ಸಂಪಾದಕೀಯ: ಜಾತಿ ತಾರತಮ್ಯ ಸಲ್ಲದು

edite page
Published on

ಭಾರತದ ಮೂಲಮಂತ್ರವೇ ವಿವಿಧತೆಯಲ್ಲಿ ಏಕತೆ. ಜಾತಿ, ಧರ್ಮ, ಭಾಷೆ, ಬಣ್ಣ, ವೇಷ-ಭೂಷಣ ಎಲ್ಲವೂ ಬೇರೆ ಬೇರೆ ಇದ್ದರೂ ನಾವು ಭಾರತೀಯರು ಎಂಬುದೇ ನಮ್ಮೆಲ್ಲರನ್ನೂ ಏಕತ್ರಗೊಳಿಸುವ ಎಳೆ. ಆದರೂ ತಾರತಮ್ಯದ ಆಚರಣೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಕೈದಿಗಳ ಮಧ್ಯೆಯೂ ಜಾತಿ ತರತಮ ಎಣಿಸುವ ಕೆಲಸವನ್ನು ಜೈಲುಗಳ ಹಿರಿಯ ಅಧಿಕಾರಿಗಳು ಕೆಲವು ರಾಜ್ಯಗಳಲ್ಲಿ ಮಾಡುತ್ತಿರುವುದು ಅಚ್ಚರಿಯಾದರೂ ಸತ್ಯ. ಮಧ್ಯಪ್ರದೇಶ, ದೆಹಲಿ, ತಮಿಳುನಾಡಿನ ಜೈಲುಗಳಲ್ಲಿ ಮೇಲ್ಜಾತಿಯ ಕೈದಿಗಳನ್ನು ಅಡುಗೆ ಮಾಡುವುದಕ್ಕೆ, ಕೆಳಜಾತಿಯ ಕೈದಿಗಳನ್ನು ಕಸ ಗುಡಿಸುವುದು ಮತ್ತು ಶೌಚಾಲಯಗಳ ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದುದು ಕಂಡುಬಂದಿದೆ. ಇನ್ನು ಕೆಲವು ಜೈಲುಗಳಲ್ಲಿ ನಿರ್ದಿಷ್ಟ ಜಾತಿಯ ಕೈದಿಗಳನ್ನು ಪ್ರತ್ಯೇಕ ಬ್ಯಾರಕ್​ಗಳಲ್ಲಿ ಇರಿಸಿರುವುದು ಗಮನಕ್ಕೆ ಬಂದಿದೆ. ಇದೆಲ್ಲವೂ ಇಂದು ನಿನ್ನೆ ಆರಂಭವಾಗಿದ್ದಲ್ಲ. ಬ್ರಿಟಿಷರ ಆಳ್ವಿಕೆ ಇದ್ದಾಗ ಅವರು ಜಾತಿ ಆಧರಿಸಿಯೇ ಕೈದಿಗಳನ್ನು ವಿಂಗಡಿಸುತ್ತಿದ್ದರು. ಕೆಲಸದ ಸ್ವರೂಪ ಮತ್ತು ಮಲಗುವ ಸ್ಥಳವನ್ನು ಜಾತಿ ನೋಡಿಯೇ ನಿಗದಿಪಡಿಸುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಇದು ಕೆಲವು ರಾಜ್ಯಗಳಲ್ಲಿ ಹಾಗೆಯೇ ಮುಂದುವರಿದುಕೊಂಡು ಬಂದಿದೆ.

ಉದಾಹರಣೆಗೆ, ರಾಜಸ್ಥಾನದ ‘ಪ್ರಿಸನ್ ರೂಲ್ಸ್ 1951’ರಲ್ಲಿ ಮೆಹ್ತಾರ್ ಎಂಬ ಸಮುದಾಯದ ಕೈದಿಗಳನ್ನು ಶೌಚಾಲಯ ಸ್ವಚ್ಛತೆಗೆ ಬಳಸಿಕೊಳ್ಳಬೇಕೆಂಬ ನಿಯಮ ಅಧಿಕೃತವಾಗಿಯೇ ಇದೆ. ತಮಿಳುನಾಡಿನ ಪಾಲಯಂಕೊಟ್ಟೈ ಸೆಂಟ್ರಲ್ ಜೈಲಿನಲ್ಲಿ ತೇವರ್, ನಾಡಾರ್, ಪಾಲಾರ್ ಸಮುದಾಯವರನ್ನು ಪ್ರತ್ಯೇಕವಾಗಿ ಇರಿಸಬೇಕೆಂಬ ನಿಯಮ ಅಸ್ತಿತ್ವದಲ್ಲಿದೆ. ಪಶ್ಚಿಮ ಬಂಗಾಳದ ಜೈಲ್ ಕೋಡ್​ನಲ್ಲಿ ಮೇಥೇರ್ ಅಥವಾ ಹರಿ ಸಮುದಾಯದವರಿಗೆ ಕಸ ಗುಡಿಸುವ ಕೆಲಸ ಕೊಡಬೇಕೆಂದು ನಮೂದಿಸಲಾಗಿದೆ. ಸ್ವಾತಂತ್ರ್ಯೊತ್ತರ ಭಾರತದಲ್ಲೂ ಇಂತಹ ನಿಯಮಗಳು ಇನ್ನೂ ಉಳಿದುಕೊಂಡಿವೆ ಎಂಬುದು ನಿಜಕ್ಕೂ ಆಶ್ಚರ್ಯಕರ ಮತ್ತು ಶೋಚನೀಯ ಸಂಗತಿಯಾಗಿದೆ. ಇದೆಲ್ಲವನ್ನು ಗಮನಿಸಿದವರೊಬ್ಬರು ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

ಅದರ ವಿಚಾರಣೆ ಸಮಯದಲ್ಲೇ ನ್ಯಾಯಮೂರ್ತಿಗಳು 10ಕ್ಕೂ ಹೆಚ್ಚು ರಾಜ್ಯಗಳ ಜೈಲುಗಳಲ್ಲಿ ತಾರತಮ್ಯದ ನಿಯಮಗಳು ಇರುವುದನ್ನು ಗುರುತಿಸಿದ್ದರು. ಉತ್ತರಪ್ರದೇಶ, ಒಡಿಶಾ, ಜಾರ್ಖಂಡ್, ಕೇರಳ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಪಂಜಾಬ್, ತಮಿಳುನಾಡು ರಾಜ್ಯಗಳ ಜೈಲು ನಿಯಮಾವಳಿಗಳನ್ನು ಉಲ್ಲೇಖಿಸಿದ್ದರು. ಬಳಿಕ, ಕೇಂದ್ರ ಸರ್ಕಾರಕ್ಕೆ ಮತ್ತು ಈ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದ್ದರು. ವಿಚಾರಣೆ ಬಳಿಕ ಕಳೆದ ಜುಲೈನಲ್ಲಿ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಇದೀಗ ಇಂತಹ ತಾರತಮ್ಯವನ್ನು ಕೊನೆಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇಂತಹ ತಾರತಮ್ಯಕ್ಕೆ ತಿಲಾಂಜಲಿ ಇತ್ತಿರುವ ಸವೋಚ್ಚ ನ್ಯಾಯಾಲಯ, ಎಲ್ಲ ರಾಜ್ಯಗಳು ಇನ್ನು ಮೂರು ವಾರಗಳಲ್ಲಿ ಜೈಲು ನಿಯಮಗಳ ಕೈಪಿಡಿಯನ್ನು ಪರಿಷ್ಕರಿಸಬೇಕೆಂದು ಆದೇಶ ನೀಡಿದೆ. ಪ್ರತಿ ರಾಜ್ಯವೂ ತನ್ನದೇ ಆದ ಜೈಲು ಕೈಪಿಡಿ ಹೊಂದಿರುತ್ತದೆ. ಈಗ ಸುಪ್ರೀಂ ಕೋರ್ಟ್ ನಿರ್ದೇಶನದ ಆಧಾರದ ಮೇಲೆ ಈ ಕೈಪಿಡಿಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಮುಂದಡಿ ಇಡಬೇಕು. ಕೈದಿಗಳ ಮಧ್ಯೆ ಜಾತಿ ಆಧಾರದ ಮೇಲೆ ತಾರತಮ್ಯ ಮಾಡುವ ಪಿಡುಗನ್ನು ತೊಡೆದುಹಾಕಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net