

ಪ್ರಕೃತಿಯ ಮೇಲೆ ದೌರ್ಜನ್ಯ ಎಸಗಿದರೆ, ಪ್ರಕೃತಿಯ ಸಂರಚನೆಯಲ್ಲಿ ಮಾನವನ ಹಸ್ತಕ್ಷೇಪ ಅತಿಯಾದರೆ, ಪರಿಸರದ ಹಿತವನ್ನು ಕಡೆಗಣಿಸಿ ಮಾನವನ ಸ್ವಾರ್ಥವೇ ವಿಜೃಂಭಿಸಿದರೆ ಏನೆಲ್ಲ ಬೆಲೆ ತೆರಬೇಕಾಗುತ್ತದೆ ಎಂಬ ಪಾಠವನ್ನು ಇತ್ತೀಚಿನ ದಿನಗಳಲ್ಲಿ ನಿಸರ್ಗ ಮನುಕುಲಕ್ಕೆ ಕಲಿಸಿದೆ. ಸರ್ಕಾರದ ನೀತಿಗಳು, ಯೋಜನೆಗಳು, ಚಿಂತನೆಗಳು, ಜನರ ಜೀವನಶೈಲಿ ಎಲ್ಲವೂ ಬದಲಾಗಬೇಕಾದ ಮತ್ತು ಪರಿಸರಕ್ಕೆ ಪೂರಕವಾಗಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಆದರೆ, ಅನೇಕ ಅವಘಡಗಳು, ಕಹಿ ಅನುಭವಗಳ ನಂತರವೂ ನಾಗರಿಕ ಸಮುದಾಯ ಎಚ್ಚೆತ್ತುಕೊಳ್ಳುವುದಿಲ್ಲ ಎಂಬುದು ಅಪ್ರಿಯ ವಾಸ್ತವ. ಆದರೆ, ನಿಸರ್ಗದ ಸಹನೆಗೂ ಒಂದು ಮಿತಿ ಇದೆ, ತಥಾಕಥಿತ ಅಭಿವೃದ್ಧಿಗೂ ಒಂದು ಮಿತಿ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.
ಗೋವಾದಲ್ಲಿ ಬೆಟ್ಟ ಗುಡ್ಡಗಳನ್ನು ಕಡಿದರೆ ಅಥವಾ ಅಂಥ ಅಕ್ರಮ ಚಟುವಟಿಕೆಗಳನ್ನು ನಡೆಸಿದರೆ ಒಂದು ಕೋಟಿ ರೂಪಾಯಿ ದಂಡ ವಿಧಿಸಲು ಸಂಬಂಧಿಸಿದ ಕಾನೂನಿಗೆ ಗೋವಾ ಸರ್ಕಾರ ಶೀಘ್ರದಲ್ಲೇ ತಿದ್ದುಪಡಿ ತರಲು ಉದ್ದೇಶಿಸಿದೆ. ‘ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ಬೆಟ್ಟ ಕಡಿಯಲು ಯಾರಿಗೂ ಅನುಮತಿ ನೀಡಿಲ್ಲ. ಆದರೆ, ಇಂಥ ಅಕ್ರಮ ಚಟುವಟಿಕೆಗಳನ್ನು ತಡೆಯಲು ನಿಯಮದಲ್ಲಿ ಶೀಘ್ರದಲ್ಲೇ ತಿದ್ದುಪಡಿ ತರಲಾಗುವುದು’ ಎಂದು ಗೋವಾದ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.
ವಾಣಿಜ್ಯ ಉದ್ದೇಶಗಳಿಗಾಗಿ ಬೆಟ್ಟ ಗುಡ್ಡಗಳನ್ನು ಮನಸೋಇಚ್ಛೆ ಕಡಿದರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ದೇಶದ ಹಲವು ರಾಜ್ಯಗಳಲ್ಲಿ ಸಂಭವಿಸಿದ ಗುಡ್ಡ ಜರಿತ, ಭೂಕುಸಿತ ಪ್ರಕರಣಗಳೇ ಸಾಕ್ಷಿಯಾಗಿವೆ. ಆ ಘಟನೆಗಳಲ್ಲಿ ಸಾಕಷ್ಟು ಆಸ್ತಿಪಾಸ್ತಿ ಹಾನಿ, ಪ್ರಾಣನಷ್ಟ ಕೂಡ ಸಂಭವಿಸಿದೆ. ಪರಿಸರಸೂಕ್ಷ್ಮ ಪ್ರದೇಶಗಳಲ್ಲಿ ಮಾನವನ ಅತಿಯಾದ ಹಸ್ತಕ್ಷೇಪವನ್ನು ತಡೆಯಲೇ ಬೇಕಿದೆ. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರದ ಚಿಂತನೆ ಶ್ಲಾಘನೀಯವಾಗಿದೆ. ಅಂತಹ ಕಠಿಣ ಕ್ರಮಗಳನ್ನು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳೂ ಕೈಗೊಳ್ಳಲು ಮುಂದಾಗಬೇಕಿದೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತು. ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ತಾಪಮಾನ ಇಂಥ ದುರಂತಗಳಿಗೆ ಕಾರಣವಾಗುತ್ತಿವೆ ಎಂಬುದನ್ನು ತಜ್ಞರು ಗಟ್ಟಿದನಿಯಲ್ಲೇ ಹೇಳಿದ್ದಾರೆ. ಕೈಗಾರೀಕಿಕರಣದ ಆರಂಭದ ಅವಧಿಗೆ ಹೋಲಿಸಿದರೆ ಈಗ ವಾತಾವರಣದ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಿದೆ. ಭೂಕುಸಿತ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಜನರು ವಾಸಿಸುವುದಕ್ಕೆ ಅಥವಾ ಆಸ್ತಿ ಹೊಂದುವುದಕ್ಕೆ ನಿಯಂತ್ರಣ ಹೇರಬೇಕು ಎಂಬ ಪರಿಸರ ತಜ್ಞರ ಮಾತನ್ನು ಸರ್ಕಾರಗಳು ನಿರ್ಲಕ್ಷಿಸಿಕೊಂಡೇ ಬಂದಿವೆ. ಮೂಲಸೌಕರ್ಯ ಅಭಿವೃದ್ಧಿ, ಕಲ್ಲು ಗಣಿಗಾರಿಕೆ, ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುವುದು ಹೀಗೆ ಹಲವು ಅಪಸವ್ಯಗಳಿಗೆ ನಿಯಂತ್ರಣ ಹಾಕಲಾಗಿಲ್ಲ. ಇಂಥ ಚಟುವಟಿಕೆಗಳನ್ನು ತಡೆಯಲು ಕಠಿಣವಾದ ನಿರ್ಧಾರಗಳನ್ನು ತಳೆಯುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಗೋವಾ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಕರ್ನಾಟಕದಲ್ಲೂ ಪಶ್ಚಿಮ ಘಟ್ಟಗಳ ಸಂರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಕಠಿಣ ನಿರ್ಧಾರಗಳನ್ನು, ಪರಿಸರಕ್ಕೆ ಪೂರಕ ಕ್ರಮಗಳನ್ನು ಅನುಷ್ಠಾನಕ್ಕೆ ತಂದಲ್ಲಿ ಮುಂದಿನ ದಿನಗಳಲ್ಲಿನ ಅನಾಹುತಗಳನ್ನು ತಡೆಯಬಹುದು.