

ಕಲ್ಕತ್ತಾ: ವಿಶ್ವದ ಮಿಲಿಯನ್ ಡಾಲರ್ ಟೂರ್ನಿ ಎಂದೇ ಹೆಸರುವಾಸಿಯಾಘಿರುವ ಐಪಿಎಲ್ ಶುರುವಾಗುವುದಕ್ಕೆ ಹಲವು ತಿಂಗಳುಗಳು ಬಾಕಿ ಉಳಿದಿದ್ದು, 18ನೇ ಆವೃತ್ತಿಯ ಕುರಿತಾದ ಸುದ್ದಿಗಳು ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಐಪಿಎಲ್ಗೆ ಸಂಬಂಧಿಸಿದಂತೆ ಕನ್ನಡಿಗೆ ಕೆ.ಎಲ್. ರಾಹುಲ್ ಕುರಿತಾದ ಸುದ್ದಿಗಳು ಸಖತ್ತಾಗಿ ಹರಿದಾಡುತ್ತಿವೆ. ಏಕೆಂದರೆ ಅವರು ಮುಂಬರುವ ಟೂರ್ನಿಯಲ್ಲಿ ಆರ್ಸಿಬಿ ಪರ ಆಡಲಿದ್ದಾರೆ ಎಂದು ಹೇಳಲಾಗಿದ್ದು, ಅಭಿಮಾನಿಗಳು ಇದು ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಆದರೆ, ಅಭಿಮಾನಿಗಳ ಕೋರಿಕೆಗೆ ಟ್ವಿಸ್ಟ್ ಸಿಕ್ಕಿದ್ದು, ಯಾಕೋ ನೆರವೇರುವಂತೆ ಕಾಣುತ್ತಿಲ್ಲ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ 2025ರಲ್ಲಿ ನಡೆಯುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕನ್ನಡಿಗ, ಲಖನೌ ಸೂಪರ್ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಖಾಸಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ರಾಹುಲ್ ಲಖನೌ ತೊರೆದು ಆರ್ಸಿಬಿ ಸೇರಲಿದ್ದಾರೆ ಎಂದು ಹೇಳಲಾಗಿದೆ. ರಾಹುಲ್ ತಮ್ಮ ಹೆಸರನ್ನು ಆಕ್ಷನ್ಗೆ ನೀಡಿದ್ದಾರೆ ಎಂದು ವರದಿ ಮಾಡಿದೆ.
ರಾಹುಲ್ ಅವರ ಈ ನಿರ್ಧಾರಕ್ಕೆ ಮುಖ್ಯ ಕಾರಣ ಲಖನೌ ಸೂಪರ್ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಎಂದು ಹೇಳಲಾಗಿದೆ. ಏಕೆಂದರೆ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಹೀನಾಯವಾಗಿ ಸೋಲುಂಡಿತ್ತು. ಪಂದ್ಯದ ಬಳಿಕ ರಾಹುಲ್ ಅವರನ್ನು ತಂಡದ ಮಾಲೀಕ ಸಂಜೀವ್ ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಸಖತ್ ವೈರಲ್ ಆಗಿತ್ತು. ಇದೀಗ ಈ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಹುಲ್ ಲಖನೌ ತೊರೆದು ಆರ್ಸಿಬಿ ಸೇರಲಿದ್ದಾರೆ ಎಂಬ ಸುದ್ದಿ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇದೀಗ ಈ ಸುದ್ದಿಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ರಾಹುಲ್ ಎಲ್ಎಸ್ಜಿಯಲ್ಲೇ ಉಳಿಯಲಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ರಾಹುಲ್ರನ್ನು ತಮ್ಮ ಕವೇರಿಗೆ ಕರೆಸಿ ಮಾತುಕತೆ ನಡೆಸಿರುವುದು. ಕಲ್ಕತ್ತಾದ ಅಲಿಪುರ್ನ ತಮ್ಮ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ ಅವರು ರಾಹುಲ್ ಅವರನ್ನು ಲಕ್ನೋ ತಂಡದಲ್ಲಿಯೇ ಮುಂದುವರೆಯುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಮಾತುಕತೆಯ ಬೆನ್ನಲ್ಲೇ ಕೆಎಲ್ ರಾಹುಲ್ ಅವರ ಮುಂದಿನ ನಡೆಯೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಏಕೆಂದರೆ ಸಂಜೀವ್ ಗೊಯೆಂಕಾ ರಾಹುಲ್ ಅವರನ್ನು ಕರೆಸಿಕೊಂಡು ಮಾತನಾಡಬೇಕಿದ್ದರೆ, ಇಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟ. ಅದರಲ್ಲೂ ಕೆಎಲ್ಆರ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲು ಮುಂದಾಗಿದ್ದು, ಇದೇ ಕಾರಣದಿಂದಾಗಿ ಅವರ ಮನವೊಲಿಸಲು ಇದೀಗ ಎಲ್ಎಸ್ಜಿ ಮಾಲೀಕರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಭೇಟಿಯ ವೇಳೆ ತಮ್ಮನ್ನು ತಂಡದಲ್ಲೇ ಉಳಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಬಯಸುತ್ತಿರುವುದಾಗಿ ಸಂಜೀವ್ ಗೊಯೆಂಕಾ ತಿಳಿಸಿದ್ದಾರೆ. ಇದಾಗ್ಯೂ ಕೆಎಲ್ ರಾಹುಲ್ ಅಂತಿಮ ನಿರ್ಧಾರವನ್ನು ತಿಳಿಸಿಲ್ಲ. ಹೀಗಾಗಿ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲೇ ಉಳಿಯಲಿದ್ದಾರಾ ಅಥವಾ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.