

ಕರೊನಾದ ಆಘಾತದಿಂದ ಅರ್ಥವ್ಯವಸ್ಥೆ ನೆಲಕಚ್ಚುತ್ತಿದೆ. ಉದ್ಯೋಗನಷ್ಟ, ಸಂಬಳಕಡಿತದ ಪ್ರಮಾಣ ತೀವ್ರವಾಗತೊಡಗಿದೆ. ಈ ಬೆಳವಣಿಗೆಗಳು ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಉದ್ಯೋಗಕ್ಕೂ ಕುತ್ತು ತರತೊಡಗಿವೆ. ಹಲವು ದೇಶಗಳು ಸ್ಥಳೀಯರ ಉದ್ಯೋಗ ಉಳಿಸುವ ನಿಟ್ಟಿನಲ್ಲಿ, ವಲಸಿಗರಿಗೆ ನಿರ್ಬಂಧ ಅಥವಾ ನಿಯಂತ್ರಣ ಹೇರುತ್ತಿದ್ದು, ಲಕ್ಷಾಂತರ ಅನಿವಾಸಿ ಭಾರತೀಯರ ಭವಿಷ್ಯ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.
ಪ್ರಸಕ್ತ ಆತಂಕದ ವಿದ್ಯಮಾನ ಕುವೈತ್ನಿಂದ ವರದಿಯಾಗಿದೆ. ವಲಸೆ ತಡೆ ವಿಧೇಯಕ ತರಲು ಮುಂದಾಗಿರುವ ಅಲ್ಲಿನ ಸರ್ಕಾರ, ಆ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕುವೈತ್ ಜನಸಂಖ್ಯೆಯಲ್ಲಿ ಶೇಕಡ 70ರಷ್ಟಿರುವ ವಿದೇಶಿ ವಲಸಿಗರ ಸಂಖ್ಯೆಯನ್ನು ಶೇಕಡ 30ಕ್ಕೆ ತಗ್ಗಿಸುವುದು ಅಲ್ಲಿನ ಸರ್ಕಾರದ ಉದ್ದೇಶ. 43 ಲಕ್ಷ ಜನಸಂಖ್ಯೆಯ ಈ ಪುಟ್ಟರಾಷ್ಟ್ರದಲ್ಲಿ ಮೂಲನಿವಾಸಿಗಳೇ (13 ಲಕ್ಷ) ಅಲ್ಪಸಂಖ್ಯಾತರು. ಉಳಿದ 30 ಲಕ್ಷದಲ್ಲಿ ಭಾರತೀಯರ ಸಂಖ್ಯೆ 15 ಲಕ್ಷ ಎಂಬುದು ಗಮನಾರ್ಹ. ಹೊಸ ವಿಧೇಯಕದ ಪ್ರಕಾರ, ಕುವೈತ್ನ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 15 ಭಾರತೀಯರಿಗಷ್ಟೇ ಇನ್ಮುಂದೆ ಆ ರಾಷ್ಟ್ರದಲ್ಲಿ ಇರಲು ಅವಕಾಶ ಸಿಗಲಿದೆ. ಹೀಗಾದಲ್ಲಿ ಅನೇಕ ವರ್ಷಗಳಿಂದ ಕುವೈತ್ನಲ್ಲಿ ಬದುಕು ಕಂಡುಕೊಂಡಿರುವ 7-8 ಲಕ್ಷ ಭಾರತೀಯರ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಲಿದೆ. 40-50 ಸಾವಿರ ಕನ್ನಡಿಗರೂ ಅಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ.
ಅಮೆರಿಕದಲ್ಲೂ ಟ್ರಂಪ್ ಆಡಳಿತ ವಲಸಿಗರ ಬಗ್ಗೆ ಕಠೋರವಾಗಿದೆ. ಎಚ್1ಬಿ, ಎಲ್1 ವೀಸಾಗಳ ಮಂಜೂರಾತಿ ಪ್ರಕ್ರಿಯೆಯನ್ನು ತಡೆಹಿಡಿದಿದ್ದು, ಭಾರತೀಯ ಮಾಹಿತಿ-ತಂತ್ರಜ್ಞಾನ ಕಂಪನಿಗಳಿಗೆ ಆಘಾತ ಎದುರಾಗಿದೆ. ಈ ಹಿಂದೆ ಒಬಾಮ ಅವಧಿಯಲ್ಲಿ ವೀಸಾ ಶುಲ್ಕ ಹೆಚ್ಚಳ ಮಾಡಲಾಗಿತ್ತಾದರೂ, ಟ್ರಂಪ್ ಸರ್ಕಾರ ಎಚ್1ಬಿ ವೀಸಾಗಳ ಸಂಖ್ಯೆಯನ್ನೇ ಕಡಿತಗೊಳಿಸಿದ್ದು, ಈಗಂತೂ ಅಂಥ ವೀಸಾ ಮಂಜೂರಾತಿಗೆ ತಡೆ ಒಡ್ಡಿದ್ದಾರೆ. ಇದು ಉದ್ಯೋಗ ಸಂಕಷ್ಟದ ಪ್ರಶ್ನೆಯಂತೂ ಹೌದು. ಅಲ್ಲದೆ, ಅನಿವಾಸಿ ಭಾರತೀಯರು ಇಲ್ಲಿನ ಆರ್ಥಿಕತೆಗೆ ನೀಡುತ್ತಿರುವ ಕೊಡುಗೆ ಪ್ರಮಾಣವೂ ಗಣನೀಯವಾಗಿದೆ ಎಂಬ ಅಂಶವನ್ನು ಮರೆಯುವಂತಿಲ್ಲ.
ಲಕ್ಷಾಂತರ ಅನಿವಾಸಿ ಭಾರತೀಯರು ಉದ್ಯೋಗ ಕಳೆದುಕೊಂಡು, ತಾಯ್ನಾಡಿಗೆ ಮರಳಿದರೆ ಪರ್ಯಾಯವೇನು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕೇಂದ್ರ ಸರ್ಕಾರ ಕುವೈತ್ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಎಂಬ ಆಗ್ರಹವೂ ಬಲಗೊಳ್ಳುತ್ತಿದೆ. ಕರೊನಾ ಸಂಕಷ್ಟ ಹೆಚ್ಚುತ್ತಲೇ ಇರುವುದರಿಂದ ಉದ್ಯೋಗ ರಂಗದ ಮೇಲೆ ಅದರ ಪ್ರತಿಕೂಲ ಪರಿಣಾಮ ಇನ್ನಷ್ಟು ಅವಧಿಗೆ ಮುಂದುವರಿಯುವುದು ದಿಟ. ಹೀಗಾಗಿ ಅನಿವಾಸಿ ಭಾರತೀಯರ ಹಿತರಕ್ಷಣೆಗೆ, ಉದ್ಯೋಗರಕ್ಷಣೆಗೆ ಏನೆಲ್ಲ ಮಾಡಬೇಕು ಎಂಬುದರ ಕುರಿತಂತೆ ಸ್ಪಷ್ಟ ದಿಕ್ಸೂಚಿಯನ್ನು ಹಾಕಿಕೊಳ್ಳಲು ಇದು ಸಕಾಲ. ಮತ್ತಷ್ಟು ರಾಷ್ಟ್ರಗಳು ವಿದೇಶಿ ವಲಸಿಗರ ವಿರುದ್ಧದ ನೀತಿಗಳನ್ನು ಕೈಗೊಳ್ಳುವ ಮುನ್ನವೇ ಕೇಂದ್ರ ಸರ್ಕಾರ ಎನ್ಆರ್ಐಗಳ ಹಿತ ಕಾಪಾಡಲು ಮುಂದಾಗಬೇಕು. ಸ್ಪಷ್ಟ ನೀತಿಯೊಂದನ್ನು ಈ ಬಗ್ಗೆ ರೂಪಿಸುವ ಅಗತ್ಯವಿದ್ದು, ಲಕ್ಷಾಂತರ ಜನರ ಭವಿಷ್ಯದ ಮೇಲೆ ಕಾಮೋಡ ಕವಿಯುವ ಮುನ್ನವೇ ಪರಿಹಾರದ ಹಾದಿಯಲ್ಲಿ ಕಾರ್ಯೋನ್ಮುಖವಾಗಬೇಕು.