

ದೇಶದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ 2021ರಲ್ಲಿ ಅಳವಡಿಸಿದ ಫಾಸ್ಟ್ಯಾಗ್ ವ್ಯವಸ್ಥೆ ಈಗಾಗಲೇ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. 45 ಸಾವಿರ ಕಿಮೀ ಹೆದ್ದಾರಿಯಲ್ಲಿ 1200ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಿವೆ. 8 ಕೋಟಿ ಜನರು ಫಾಸ್ಟ್ಯಾಗ್ ಬಳಸುತ್ತಿದ್ದಾರೆ. ಪ್ರತಿದಿನ ಅದರಿಂದ ಹಲವು ಕೋಟಿ ರೂ. ಶುಲ್ಕ ಸಂಗ್ರಹವಾಗುತ್ತಿದೆ. ಶೇ. 97ರಷ್ಟು ವಾಹನ ಸವಾರರು ಫಾಸ್ಟ್ಯಾಗ್ ಬಳಸುತ್ತಿರುವ ಕಾರಣ ಟೋಲ್ ಪ್ಲಾಜಾಗಳಲ್ಲಿ ಕಾಯುವ ಅವಧಿಯೂ ಗಣನೀಯವಾಗಿ ಕಡಿಮೆಯಾಗಿದೆ. ಈ ಮಧ್ಯೆ, ಫಾಸ್ಟ್ಯಾಗ್ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಗುರುವಾರ ಅಧಿಸೂಚನೆಯೊಂದನ್ನು ಹೊರಡಿಸಿದೆ. ವಾಹನಗಳ ಮುಂಭಾಗದ ಗಾಜಿನ ಮೇಲೆ ಕಾಣಿಸುವಂತೆ ಫಾಸ್ಟ್ಯಾಗ್ ಅಂಟಿಸಿರದಿದ್ದರೆ ದುಪ್ಪಟ್ಟು ಟೋಲ್ ಶುಲ್ಕ ವಸೂಲಿ ಮಾಡುವಂತೆ ಸಂಬಂಧಪಟ್ಟ ಏಜೆನ್ಸಿಗಳಿಗೆ ಮತ್ತು ಸಿಬ್ಬಂದಿಗೆ ಸೂಚಿಸಿದೆ. ಎನ್ಎಚ್ಎಐನ ಈ ಕ್ರಮ ಸ್ವಾಗತಾರ್ಹವಾಗಿದೆ. ಏಕೆಂದರೆ, ಕೆಲವು ವಾಹನ ಸವಾರರು ಉದ್ದೇಶಪೂರ್ವಕವಾಗಿಯೇ ವಾಹನದ ಗಾಜಿಗೆ ಫಾಸ್ಟ್ಯಾಗ್ ಅಂಟಿಸಿರುವುದಿಲ್ಲ. ಟೋಲ್ಪ್ಲಾಜಾ ಬಂದಾಗ ಕೈಯಿಂದಲೇ ಫಾಸ್ಟ್ಯಾಗ್ ಅನ್ನು ಗಾಜಿಗೆ ಹಿಡಿದು ಮುಂದಕ್ಕೆ ಹೋಗುತ್ತಾರೆ. ಒಂದೇ ಫಾಸ್ಟ್ಯಾಗ್ ಅನ್ನು ಬೇರೆ ಬೇರೆ ವಾಹನಗಳಿಗೆ ಬಳಸುವುದು ಇದಕ್ಕೆ ಕಾರಣ.
ಕೆಲವೊಮ್ಮೆ ಫಾಸ್ಟ್ಯಾಗ್ ಸರಿಯಾಗಿ ಗಾಜಿಗೆ ಅಂಟಿಕೊಳ್ಳದಿದ್ದರೆ ಬೇಗ ಕಾರ್ಡ್ರೀಡ್ ಆಗುವುದಿಲ್ಲ. ಪರಿಣಾಮ, ಟೋಲ್ ಪ್ಲಾಜಾದಲ್ಲಿ ಬೇರೆ ವಾಹನ ಸವಾರರಿಗೆ ಅನಗತ್ಯ ವಿಳಂಬ ಆಗುತ್ತದೆ. ಸಿಬ್ಬಂದಿಯೊಂದಿಗೂ ವಿನಾಕಾರಣ ಜಗಳಕ್ಕೆ ಆಸ್ಪದವಾಗುತ್ತದೆ. ಈ ಕುರಿತು ಟೋಲ್ ಸಂಗ್ರಹಿಸುವ ಏಜೆನ್ಸಿಗಳಿಗೆ ಸ್ಪಷ್ಟ ಮಾರ್ಗಸೂಚಿ ಕಳಿಸಿರುವ ಎನ್ಎಚ್ಎಐ, ಅದನ್ನು ಟೋಲ್ಗಳಲ್ಲಿ ಎಲ್ಲರಿಗೂ ಕಾಣಿಸುವಂತೆ ಡಿಸ್ಪ್ಲೇ ಮಾಡಲು ಸೂಚಿಸಿದೆ. ಪದೇಪದೆ ಈ ತಪ್ಪು ಮಾಡುವ ವಾಹನಗಳನ್ನು ಬ್ಲ್ಯಾಕ್ಲಿಸ್ಟ್ಗೆ ಹಾಕಲೂ ಮುಂದಾಗಿದೆ. ಫಾಸ್ಟ್ಯಾಗ್ಗಳನ್ನು ಮಾರಾಟ ಮಾಡುವಾಗಲೇ ವಾಹನ ಮಾಲೀಕರು ಅದನ್ನು ಗಾಜಿನ ಒಳಗೆ ಅಂಟಿಸುತ್ತಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಬ್ಯಾಂಕ್ಗಳಿಗೂ ನಿರ್ದೇಶನ ನೀಡಿದೆ. ಎನ್ಎಚ್ಎಐನ ಈ ಕ್ರಮ ಸಮರ್ಥನೀಯವಾಗಿದೆ. ಆದರೆ, ಇದರ ಜತೆಗೆ ಎನ್ಎಚ್ಎಐ ತುರ್ತಾಗಿ ಗಮನಹರಿಸಲೇಬೇಕಾದ, ಫಾಸ್ಟ್ಯಾಗ್ಗೆ ಸಂಬಂಧಿಸಿದ ಇನ್ನೂ ಹಲವು ಸಮಸ್ಯೆಗಳಿವೆ. ಅವು ಪ್ರತಿದಿನವೂ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಗಳು. ವಾಹನ ಸವಾರರ ಕಡೆಯಿಂದ ಯಾವುದೇ ತಪ್ಪು ಇಲ್ಲದಿದ್ದರೂ ಕೆಲವು ಟೋಲ್ಗಳಲ್ಲಿ ಬೇಗ ಫಾಸ್ಟ್ಯಾಗ್ ರೀಡ್ ಆಗುವುದಿಲ್ಲ. ಕೆಲವೊಮ್ಮೆ ಸವಾರರ ಖಾತೆಯಿಂದ ಎರಡೆರಡು ಬಾರಿ ಶುಲ್ಕ ಕಟ್ ಆಗುತ್ತದೆ. ಅದು ಗೊತ್ತಾಗುವ ಹೊತ್ತಿಗೆ ಸವಾರರು ಹಲವು ಕಿಮೀ ಕ್ರಮಿಸಿರುತ್ತಾರೆ. ಮತ್ತೆ ಕೆಲವು ಬಾರಿ, ಹೆದ್ದಾರಿಗೆ ವಾಹನವನ್ನು ತರದೇ ಇದ್ದರೂ ಏಕಾಏಕಿ ಫಾಸ್ಟ್ಯಾಗ್ ಬ್ಯಾಲೆನ್ಸ್ ಕಡಿಮೆ ಆಗಿಬಿಡುತ್ತದೆ. ಇಂತಹ ಹಲವು ಸಮಸ್ಯೆಗಳನ್ನು ವಾಹನ ಸವಾರರು ಪ್ರತಿನಿತ್ಯ ಅನುಭವಿಸುತ್ತಿದ್ದಾರೆ. ಅದರ ಬಗ್ಗೆಯೂ ಎನ್ಎಚ್ಎಐ ಗಮನ ಹರಿಸಬೇಕಾಗಿದೆ.