ಸಂಪಾದಕೀಯ: ಷಡ್ಯಂತ್ರ ವಿಫಲಗೊಳಿಸಬೇಕು

sa
Published on

ಕಳೆದ ಕೆಲ ವರ್ಷಗಳಲ್ಲಿ ಭಾರತ ಆರ್ಥಿಕ ಬೆಳವಣಿಗೆಯಲ್ಲಿ ವೇಗ ಕಂಡುಕೊಂಡಿದೆ. ಮುಂಚೆ ಈ ಸ್ಥಿತಿ ಇರಲಿಲ್ಲ. 2004-14ರ ಅವಧಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದ ದೇಶ, ‘ಜಗತ್ತಿನ ಐದು ಬಲಹೀನ ಅರ್ಥವ್ಯವಸ್ಥೆಗಳಲ್ಲಿ ಒಂದು’ ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಅಲ್ಲದೆ, 2014ರಲ್ಲಿ 1.7 ಟ್ರಿಲಿಯನ್ ಡಾಲರ್ ಮೊತ್ತದ ವಾರ್ಷಿಕ ಜಿಡಿಪಿಯೊಂದಿಗೆ ಜಾಗತಿಕವಾಗಿ ಹನ್ನೊಂದನೆಯ ಸ್ಥಾನದಲ್ಲಿತ್ತು. ಆದರೆ, ಸುಧಾರಣಾ ಕ್ರಮಗಳ ಫಲವಾಗಿ ಭಾರತ ಪ್ರಸಕ್ತ 3.8 ಟ್ರಿಲಿಯನ್ ಡಾಲರ್ ವಾರ್ಷಿಕ ಜಿಡಿಪಿಯೊಂದಿಗೆ ಜಗತ್ತಿನ ಐದನೆಯ ದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆದುನಿಂತಿರುವುದು ಸಾಮಾನ್ಯ ಸಾಧನೆಯೇನಲ್ಲ. ಅಲ್ಲದೆ, ಅಮೆರಿಕ, ಜಪಾನ್, ಬ್ರಿಟನ್, ಚೀನಾ ಮುಂತಾದ ಆರ್ಥಿಕ ದಿಗ್ಗಜಗಳ ವಾರ್ಷಿಕ ಜಿಡಿಪಿ ವೇಗವಾಗಿ ಕುಸಿಯುತ್ತ ಸಾಗಿದ್ದರೆ ಭಾರತ ಮಾತ್ರ ಕಳೆದ ವರ್ಷ 8.2% ವಾರ್ಷಿಕ ಜಿಡಿಪಿಯೊಂದಿಗೆ ಗಮನಸೆಳೆದಿದೆ. ಭಾರತದ ಈ ಬೆಳವಣಿಗೆ ಮತ್ತು ಅಭಿವೃದ್ಧಿಯ ಓಟ ಕೆಲ ದೇಶ, ಸಂಸ್ಥೆಗಳಿಗೆ ಸಹಿಸ ಲಾಗುತ್ತಿಲ್ಲ. ಹಾಗಾಗಿ, ಅವು ದೇಶದ, ಇಲ್ಲಿಯ ಮಾರುಕಟ್ಟೆಗಳ ವರ್ಚಸ್ಸಿಗೆ ಹಾನಿ ಮಾಡಲು ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಹಿಂಡನ್​ಬರ್ಗ್ ಎಂಬ ವಿದೇಶಿ ಸಂಸ್ಥೆ ಆಗಾಗ ತನ್ನ ‘ಸಂಶೋಧನಾ ವರದಿ’ಗಳ ಮೂಲಕ ಭಾರತೀಯ ಷೇರು ಮಾರುಕಟ್ಟೆಗೆ ಹಿನ್ನಡೆ ಉಂಟು ಮಾಡುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ. ಭಾರತದ ಆಂತರಿಕ ವಿಷಯದ ಬಗ್ಗೆ ವಿದೇಶಿ ಸಂಸ್ಥೆಯೊಂದು ತೋರುತ್ತಿರುವ ‘ಭಾರಿ ಆಸಕ್ತಿ’ ಬಗ್ಗೆಯೂ ಅಪಾರ ಸಂಶಯ ವ್ಯಕ್ತವಾಗುತ್ತಿದೆ. ಸುಮಾರು ಒಂದು ವರ್ಷದ ಹಿಂದೆ ಅದು ಪ್ರಕಟಿಸಿದ್ದ ವರದಿಯನ್ನು ಸ್ವತಃ ಸುಪ್ರೀಂ ಕೋರ್ಟ್ ಪುರಸ್ಕರಿಸಲಿಲ್ಲ ಎಂಬುದು ಗಮನಾರ್ಹ.

ಅದರ ಬದಲು ಸೆಕ್ಯುರಿಟೀಸ್ ಆಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮೇಲೆ ಸುಪ್ರೀಂ ಕೋರ್ಟ್ ವಿಶ್ವಾಸ ವ್ಯಕ್ತಪಡಿಸಿ, ತನಿಖೆ ಮಾಡುವಂತೆ ಸೂಚಿಸಿತ್ತು. ತನಿಖೆಗೆ ಮುಂದಾದ ಸೆಬಿಗೆ ಹಿಂಡನ್​ಬರ್ಗ್ ಸಹಕಾರ ಕೊಡಲಿಲ್ಲ. ಈಗ ಸೆಬಿ ವಿರುದ್ಧವೇ ಹಿಂಡನ್​ಬರ್ಗ್ ಆರೋಪ ಮಾಡಿದೆ. ಅದರಿಂದ ಈ ಬಾರಿಯೂ ಭಾರತೀಯ ಷೇರು ಮಾರುಕಟ್ಟೆಗೆ ಪೆಟ್ಟು ಬೀಳುತ್ತದೆ ಎಂದುಕೊಂಡಿದ್ದವರಿಗೆ ನಿರಾಸೆಯಾಗಿದೆ. ವಿದೇಶಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಕಾರಸ್ಥಾನಕ್ಕೆ ಎಲ್ಲ ಸಂದರ್ಭದಲ್ಲಿಯೂ ಭಾರತೀಯರು ಇದೇ ರೀತಿ ಉತ್ತರ ಕೊಡುವುದು ಅವಶ್ಯವಾಗಿದೆ.

ಇಲ್ಲವಾದಲ್ಲಿ ಷಡ್ಯಂತ್ರ, ಪಿತೂರಿ, ಮಿಥ್ಯಾರೋಪಗಳಂಥ ಪ್ರಯತ್ನಗಳಿಂದ ಹಾನಿ ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಇಂಥ ಕೃತ್ಯಗಳಿಗೆ ದಿಟ್ಟ ಪ್ರತ್ಯುತ್ತರ ನೀಡಿದಾಗ ಮಾತ್ರ, ಸಂಭವನೀಯ ಹಾನಿಯನ್ನು ತಡೆಗಟ್ಟಬಹುದಾಗಿದೆ. ಹಾಗಾಗಿ, ಯಾವುದೇ ವಿದೇಶಿ ಸಂಸ್ಥೆ ಆರೋಪ ಮಾಡಿದಾಕ್ಷಣ ಅದನ್ನೇ ರಾಜಕೀಯ ಲಾಭಕ್ಕಾಗಿ ಅಸ್ತ್ರವನ್ನಾಗಿಸಿಕೊಳ್ಳುವ ಪ್ರವೃತ್ತಿಯೂ ಕೊನೆಗೊಳ್ಳಬೇಕು. ಆರೋಪಗಳಲ್ಲಿ ಹುರುಳು ಇದೆಯೇ, ದಾಖಲೆಗಳು ಇವೆಯೇ ಎಂಬುದನ್ನು ಗಮನಿಸುವ ವಿವೇಚನೆಯನ್ನು ತೋರಬೇಕು. ಈ ಮೂಲಕ ರಾಷ್ಟ್ರದ ಬೆಳವಣಿಗೆ, ವರ್ಚಸ್ಸಿಗೆ ಘಾಸಿ ಮಾಡುವ ಯಾವುದೇ ಪ್ರಯತ್ನಗಳಿಗೆ ಅವಕಾಶ ಮಾಡಿಕೊಡಬಾರದು. ಹಿಂಡನಬರ್ಗ್ ಪ್ರಕರಣ ಮುಂದಿನ ದಿನಗಳಿಗೂ ಪಾಠವಾಗಬೇಕು. ಹಿಂಡನಬರ್ಗ್ ಆರೋಪಗಳಿಗೆ ಸೆಬಿ ಸ್ಪಷ್ಟ ಹಾಗೂ ನಿಖರ ಉತ್ತರವನ್ನು ನೀಡಿರುವುದು, ಹೂಡಿಕೆದಾರರಲ್ಲಿ ಧೈರ್ಯ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net