

ಕಳೆದ ಕೆಲವು ತಿಂಗಳುಗಳಿಂದ ಮೀಸಲಾತಿ ಕುರಿತಂತೆ ಎರಡು ಸಮುದಾಯಗಳ ನಡುವಿನ ಹಿಂಸಾಚಾರ, ಉಗ್ರ ಪ್ರತಿಭಟನೆಯ ಕಾರಣದಿಂದಾಗಿ 150ಕ್ಕೂ ಅಧಿಕ ಸಾವನ್ನು ಕಂಡಿರುವ ಮಣಿಪುರ ರಾಜ್ಯದಲ್ಲಿ ಈಗ ದೇಶವು ತಲೆತಗ್ಗಿಸುವ ಹೀನ ಕೃತ್ಯವೊಂದು ವರದಿಯಾಗಿದೆ. ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ನಡೆದಿದ್ದ ಹಿಂಸಾಚಾರದ ವೇಳೆ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಬೆಳಕಿಗೆ ಬಂದಿದೆ. ಹಿಂಸಾಚಾರ ಭುಗಿಲೆದ್ದಿರುವ ರಾಜ್ಯದಲ್ಲಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವಂತಹ ಪರಿಸ್ಥಿತಿಯನ್ನು ಈ ದುಷ್ಕೃತ್ಯ ಸೃಷ್ಟಿಸಿದೆ. ಬುಡಕಟ್ಟು ಮಹಿಳೆಯರನ್ನು ವಿವಸ್ತ್ರಗೊಳಿಸಿದ ಈ ಹೇಯ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ.
ದೇಶೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್) ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ಮುನ್ನಾದಿನವೇ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಇಬ್ಬರು ಮಹಿಳೆಯರನ್ನು ಭತ್ತದ ಗದ್ದೆಗೆ ಕರೆದೊಯ್ಯುವ ದುಷ್ಕರ್ವಿುಗಳ ಗುಂಪು, ಅವರನ್ನು ಹಿಂಸಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಮಹಿಳೆಯರು ಸಹಾಯಕ್ಕಾಗಿ ಅಂಗಲಾಚುವುದು ದಾಖಲಾಗಿದೆ. ಸಂತ್ರಸ್ತ ಮಹಿಳೆಯರು ಕುಕಿ-ಜೋ ಬುಡಕಟ್ಟಿಗೆ ಸೇರಿದವರಾಗಿದ್ದು, ಇಬ್ಬರೂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಐಟಿಎಲ್ಎಫ್ ಹೇಳಿದೆ.
ಪರಿಶಿಷ್ಟ ಪಂಗಡದ ಮೀಸಲಾತಿ ನೀಡಬೇಕೆಂಬ ಮೈತೆಯಿ ಸಮುದಾಯದ ಬೇಡಿಕೆಗೆ ಕುಕಿ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಕಳೆದೆರಡು ತಿಂಗಳುಗಳಿಂದ ಉಭಯ ಸಮುದಾಯಗಳ ನಡುವೆ ಘರ್ಷಣೆ ಹಾಗೂ ಹಿಂಸಾಚಾರ ತೀವ್ರಗೊಂಡು ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದೆ. ಈಗ ಮಹಿಳೆಯರ ವಿವಸ್ತ್ರ ಪ್ರಕರಣವು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವ ಆತಂಕ ತಲೆದೋರಿದೆ.
ಭಾರತೀಯ ಸೇನೆ ವಿರುದ್ಧ 12 ಮಣಿಪುರ ಮಹಿಳೆಯರು 2004ರ ಜುಲೈ 15ರಂದು ಬೆತ್ತಲೆ ಪ್ರತಿಭಟನೆ ನಡೆಸಿದ್ದು ಕೂಡ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೀಗ, ತಮ್ಮ ರಾಜ್ಯದ ಮಹಿಳೆಯರನ್ನೇ ಅಲ್ಲಿನ ದುಷ್ಕರ್ವಿುಗಳು ಬಲವಂತವಾಗಿ ವಿವಸ್ತ್ರಗೊಳಿಸಿರುವುದು ಪರಿಸ್ಥಿತಿಯ ಕ್ರೂರ ವ್ಯಂಗ್ಯವಾಗಿದೆ. ಈಗಾಗಲೇ ರಾಜ್ಯದಲ್ಲಿ ಹಿಂಸಾಚಾರ ನಿಯಂತ್ರಿಸಲು ವಿಫಲವಾಗಿರುವ ಮಣಿಪುರದ ಮುಖ್ಯಮಂತ್ರಿ, ಬಿಜೆಪಿಯ ಎನ್. ಬಿರೇನ್ ಸಿಂಗ್ ರಾಜೀನಾಮೆಗೆ ವಿರೋಧ ಪಕ್ಷಗಳು ಆಗ್ರಹಿಸಿವೆ. ಈ ಘಟನೆಯು ದೇಶಕ್ಕೆ ಅವಮಾನಕರವಾಗಿದ್ದು, ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿರುವುದು ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿರುವುದನ್ನು ಬಿಂಬಿಸುತ್ತದೆ. ಈ ಘಟನೆಯ ಸತ್ಯಾಸತ್ಯತೆ ಪರಿಶೀಲಿಸಿ, ತಪ್ಪಿತಸ್ಥರಿಗೆ ಅತ್ಯುಗ್ರ ಶಿಕ್ಷೆಯನ್ನು ವಿಧಿಸಿದರೆ ಮಾತ್ರ ಆಡಳಿತಗಾರರ ಮೇಲೆ ದೇಶದ ಮಹಿಳೆಯರ ವಿಶ್ವಾಸ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತ ಗೌರವ ಉಳಿಯಲು ಸಾಧ್ಯ ಎಂಬುದನ್ನು ಸಂಬಂಧಪಟ್ಟವರು ಮನಗಾಣಬೇಕಿದೆ.