ಸಂಪಾದಕೀಯ: ಅಭಿವೃದ್ಧಿಯತ್ತ ಚಿತ್ತ

Editorial
Published on

ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಇದೇ 26ಕ್ಕೆ ಒಂದು ವರ್ಷ ಪೂರೈಸಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಸಾಲು ಸಾಲು ಸವಾಲು, ಸಂಕಷ್ಟಗಳು ಉದ್ಭವಿಸಿದವು. ಸಂಪುಟ ರಚನೆಯೂ ಆಗಿರಲಿಲ್ಲ. ಅಂಥ ಹೊತ್ತಲ್ಲಿ ಪ್ರವಾಹ ಪರಿಸ್ಥಿತಿ ಕಾಣಿಸಿಕೊಂಡಾಗ ಮೂರು ತಿಂಗಳ ಕಾಲ ಮುಖ್ಯಮಂತ್ರಿಯೊಬ್ಬರೇ ರಾಜ್ಯಾದ್ಯಂತ ಸಂಚರಿಸಿ ಸಂತ್ರಸ್ತರ ನೋವುಗಳಿಗೆ ಸ್ಪಂದಿಸಿದರು. ಕೆಲ ಭಾಗಗಳಲ್ಲಿ ತೀವ್ರ ಬರವೂ ಕಾಡಿತು. ಕರ್ನಾಟಕದ ಅಭಿವೃದ್ಧಿ ತಮ್ಮದೇ ಆದ ದೃಷ್ಟಿಕೋನ, ಮಾದರಿ, ಹೊಸ ಕನಸುಗಳನ್ನು ಹೊಂದಿರುವ ಮುಖ್ಯಮಂತ್ರಿ, ಅದಕ್ಕೆ ಪೂರಕ ಎಂಬಂತೆ ಬಜೆಟ್ ಮಂಡಿಸಿದರು. ಸಚಿವ ಸಂಪುಟವನ್ನೂ ಬಲಗೊಳಿಸಿದರು. ಅಷ್ಟರಲ್ಲೇ ಶುರುವಾದ ಕರೊನಾ ಹಾವಳಿಯಂತೂ ತೀವ್ರ ಹಾನಿ ಮಾಡಿದೆ. ಎರಡು ತಿಂಗಳಿಗೂ ಹೆಚ್ಚು ಕಾಲ ಲಾಕ್​ಡೌನ್ ಇದ್ದಿದ್ದರಿಂದ ಆರ್ಥಿಕ ಅಭಿವೃದ್ಧಿ ಮೇಲೆ ಪ್ರತಿಕೂಲ ಪರಿಣಾಮವಾಗಿದ್ದು, ಬಹುತೇಕ ಎಲ್ಲ ವಲಯಗಳು ನಷ್ಟ ಅನುಭವಿಸಿವೆ. ಲಾಕ್​ಡೌನ್ ಹೊತ್ತಲ್ಲಿ ರೈತರಿಗೆ, ಕೂಲಿಕಾರ್ವಿುಕರಿಗೆ, ಇತರ ಶ್ರಮಜೀವಿ ವರ್ಗಕ್ಕೆ ಸರ್ಕಾರ ನೆರವನ್ನೂ ಘೋಷಿಸಿತು.

ಕಳೆದೊಂದು ವರ್ಷದಲ್ಲಿ ಹಲವು ಮಹತ್ವದ ಕೆಲಸಗಳಾಗಿವೆ. ರೈತ ಸಮ್ಮಾನ್ ಯೋಜನೆಯಡಿ ಹೆಚ್ಚುವರಿಯಾಗಿ 4000 ರೂಪಾಯಿಗಳ ನೆರವು ಕೃಷಿಕರಲ್ಲಿ ಭರವಸೆ ಮೂಡಿಸಿದೆ. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಲಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ, ಇದರಿಂದ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲು ಸಾಧ್ಯವಾಗಲಿದೆ. ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸಲಾಗಿದ್ದು, 20 ಲಕ್ಷ ಉದ್ಯೋಗಸೃಷ್ಟಿಯ ಗುರಿ ಹೊಂದಲಾಗಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ದೊರೆಯಲಿದೆ. ಮುಂದಿನ ಮೂರು ವರ್ಷಗಳ ಆಡಳಿತಕ್ಕೆ ಹಲವು ಆಶಯಗಳನ್ನು ಹೊಂದಿರುವ ಮುಖ್ಯಮಂತ್ರಿ ಸುಭದ್ರ ಆಡಳಿತ, ಸಮಗ್ರ ಅಭಿವೃದ್ಧಿಗೆ ಬದ್ಧ ಇರುವುದಾಗಿ ಪುನರುಚ್ಚರಿಸಿದ್ದಾರೆ. ‘ಮೂರು ವರ್ಷದಲ್ಲಿ ರಾಜ್ಯದಲ್ಲಿ ಯಾರೊಬ್ಬರೂ ವಸತಿರಹಿತರಿರಬಾರದು, ನಿರುದ್ಯೋಗ ನಿವಾರಣೆ ಆಗಬೇಕು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ‘ವಿಜಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಕರೊನಾ ಲಸಿಕೆಗೆ ಜಗತ್ತಿನ ಅತಿ ದೊಡ್ಡ ಕ್ಲಿನಿಕಲ್​ ಟ್ರಯಲ್​; 30 ಸಾವಿರ ಜನರ ಮೇಲೆ ಪ್ರಯೋಗ

ಮುಂದಿನ ಮೂರು ವರ್ಷಗಳ ಅವಧಿಯಲ್ಲೂ ಹಲವು ಸವಾಲುಗಳು ಇರುವುದು ನಿಜ. ಕರೊನಾ ಸೋಂಕು ವ್ಯಾಪಕವಾಗಿದ್ದರೂ, ಸದ್ಯದ ಮಟ್ಟಿಗೆ ಅದರ ಜತೆಯೇ ಬದುಕು ಸಾಗಿಸುವ ಅನಿವಾರ್ಯತೆ ಇದೆ. ಇದೆಲ್ಲದರ ನಡುವೆ ರಾಜ್ಯ ಆರ್ಥಿಕ ಸುಧಾರಣೆಯ ಹಾದಿಯಲ್ಲಿ ಹಿಂದೆ ಬೀಳಬಾರದು ಎಂಬ ಕಳಕಳಿಯೂ ಅವಶ್ಯ. ಕೃಷಿ, ಕೈಗಾರಿಕೆ ಸೇರಿ ಎಲ್ಲ ವಲಯಗಳಿಗೆ ಇನ್ನಷ್ಟು ಶಕ್ತಿ ತುಂಬಬೇಕಿದೆ. ಅಭಿವೃದ್ಧಿಗೆ ಪ್ರಶಸ್ತ ಮಾರ್ಗವಿದ್ದು, ಕರೊನಾ ಸಂಕಟವನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಂಡು, ಹಲವು ವಲಯಗಳ ಪುನಶ್ಚೇತನ ಮಾಡಬೇಕಿದೆ. ಹಲವು ಶಾಸಕರಿಗೆ ನಿಗಮ ಮಂಡಳಿಯ ಸ್ಥಾನವೂ ದೊರೆತಿದ್ದು, ಅವರೆಲ್ಲ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ. ಕೆಲ ಸಚಿವರು ಜಿಲ್ಲೆಗಳ ಪ್ರವಾಸವನ್ನೇ ಮಾಡಿಲ್ಲ ಎಂಬ ಆರೋಪ, ಆಕ್ಷೇಪವಿದೆ. ಎಲ್ಲ ಸಚಿವರು ಇನ್ನಷ್ಟು ಉತ್ಸಾಹದಿಂದ ಕಾರ್ಯೋನ್ಮುಖರಾಗಬೇಕಿದೆ. ಒಟ್ಟಿನಲ್ಲಿ ಸಾಮೂಹಿಕ ಕಾರ್ಯದ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಬೇಕಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net