ಸಂಪಾದಕೀಯ: ಮಕ್ಕಳ ಕಡೆ ಗಮನ ಕೊಡಿ...

Children
Published on

ಕರೊನಾ ಹಾವಳಿಯಿಂದ ಶಾಲೆಗಳು ಆರಂಭಗೊಂಡಿಲ್ಲ. ಮಕ್ಕಳು ಎಂಟು ತಿಂಗಳಿಂದ ಮನೆಯಲ್ಲೇ ಇದ್ದು, ತಮಗೇ ಗೊತ್ತಿಲ್ಲದಂತೆ ಹಲವು ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಮುಖ್ಯವಾಗಿ, ಒಂಟಿತನ ಕಾಡುತ್ತಿರುವುದರಿಂದ ಖಿನ್ನತೆಯ ಕೂಪಕ್ಕೆ ಜಾರುತ್ತ, ಕಾಲ್ಪನಿಕ/ಡಿಜಿಟಲ್ ಲೋಕವನ್ನೇ ವಾಸ್ತವ ಎಂದು ತಿಳಿಯುತ್ತಿದ್ದಾರೆ. ಸ್ನೇಹಿತರ ಸಂಪರ್ಕ, ಆಟೋಟ, ಹೊಸ ಚಟುವಟಿಕೆಗಳು ಇಲ್ಲದೆ ಮನಸ್ಸು ಮಂಕಾಗಿದ್ದು, ಆಲಸ್ಯ, ಜಡತ್ವ ಹೆಚ್ಚುತ್ತಿದೆ. ಅಲ್ಲದೆ, ಅತಿಯಾದ ಬೊಜ್ಜು ಸೇರಿ ದೈಹಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. 6ರಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಇಂಥ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅವರನ್ನು ಒಂಟಿತನ, ಖಿನ್ನತೆಯಿಂದ ಹೊರತರಲು ಪ್ರಯತ್ನಿಸದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾನಸಿಕ ತಜ್ಞವೈದ್ಯರು ಎಚ್ಚರಿಸಿದ್ದಾರೆ. ಮೊಬೈಲ್ ಗೀಳು, ಟಿವಿ ವೀಕ್ಷಣೆ, ವಿಡಿಯೋಗೇಮ್ಲ್ಲಿ ಮುಳುಗಿ ಮಕ್ಕಳು ಸೃಜನಶೀಲತೆಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಕೆಲವೊಮ್ಮೆಯಂತೂ, ಮಕ್ಕಳನ್ನು ಸೂಮ್ಮನೆ ಕೂರಿಸಲು ಪಾಲಕರೇ ಅವರ ಕೈಗೆ ಮೊಬೈಲ್ ಕೊಡುವುದುಂಟು.

ಸೋಂಕು ಪ್ರಕರಣಗಳು ಕಡಿಮೆ ಇರುವ ರಾಜ್ಯಗಳಲ್ಲಿ ಶಾಲೆ ಪುನರಾರಂಭದ ಬಗ್ಗೆ ಚಿಂತನೆ ಪ್ರಾರಂಭವಾಗಿದೆ. ಅಸ್ಸಾಂನಲ್ಲಿ ಅಲ್ಲಿನ ಸರ್ಕಾರ ನ.2ರಿಂದ 6, 7, 8ನೇ ತರಗತಿ ಶಾಲೆಗಳನ್ನು ಆರಂಭಿಸಿದೆ. ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ, ಪರಿಸ್ಥಿತಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ, ತರಾತುರಿಯಲ್ಲಿ ಶಾಲೆಗಳನ್ನು ಆರಂಭಿಸುವಂತೆಯೂ ಇಲ್ಲ. ಹಾಗಂತ ಮಕ್ಕಳನ್ನು ಅವರ ಪಾಡಿಗೆ ಬಿಟ್ಟು, ಆನ್​ಲೈನ್ ಪಾಠ ಕೇಳಲಿ ಎಂದು ಸುಮ್ಮನಿರುವಂತಿಲ್ಲ. ಮಕ್ಕಳ ಮನಸ್ಸು ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಯಸುತ್ತದೆ. ಹೊಸ ಬಗೆಯ ಆಟಗಳು, ನವೀನ ಕಲಿಕೆಯತ್ತ ತುಡಿತವಿರುತ್ತದೆ. ಮಕ್ಕಳನ್ನು ಕ್ರಿಯಾಶೀಲವಷ್ಟೇ ಅಲ್ಲದೆ ಖುಷಿಯಾಗಿ ಇರಿಸುವಂಥ ಜವಾಬ್ದಾರಿ ಶಾಲೆಗಳ ಮೇಲೂ, ಪಾಲಕರ ಮೇಲೂ ಸಮಾನವಾಗಿದೆ.

ಹಿಂದೆಲ್ಲ ಹಿರಿಯರೇ ಎಳೆ ಮನಸ್ಸುಗಳಿಗೆ ಉತ್ತಮ ಸಂಗತಿಗಳನ್ನು, ಹೊಸ ಕೌಶಲಗಳನ್ನು ಕಲಿಸಿ ಕೊಡುತ್ತ, ಅವರ ಉತ್ಸಾಹವನ್ನು ವರ್ಧಿಸುತ್ತಿದ್ದರು. ಇಂದಿನ ದಿನಗಳಲ್ಲೂ ಮಕ್ಕಳು ಮನೆಯಲ್ಲಿ ಇರುವುದನ್ನು ಹೊಸ ಕಲಿಕೆಗೆ ಅವಕಾಶ ಎಂದು ಭಾವಿಸಿಕೊಂಡು ಪಾಲಕರು ಅವರ ಜತೆಗೆ ಸಮಯ ಕಳೆಯಬೇಕು. ಗ್ರಾಮೀಣ ಕ್ರೀಡೆಗಳು, ಬರವಣಿಗೆ, ಓದು, ಬುದ್ಧಿಶಕ್ತಿಗೆ ಕಸರತ್ತು ನೀಡಬಲ್ಲ ಚಟುವಟಿಕೆಗಳು, ಅಲ್ಲದೆ ವ್ಯಾಯಾಮ ಕಲಿಸಿ ಕೊಡುತ್ತ ಮನೆಗೆಲಸವನ್ನೂ ಹೇಳಿಕೊಡಬಹುದು. ಮರಗಿಡ, ಪಕ್ಷಿಗಳ ಬಗ್ಗೆ ಅರಿವು ನೀಡುತ್ತ ನಿಸರ್ಗಪ್ರೀತಿಯನ್ನು ಬೆಳೆಸಬಹುದು. ಬಾಂಧವ್ಯದ ಎಳೆಯನ್ನು ಸ್ಥಾಪಿಸಲು ಕೂಡ ಇದು ಸಕಾಲ. ಪರಸ್ಪರ ಭೇಟಿಗೆ ಅವಕಾಶ ಇರದಿದ್ದರೇನಂತೆ ದೂರವಾಣಿ ಮುಖಾಂತರ ಬಂಧುಬಳಗ, ಸ್ನೇಹಿತರನ್ನು ಮಾತನಾಡಿಸಬೇಕು. ಹೊಸ ಹವ್ಯಾಸಗಳನ್ನು ಮೂಡಿಸುತ್ತ, ಪಠ್ಯೇತರ ಪುಸ್ತಕಗಳನ್ನೂ ಓದಲು ಪ್ರೋತ್ಸಾಹಿಸಬೇಕು. ಒಂದು ವೇಳೆ ಮಗುವಿನಲ್ಲಿ ಗಂಭೀರ ಖಿನ್ನತೆಯ ಲಕ್ಷಣಗಳಿದ್ದರೆ, ತಡಮಾಡದೆ ಮನೋವೈದ್ಯರನ್ನು ಸಂರ್ಪಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಒಟ್ಟಾರೆ, ಮಕ್ಕಳ ಮನಸ್ಸಿನ ಗೂಡಿನಲ್ಲಿ ಖುಷಿ ಸ್ಥಾಪಿಸುವ ಹೊಣೆಗಾರಿಕೆ ಎಲ್ಲರ ಮೇಲೂ ಇದೆ ಎಂಬುದನ್ನು ಮರೆಯುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net