ಸಂಪಾದಕೀಯ| ಸರ್ವರ್ ವಿಘ್ನ ಸರಿಪಡಿಸಿ

Server problem
Published on

ರಾಜ್ಯ ಸರ್ಕಾರ ಹಲವು ಇಲಾಖೆಗಳಲ್ಲಿ ಇ-ಆಡಳಿತ ಹಾಗೂ ಇ-ಸೇವೆಗಳನ್ನು ಒದಗಿಸತೊಡಗಿದ ನಂತರ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಸರ್ವರ್ ಸಮಸ್ಯೆ ಈಗ ದೊಡ್ಡ ಪ್ರಮಾಣದಲ್ಲಿಯೇ ಕಾಡತೊಡಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಹಿನ್ನೆಲೆಯಲ್ಲಿ ತಾನು ನೀಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಯೋಜನೆಯ ಫಲಾನುಭವಿಗಳಾಗಲು ಅಪಾರ ಸಂಖ್ಯೆಯಲ್ಲಿ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ. ಈಗ ಮನೆಯ ಯಜಮಾನಿಗೆ ಮಾಸಿಕ 2000 ರೂಪಾಯಿ ಧನಸಹಾಯ ಒದಗಿಸುವ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಜನರು ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಸೈಬರ್ ಸೆಂಟರ್​ಗಳಿಗೆ ಮುಗಿಬಿದ್ದಿದ್ದಾರೆ. ಎಲ್ಲೆಡೆ ಅರ್ಜಿ ಸಲ್ಲಿಸುವ ಒತ್ತಡದ ಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಅರ್ಜಿದಾರರು ಪರದಾಡುವ ಪರಿಸ್ಥಿತಿ ತಲೆದೋರಿದೆ.

ಸರ್ವರ್ ಸಮಸ್ಯೆಯಿಂದಾಗಿ ಕಾದು ಸುಸ್ತಾಗುವ ಮಹಿಳಾ ಅರ್ಜಿದಾರರು ಅನಿವಾರ್ಯವಾಗಿ ಹಣ, ದಾಖಲೆಗಳನ್ನು ಸರ್ವರ್ ಸೆಂಟರ್​ನವರಿಗೆ ನೀಡುತ್ತಿದ್ದಾರೆ. ಸರ್ವರ್ ಚಾಲನೆಯಾದಾಗ ಅವರು ಅರ್ಜಿ ಭರ್ತಿ ಮಾಡುತ್ತಿದ್ದಾರೆ. ಹೀಗಾಗಿ, ಕೆಲ ಸೈಬರ್ ಸೆಂಟರ್​ನವರು ಅರ್ಜಿದಾರರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವೇ ಅಂದಾಜಿಸಿದಂತೆ ಗೃಹ ಲಕ್ಷ್ಮೀ ಯೋಜನೆಗೆ ರಾಜ್ಯದಲ್ಲಿನ ಒಂದೂವರೆ ಕೋಟಿ ಮಹಿಳೆಯರು ಫಲಾನುಭವಿಗಳಾಗಬಹುದಾಗಿದೆ. ಈ ಯೋಜನೆಗೆ ಫಲಾನುಭವಿಗಳನ್ನು ನಿಗದಿಪಡಿಸುವಲ್ಲಿ ಈಗ ಕೆಲ ಷರತ್ತುಗಳನ್ನು ವಿಧಿಸಿರುವುದರಿಂದ ಈ ಸಂಖ್ಯೆ ಸ್ವಲ್ಪ ತಗ್ಗಿದರೂ ಒಂದು ಕೋಟಿಯಂತೂ ದಾಟಲಿದೆ. ಸರ್ಕಾರದ ಇನ್ನೊಂದು ಗ್ಯಾರಂಟಿ ಯೋಜನೆಯಾದ ಗೃಹ ಜ್ಯೋತಿಯ ಫಲಾನುಭವಿಯಾಗಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲಾಗುತ್ತಿದೆ. ಈ ಪೋರ್ಟಲ್​ನಲ್ಲೂ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ ಹೊರಡಿಸಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಉದ್ಯೋಗಾಕಾಂಕ್ಷಿಗಳಿಗೆ ಕೂಡ ಸರ್ವರ್ ಸಮಸ್ಯೆ ಎದುರಾಗಿದೆ. ಅರ್ಜಿ ಸಲ್ಲಿಸುವ ಅವಧಿ ಮುಗಿದುಹೋಗುವ ಆತಂಕದಲ್ಲಿರುವ ಅಭ್ಯರ್ಥಿಗಳು, ಅವಧಿ ವಿಸ್ತರಣೆ ಮಾಡುವಂತೆ ಪ್ರಾಧಿಕಾರಕ್ಕೆ ಆಗ್ರಹವನ್ನೂ ಮಾಡಿದ್ದಾರೆ.

ಪಹಣಿ ಪತ್ರ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಾರ್ಸಾ, ಮರಣ ಪ್ರಮಾಣಪತ್ರ, ಜನನ ಪ್ರಮಾಣಪತ್ರ ಮುಂತಾದವುಗಳನ್ನು ಪಡೆಯುವಾಗ ಕೂಡ ಅನೇಕ ಕಡೆಗಳಲ್ಲಿ ಸರ್ವರ್ ಸಮಸ್ಯೆ ಕಾಡತೊಡಗಿವೆ. ಸರ್ವರ್, ನೆಟ್​ವರ್ಕ್, ತಂತ್ರಾಂಶ... ಹೀಗೆ ಒಂದಿಲ್ಲೊಂದು ಅಡಚಣೆಗಳು ಬಾಧಿಸುತ್ತಲೇ ಇವೆ. ನೋಂದಣಿ ಕಚೇರಿಗಳಲ್ಲಂತೂ ಸರ್ವರ್ ಸಮಸ್ಯೆ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಸರ್ಕಾರಕ್ಕೆ ನಿರಂತರವಾಗಿ ದೊಡ್ಡ ಆದಾಯವನ್ನು ತಂದುಕೊಂಡು ನೋಂದಣಿ ಕಚೇರಿಗಳಲ್ಲಿ ಈ ಪರಿಸ್ಥಿತಿ ಇರುವುದಾದರೆ ಇನ್ನು ಬೇರೆಡೆ ಸುಸ್ಥಿತಿ ಇರಲು ಹೇಗೆ ಸಾಧ್ಯ? ಹಲವು ಬ್ಯಾಂಕ್​ಗಳ ಖಾತೆಗಳನ್ನು ಜೋಡಿಸಿ ಮೊಬೈಲ್​ಫೋನ್ ಅಪ್ಲಿಕೇಶನ್​ಗಳ ಮೂಲಕ ನಗದುರಹಿತ ಹಣ ಪಾವತಿ ವ್ಯವಸ್ಥೆಯಾದ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್​ಫೇಸ್) ಅನ್ನು ಭಾರತ ಸರ್ಕಾರವು ರೂಪಿಸಿದೆ. ಇದು ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಜಾಗತಿಕವಾಗಿ ಮನ್ನಣೆ ಗಳಿಸಿದೆ. ಪ್ರತಿನಿತ್ಯ 3 ಕೋಟಿಗೂ ಅಧಿಕ ವಹಿವಾಟುಗಳು ಈ ವ್ಯವಸ್ಥೆ ಮೂಲಕ ನಡೆಯುತ್ತಿದ್ದರೂ ಸರ್ವರ್ ಸಮಸ್ಯೆ, ನೆಟ್​ವರ್ಕ್ ಸಮಸ್ಯೆ ಬಾಧಿಸಿಲ್ಲ. ಇ - ಆಡಳಿತ ಜಾರಿಯಲ್ಲಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಸರ್ವರ್ ಸಮಸ್ಯೆಯನ್ನು ನಿವಾರಿಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲೇನಲ್ಲ. ಈ ನಿಟ್ಟಿನಲ್ಲಿ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಷ್ಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net