸಕ್ರಿಯರಾಗಿದ್ದಾರೆ. ಅದು ಗೊತ್ತಿದ್ದರೂ ಅಲ್ಲಿನ ಕೆಲ ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ಅವರನ್ನು ಬೆಂಬಲಿಸುವ ಮೂಲಕ ಭಾರತದ ಬೆನ್ನಿಗೆ ಚೂರಿ ಹಾಕಿದ್ದಾರೆ. ಸ್ಥಳೀಯ ರಾಜಕಾರಣಿಗಳಿಗೆ ಇವರು ಮತಬ್ಯಾಂಕ್ ಆಗಿರುವ ಕಾರಣ ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಸಾಮಾನ್ಯ ಸಿಖ್ಖರನ್ನು ಬೆದರಿಸಿ, ತಮಗೆ ಬೆಂಬಲ ನೀಡುವಂತೆ ಪ್ರತ್ಯೇಕತಾವಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ.

ಖಲಿಸ್ತಾನ್ ಪ್ರತ್ಯೇಕತಾವಾದ ಹೀಗೆ ದಿನೇದಿನೆ ಪ್ರಬಲವಾಗುತ್ತ ಸಾಗಿದಂತೆ ಕೆನಡಾ-ಭಾರತ ನಡುವಿನ ಸ್ನೇಹ ಹಳಸತೊಡಗಿದೆ. ಎಷ್ಟರ ಮಟ್ಟಿಗೆ ಎಂದರೆ, ಎರಡೂ ದೇಶಗಳು ಪರಸ್ಪರ ರಾಜತಾಂತ್ರಿಕರನ್ನು ವಾಪಸ್ ಕಳುಹಿಸಿವೆ. ಹತ್ಯೆಗೊಳಗಾದ ಖಲಿಸ್ತಾನ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಭಾರತದ ಪ್ರಕಾರ ಭಯೋತ್ಪಾದಕ. ಆದರೆ, ಈ ವಾಸ್ತವವನ್ನು ಒಪ್ಪಿಕೊಳ್ಳಲು ಕೆನಡಾ ಸಿದ್ಧವಿಲ್ಲ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸಿಖ್ಖರ ಬೆಂಬಲ ಗಳಿಸಲು ಹೋಗಿ, ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಹಾಳು ಮಾಡಿಕೊಂಡಿರುವುದು ವಿಪರ್ಯಾಸ. ಅಲ್ಲದೆ, ಭಾರತವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿಗಳಿಗೆ ಬಹಿರಂಗವಾಗಿ ಬೆಂಬಲಿಸುತ್ತಿರುವುದು, ಆರ್ಥಿಕ ನೆರವನ್ನು ಒದಗಿಸುತ್ತಿರುವುದು ಚಿಂತೆಯ ವಿಷಯವೂ ಹೌದು. ಖಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರರಿಗೆ ಕೆನಡಾ ನೆಲೆಯಾಗಿ ಪರಿವರ್ತನೆಯಾಗಿದ್ದು, ಮೇಲಿಂದ ಮೇಲೆ ಖಲಿಸ್ತಾನಿ ಉಗ್ರರು ಭಾರತವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲಿನ ಸರ್ಕಾರದ ಬೆಂಬಲ, ಚಿತಾವಣೆ ಇಲ್ಲದೆ ಪ್ರತ್ಯೇಕತಾವಾದಿ ಶಕ್ತಿಗಳು ಈ ಪರಿ ಬೆಳೆಯಲು ಸಾಧ್ಯವೇ ಇಲ್ಲ.

ರಾಜಕೀಯ ಲಾಭಕ್ಕಾಗಿ ಖಲಿಸ್ತಾನಿಗಳನ್ನು ಬೆಂಬಲಿಸುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ವಿರುದ್ಧ ಈಗ ಸ್ವಪಕ್ಷೀಯರೇ ಬಂಡಾಯವೆದ್ದಿದ್ದು, ಅಕ್ಟೋಬರ್ 28ರೊಳಗೆ ರಾಜೀನಾಮೆ ನೀಡುವಂತೆ ಲಿಬರಲ್ ಪಾರ್ಟಿಯ 20 ಸಂಸದರು ಆಗ್ರಹಿಸಿದ್ದಾರೆ. ಅಲ್ಲದೆ, ಚುನಾವಣಾ ಪ್ರಕ್ರಿಯೆಯಿಂದಲೂ ಅವರು ದೂರ ಇರಬೇಕು ಎಂದು ಆಗ್ರಹಿಸಿರುವುದು ಗಮನಾರ್ಹ. ಈ ಮಧ್ಯೆ ಟ್ರುಡೊ ಪುನರಾಯ್ಕೆಯ ಸಾಧ್ಯತೆ ಶೇಕಡ 28ರಷ್ಟು ಮಾತ್ರ ಎಂದು ಸಮೀಕ್ಷಾ ವರದಿಗಳು ಹೇಳಿವೆ. ಕೆನಡಾದಲ್ಲಿ ಒಟ್ಟು 8 ಲಕ್ಷ ಸಿಖ್ಖರಿದ್ದು, ಆ ಪೈಕಿ ಕೇವಲ ಸುಮಾರು 1 ಲಕ್ಷದಷ್ಟು ಸಿಖ್ಖರು ಮಾತ್ರ ಪ್ರತ್ಯೇಕತಾವಾದವನ್ನು ಬೆಂಬಲಿಸುತ್ತಾರೆ. ಉಳಿದವರೆಲ್ಲರೂ ಭಾರತದ ಪರವಾಗಿದ್ದಾರೆ ಹಾಗೂ ಭಾರತದೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಬಯಸುತ್ತಾರೆ. ಈ ವಿಷಯವನ್ನು ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬಲವಾಗಿ ಪ್ರತಿಪಾದಿಸಬೇಕಿದ್ದು, ಖಲಿಸ್ತಾನಿ ಉಗ್ರವಾದವನ್ನು ತುರ್ತಾಗಿ ಮಟ್ಟ ಹಾಕಬೇಕಿದೆ. ಖಲಿಸ್ತಾನಿಗಳಿಗೆ ದೊರೆಯುತ್ತಿರುವ ಆರ್ಥಿಕ ನೆರವು ಸೇರಿದಂತೆ ಇತರ ಬೆಂಬಲಗಳ ಸರಪಳಿಯನ್ನು ಕತ್ತರಿಸಬೇಕಿದೆ. ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಶಕ್ತಿಗಳು ಕೂಡ ಮೌನ ಮುರಿದು, ಉಗ್ರವಾದವನ್ನು ಹತ್ತಿಕ್ಕಲು ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net