More

    ಕರೊನಾ ಲಸಿಕೆಗೆ ಜಗತ್ತಿನ ಅತಿ ದೊಡ್ಡ ಕ್ಲಿನಿಕಲ್​ ಟ್ರಯಲ್​; 30 ಸಾವಿರ ಜನರ ಮೇಲೆ ಪ್ರಯೋಗ

    ನವದೆಹಲಿ: ಕರೊನಾ ಲಸಿಕೆ ಸಂಶೋಧಿಸುವಲ್ಲಿ ಜಗತ್ತಿನ 20ಕ್ಕೂ ಅಧಿಕ ಕಂಪನಿಗಳು ಮಾನವರ ಮೇಲೆ ಅಂತಿಮ ಹಂತದ ಪ್ರಯೋಗ ನಡೆಸುತ್ತಿವೆ. ಭಾರತದಲ್ಲೂ ಕ್ಲಿನಿಕಲ್​ ಟ್ರಯಲ್​ ನಡೆಸಲಾಗುತ್ತಿದೆ.

    ಆದರೆ, ಈವರೆಗಿನ ಎಲ್ಲ ಕ್ಲಿನಿಕಲ್​ ಟ್ರಯಲ್​ಗಳನ್ನು ಮೀರಿಸುವ ಅತಿ ದೊಡ್ಡ ಪ್ರಯೋಗ ಅಮೆರಿಕದಲ್ಲಿ ಆರಂಭವಾಗಿದೆ. ಮಾಡೆರ್ನಾ ಕಂಪನಿಯು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಸಹಯೋಗದಲ್ಲಿ ಈ ಕ್ಲಿನಿಕಲ್​ ಟ್ರಯಲ್​ ನಡೆಸಲಾಗುತ್ತಿದೆ.

    ಭಾರತದಲ್ಲಿ ಭಾರತ್​ ಬಯೋಟೆಕ್​ ನಡೆಸುತ್ತಿರುವ ಮೊದಲ ಹಂತದ ಪ್ರಯೋಗದಲ್ಲಿ 375 ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇದಕ್ಕೆ ಹೋಲಿಸಿದರೆ ಅಮೆರಿಕದ ಈ ಪ್ರಯೋಗ ನೂರು ಪಟ್ಟು ದೊಡ್ಡದಾಗಿದೆ. ಇದೆಲ್ಲದರ ಹೊರತಾಗಿಯೂ ಕರೊನಾ ಲಸಿಕೆ ಯಶಸ್ವಿಯಾಗುತ್ತಾ ಎಂಬ ಬಗ್ಗೆ ಯಾವುದೇ ಖಚಿತತೆ ವ್ಯಕ್ತವಾಗಿಲ್ಲ.

    ಇದನ್ನೂ ಓದಿ; ಕರೊನಾ ತಡೆಗೆ ಅಬ್ಬಾ ಇದೆಂಥ ಕಟ್ಟುನಿಟ್ಟು; ಮೂವರಿಗೆ ಸೋಂಕು; 80 ಸಾವಿರ ಜನರ ತೆರವು ಕಾರ್ಯಾಚರಣೆ..! 

    ಈ ಪ್ರಯೋಗದಲ್ಲಿ ಯಾರಿಗೆ ನಿಜವಾದ ಲಸಿಕೆ ಹಾಗೂ ಡಮ್ಮಿ ಇಂಜಕ್ಷನ್​ ನೀಡಲಾಗಿದೆ ಎಂಬ ಮಾಹಿತಿಯನ್ನು ಅಭ್ಯರ್ಥಿಗಳಿಗೂ ನೀಡಲಾಗಿಲ್ಲ. ಕರೊನಾ ನಿಯಂತ್ರಣಕ್ಕೆ ಬಾರದ ಸ್ಥಳಗಳಲ್ಲಿಯೂ ಎಂದಿನಂತೆ ತಮ್ಮೆಲ್ಲ ಕಾರ್ಯಗಳನ್ನು ಮಾಡುತ್ತಿರುವ ಅಭ್ಯರ್ಥಿಗಳನ್ನು ಎರಡು ಡೋಸ್​ಗಳ ಬಳಿಕ ಪರೀಕ್ಷೆ ನಡೆಸಿ ಫಲಿತಾಂಶ ಪಡೆಯಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

    ಲಸಿಕೆ ಯಶಸ್ವಿಯಾಗುತ್ತೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ನಮ್ಮಲ್ಲಿ ಸಾಕಷ್ಟು ಸೋಂಕಿತರಿದ್ದಾರೆ ಎಂಬುದು ಕೂಡ ದುರ್ದೈವದ ಸಂಗತಿಯೇ ಆಗಿದೆ ಎಂದು ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ ಅಂಥೋಣಿ ಫೌಸಿ ಹೇಳಿದ್ದಾರೆ.

    ಮೊದಲಿಗೆ ಸವನ್ನಾ, ಜಾರ್ಜಿಯಾದಲ್ಲಿ ಪ್ರಾಯೋಗಿಕ ಲಸಿಕೆ ನೀಡಲಾಗಿದೆ. 80ಕ್ಕೂ ಅಧಿಕ ಸ್ಥಳಗಳಲ್ಲಿ ಪ್ರಯೋಗ ನಡೆಸಲಾಗುತ್ತಿದೆ ಎಂದು ಮಾಡೆರ್ನಾ ಕಂಪನಿ ಮಾಹಿತಿ ನೀಡಿದೆ. ಇದರಲ್ಲಿ ಅಮೆರಿಕದ ಎಲ್ಲ ವರ್ಣಗಳ, ಎಲ್ಲ ಸಮುದಾಯ, ಜನಾಂಗದ ಜನರನ್ನು ಆಯ್ಕೆ ಮಾಡಲಾಗಿದೆ. ಈ ಕಂಪನಿಯ ಆರಂಭಿಕ ಹಂತದ ಫಲಿತಾಂಶಗಳು ಭರವಸೆದಾಯಕವಾಗಿವೆ. ಆದರೆ, ದೊಡ್ಡ ಪ್ರಮಾಣದಲ್ಲಿ ಮೂರನೇ ಹಂತದ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆಗಾಗಿ ಮಾಡೆರ್ನಾ ಕೊಂಚ ವಿಳಂಬ ಮಾಡಿತ್ತು.

    ಇದನ್ನೂ ಓದಿ; ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದ ಮಾಡೆರ್ನಾಗೆ ಇದೆಂಥ ಹಿನ್ನಡೆ? 

    ಈ ಕ್ಲಿನಿಕಲ್​ ಟ್ರಯಲ್​ ಅಮೆರಿಕ ಸರ್ಕಾರವೇ ಆರ್ಥಿಕ ಸಹಕಾರ ನೀಡುತ್ತಿದೆ. ಅಲ್ಲದೇ, ಯಾವುದೇ ಲಸಿಕೆಯಾದರೂ, ಅದನ್ನು ಅಮೆರಿಕದ ನೆಲದಲ್ಲಿಯೇ ಪರೀಕ್ಷೆ ನಡೆಸುವುದನ್ನು ಇಲ್ಲಿ ಕಡ್ಡಾಯ ಮಾಡಲಾಗಿದೆ. ಇದಷ್ಟೇ ಅಲ್ಲದೇ, ಮಾಡೆರ್ನಾ ಬಳಿಕ ಇನ್ನಷ್ಟು ಕಂಪನಿಗಳು ಅಂತಿಮ ಹಂತದಲ್ಲಿ 30 ಸಾವಿರ ಜನರ ಮೇಲೆ ಪರೀಕ್ಷೆ ನಡೆಸಲಿವೆ. ಆಕ್ಸ್​ಫರ್ಡ್​ ವಿವಿ ಲಸಿಕೆ ಆಗಸ್ಟ್​ನಲ್ಲಿ ಪರೀಕ್ಷೆಗೊಳಪಟ್ಟರೆ, ನಂತರ ಜಾನ್​ಸನ್​ ಆ್ಯಂಡ್​ ಜಾನಸ್​, ಫೈಝರ್​ ಕಂಪನಿಗಳು ಸರದಿಯಲ್ಲಿವೆ.
    ಲಸಿಕೆ ಯಶಸ್ವಿಯಾಗಲಿದೆ. ಈ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೇವೆ ಎಂದು ಮಾಡೆರ್ನಾ ಅಧ್ಯಕ್ಷ ಡಾ. ಸ್ಟಿಫನ್​ ಹಾಗ್​ ಭರವಸೆ ವ್ಯಕ್ತಪಡಿಸಿದ್ದಾರೆ. ಸದ್ಯ ಆಕ್ಸ್​ಫರ್ಡ್​ ವಿವಿ ಹೊರತುಪಡಿಸಿದರೆ, ಮಾಡೆರ್ನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ.

    ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts