ಸಂಪಾದಕೀಯ| ಬೆಲೆ ಏರಿಕೆ ನಿಯಂತ್ರಿಸಿ

food particles
Published on

ಮುಂಗಾರು ಮಳೆ ವೈಫಲ್ಯದ ಬಿಸಿ ತಾಗತೊಡಗಿದೆ. ಕಳೆದ ಎರಡು ವರ್ಷ ಅತಿವೃಷ್ಟಿ, ಈ ವರ್ಷ ಅನಾವೃಷ್ಟಿಯಿಂದ ಕೃಷಿ ಉತ್ಪನ್ನಗಳ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಹಿಂದಿನ ಎರಡು ವರ್ಷ ಪ್ರವಾಹ, ಅತಿವೃಷ್ಟಿಯಿಂದ ಬೆಳೆ ನಾಶವಾದರೆ ಈ ಬಾರಿ ಮಳೆ ವರುಣನ ಕಣ್ಣಾಮುಚ್ಚಾಲೆಯಿಂದ ಬೆಳೆ ರೈತರ ಕೈಗೆ ಸಿಗುತ್ತಿಲ್ಲ. ಆಹಾರ ಧಾನ್ಯಗಳ ಉತ್ಪಾದನೆ ಪ್ರಮಾಣ ಶೇ.30 ರಿಂದ 40ರಷ್ಟು ಕುಸಿಯುವ ಆತಂಕ ಸಹಜವಾಗಿದ್ದು, ಏರುಮುಖವಾಗಿರುವ ಆಹಾರ ಧಾನ್ಯಗಳ ಬೆಲೆ ಸದ್ಯದ ಸ್ಥಿತಿಯಲ್ಲಿ ಇಳಿಕೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಕಳೆದ ಎರಡು ವರ್ಷ ಆಹಾರಧಾನ್ಯ, ಬೇಳೆಕಾಳುಗಳ ಆವಕದಲ್ಲಿ ಇಳಿಕೆ ಕಂಡಿತ್ತು. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಉತ್ಪಾದನೆ ಕುಸಿಯುವ ಲಕ್ಷಣ ನಿಚ್ಚಳವಾಗಿದೆ. ಪರಿಸ್ಥಿತಿಯ ದುರ್ಲಾಭ ಪಡೆಯಲು ಕೃತಕ ಅಭಾವ ಸೃಷ್ಟಿ ಕೂಡ ಸಹಜವೇ. ಆಹಾರ ಧಾನ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡು ದುರ್ಲಾಭ ಪಡೆಯುವ ವರ್ಗ ಇಂಥ ಸಮಯಕ್ಕೆ ಕಾದಿರುತ್ತದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ವಾರ್ಷಿಕ 65 ಲಕ್ಷ ಟನ್ ಭತ್ತ ಉತ್ಪಾದನೆಯಾಗುತ್ತದೆ. ಮಳೆ ಕೊರತೆಯಿಂದ ಈ ಬಾರಿ ಸುಮಾರು 20 ಟನ್ ಇಳುವರಿ ಕಡಿಮೆಯಾಗುವ ಅಂದಾಜಿದೆ. ಇದರಿಂದ ಶೇ. 30ರಷ್ಟು ಅಕ್ಕಿ ಕೊರತೆಯಾಗಬಹುದು ಎಂಬ ಅಂದಾಜು ಮಾಡಲಾಗಿದೆ. ಕಡಿಮೆ ಗುಣಮಟ್ಟದ ಅಕ್ಕಿ ಮತ್ತಿತರ ಆಹಾರಧಾನ್ಯ ಎಥನಾಲ್ ಉತ್ಪಾದನೆಗೆ ಬಳಕೆಯಾಗುತ್ತಿದ್ದು, ಇದೂ ಕೂಡ ಬೆಲೆ ಏರಿಕೆಗೆ ಮತ್ತೊಂದು ಕಾರಣವೆಂದು ಹೇಳಲಾಗುತ್ತಿದೆ.

ಮಳೆ ಅಭಾವದ ವ್ಯತಿರಿಕ್ತ ಪರಿಣಾಮವನ್ನು ಊಹಿಸಿದ ಕೇಂದ್ರ ಸರ್ಕಾರ, ಭವಿಷ್ಯದ ದಿನಗಳಲ್ಲಿ ಉದ್ಭವಿಸುವ ಸಮಸ್ಯೆ ನಿರ್ವಹಣೆ ಗಮನದಲ್ಲಿಟ್ಟುಕೊಂಡು, ಬಾಸ್ಮತಿಯೇತರ ಅಕ್ಕಿ ರಫ್ತು ಮೇಲೆ ನಿಷೇಧ ಹೇರಿತು. ಬಾಸ್ಮತಿ ಅಕ್ಕಿ ರಫ್ತು ಮಾಡಲು ಸಿಕ್ಕ ಅವಕಾಶ ಬಳಕೆ ಮಾಡಿಕೊಂಡು ಇತರ ಅಕ್ಕಿಯನ್ನು ರಫ್ತು ಮಾಡುತ್ತಿರುವ ಸುಳಿವು ಅರಿತು ಬಾಸ್ಮತಿ ಅಕ್ಕಿ ರಫ್ತು ಮೇಲೂ ನಿರ್ಬಂಧ ವಿಧಿಸಿದೆ.

ಅಕ್ಕಿ, ರಾಗಿ, ಜೋಳದ ಬೆಲೆ ಏರಿಕೆಯಿಂದ ಮಧ್ಯಮ, ಕೆಳ ಮಧ್ಯಮ ವರ್ಗ ಜೀವನ ನಿರ್ವಹಣೆಗೆ ಪ್ರಯಾಸಪಡುತ್ತಿದೆ. ಇತರ ದಿನಸಿ ಪದಾರ್ಥಗಳು ಬೆಲೆ ಏರಿಕೆ ಕಾರಣ ಬಡವರು ಮತ್ತು ಕಡು ಬಡವರಿಗೆ ಕೈಗೆಟುಕದ ಸ್ಥಿತಿ ನಿರ್ವಿುಸಿದೆ.

ಬಹತೇಕ ರೈತರು ಈಗಾಗಲೇ ತಮ್ಮ ಬಳಿ ಇದ್ದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿರುವುದರಿಂದ ಅವರಿಗೆ ಬೆಲೆ ಏರಿಕೆ ಲಾಭ ಸಿಗುತ್ತಿಲ್ಲ. ಪರಿಸ್ಥಿತಿ ದುರ್ಲಾಭ ಪಡೆಯಲು ಮಧ್ಯವರ್ತಿಗಳ ಆಹಾರ ಧಾನ್ಯ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿ ಮಾಡುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ಸರ್ಕಾರ ಬೆಲೆ ಏರಿಕೆಯ ಮೇಲೆ ನಿಗಾವಹಿಸಬೇಕು. ಕೃತಕ ಅಭಾವ ಸೃಷ್ಟಿಯಾಗದಂತೆ ಅಗತ್ಯ ಕ್ರಮ ಕೈಗೊಂಡು ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net