

ಆರ್ಥಿಕ ರಂಗಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಲ್ಲೇ ಎರಡು ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಕಾಡುತ್ತಿರುವಾಗ, ಜಿಡಿಪಿ ಪ್ರಮಾಣ ಇಳಿಮುಖವಾಗುತ್ತಿರುವಾಗ ಭಾರತದಲ್ಲಿ ಬೆಳವಣಿಗೆಯ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿರುವುದು ಉತ್ತಮ ಬೆಳವಣಿಗೆ. ಅಲ್ಲದೆ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹಿರಿಮೆಗೂ ಮತ್ತೊಮ್ಮೆ ಪಾತ್ರವಾಗಿರುವುದು ಗಮನಾರ್ಹ ಸಾಧನೆಯೇ ಸರಿ.
ಪ್ರಸಕ್ತ ಹಣಕಾಸು ವರ್ಷದ ಜುಲೈನಿಂದ ಸೆಪ್ಟೆಂಬರ್ವರೆಗಿನ ತ್ರೖೆಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇಕಡ 7.6ರಷ್ಟು ಬೆಳವಣಿಗೆ ದಾಖಲಿಸಿದ್ದು, ಅರ್ಥಶಾಸ್ತ್ರಜ್ಞರ ಅಂದಾಜುಗಳನ್ನು ಬುಡಮೇಲು ಮಾಡಿದೆ. ಈ ಅವಧಿಯಲ್ಲಿ ಚೀನಾದ ಆರ್ಥಿಕತೆ ಶೇ.4.9ರಷ್ಟು ಬೆಳವಣಿಗೆ ಕಂಡಿದೆ. ಭಾರತವು
ಶೇ.6.8ರಿಂದ 7.4ರಷ್ಟು ಬೆಳವಣಿಗೆ ಸಾಧಿಸಬಹುದು ಎಂದು ತಜ್ಞರು ಅಂದಾಜಿಸಿದ್ದರು. ಹಿಂದಿನ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೖೆಮಾಸಿಕದಲ್ಲಿ ಜಿಡಿಪಿ ಶೇ.6.2ರಷ್ಟು ಬೆಳವಣಿಗೆ ಕಂಡಿತ್ತು. ಈ ಬಾರಿ ಅದಕ್ಕಿಂತ 1.4ರಷ್ಟು ಜಾಸ್ತಿಯಾಗಿರುವುದಕ್ಕೆ ವಿತ್ತೀಯ ಕ್ಷೇತ್ರದ ಪಂಡಿತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಕ್ಷೇತ್ರದ ಸವಾಲುಗಳನ್ನು ಸೋಲಿಸಲು ಮತ್ತು ಬೆಳವಣಿಗೆಯತ್ತ ದಾಪುಗಾಲಿಡಲು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾದಂಥ ವಾತಾವರಣ ದೇಶದಲ್ಲಿ ಸೃಷ್ಟಿಯಾಗುತ್ತಿದೆ ಎಂಬುದನ್ನು ಈ ಅಂಕಿಸಂಖ್ಯೆಗಳು ನಿದರ್ಶಿಸುತ್ತಿವೆ. ಇದು ಕ್ಷೇತ್ರತಜ್ಞರ ಸ್ಪಷ್ಟ ಅಭಿಪ್ರಾಯ. ಉತ್ಪಾದನೆ, ಸೇವಾ ವಲಯ ಮುಂತಾದ ಕ್ಷೇತ್ರಗಳಲ್ಲಿ ಚಟುವಟಿಕೆ ಹೆಚ್ಚಾಗಿರುವುದು ಈ ಬಾರಿ ಜಿಡಿಪಿ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಆದರೆ, ಮುಂಬರುವ ತ್ರೖೆಮಾಸಿಕದಲ್ಲೂ ಈ ಬೆಳವಣಿಗೆ ದರವನ್ನು ಕಾಯ್ದುಕೊಳ್ಳುವ ಸವಾಲು ಸರ್ಕಾರದ ಮುಂದಿದೆ.
‘ಭಾರತದ ಆರ್ಥಿಕತೆ ಶಕ್ತಿಯುತವಾಗಿದೆ. ಸ್ವಯಂಚಾಲಿತವಾಗಿ ಚೇತರಿಸಿಕೊಳ್ಳುವ ಗುಣ ನಮ್ಮ ದೇಶದ ಆರ್ಥಿಕತೆಯಲ್ಲಿ ಅಂತರ್ಗತವಾಗಿದೆ. ಜಾಗತಿಕ ಸವಾಲುಗಳ ನಡುವೆಯೂ ನಮ್ಮ ಜಿಡಿಪಿ ಇಷ್ಟು ಬೆಳವಣಿಗೆ ದಾಖಲಿಸಿರುವುದು ಸಂತಸದ ವಿಷಯ’ ಎಂದು ಪ್ರತಿಕ್ರಿಯಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಮತ್ತೊಂದು ಸಕಾರಾತ್ಮಕ ಬೆಳವಣಿಗೆ, ಜಿಎಸ್ಟಿ ಸಂಗ್ರಹ ಕುರಿತಾದ್ದು. ನವೆಂಬರ್ನಲ್ಲಿ ಸರ್ಕಾರ ಜಿಎಸ್ಟಿಯಿಂದ 1.67 ಲಕ್ಷ ಕೋಟಿ ರೂ. ಸಂಗ್ರಹಿಸಿದೆ. 2022ರ ನವೆಂಬರ್ಗೆ ಹೋಲಿಸಿದರೆ (1.46 ಲಕ್ಷ ಕೋಟಿ ರೂ.) ಇದು ಶೇಕಡ 15ರಷ್ಟು ಹೆಚ್ಚು. ಅಕ್ಟೋಬರ್ನಲ್ಲಿ 1.72 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹಗೊಂಡಿತ್ತು. ಕಳೆದ ತಿಂಗಳಿಗಿಂತ ಕೊಂಚ ಕಡಿಮೆಯಾದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಏರಿಕೆ ಕಂಡುಬಂದಿದೆ. ಇದೇ ವರ್ಷದ ಏಪ್ರಿಲ್ನಲ್ಲಿ ಗರಿಷ್ಠ 1.87 ಲಕ್ಷ ಕೋಟಿ ರೂ. ಸಂಗ್ರಹಗೊಂಡಿತ್ತು. ಕಳೆದ 21 ತಿಂಗಳುಗಳಿಂದ ಸತತವಾಗಿ 1.40 ಲಕ್ಷ ಕೋಟಿ ರೂ.ಗಿಂತ ಅಧಿಕ ಸಂಗ್ರಹವಾಗುತ್ತಿದೆ. ಸೂಕ್ತ ನೀತಿ, ಅವುಗಳಿಗೆ ಉತ್ತೇಜನ ಮತ್ತು ಪಾರದರ್ಶಕ ವ್ಯವಸ್ಥೆ ಆರ್ಥಿಕಾಭಿವೃದ್ಧಿಗೆ ಬಲ ತುಂಬಬಲ್ಲವು ಎಂಬುದರಲ್ಲಿ ಅನುಮಾನವಿಲ್ಲ.