ನವದೆಹಲಿ: ವೈಜಾಗ್ ಸ್ಟೀಲ್ ಕಾರ್ಖಾನೆಯ ಬಗ್ಗೆ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಎತ್ತಿರುವ ಪ್ರಶ್ನೆಗಳಿಗೆ ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಆತ್ಮಸಾಕ್ಷಿ ನೋಡುವವರು ಯಾರು?: ಬಸವರಾಜ ಬೊಮ್ಮಾಯಿ ಹೀಗ್ಯಾಕಂದ್ರು?
ಕೆ.ಸಿ.ವೆಣುಗೋಪಾಲ್ ಅವರು ವೈಜಾಗ್ ಉಕ್ಕು ಕಾರ್ಖಾನೆಯ ಬಗ್ಗೆ ಸುಳ್ಳುಗಳನ್ನೇ ಹಬ್ಬಿಸುತ್ತಿದ್ದಾರೆ. ಅವರ ಹೇಳಿಕೆಯಲ್ಲಿ ಹುರುಳಿಲ್ಲ. ರಾಜಕೀಯ, ಮತಬ್ಯಾಂಕ್ ರಾಜಕಾರಣಕ್ಕಾಗಿ ಅವರು ಕಾರ್ಖಾನೆಯ ಕಾರ್ಮಿಕರು, ಸಾರ್ವಜನಿಕರ ಭಾವನೆಗಳ ಜತೆ ಆಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಸಚಿವರು ಗುಡುಗಿದರು.
ವೈಜಾಗ್ ಉಕ್ಕು ಕಾರ್ಖಾನೆಯಲ್ಲಿ ಯಾವೊಬ್ಬ ಕಾರ್ಮಿಕನನ್ನು ಕೆಲಸದಿಂದ ತೆಗೆಯಲಾಗಿಲ್ಲ. ಎಲ್ಲಾ 4200 ಕಾರ್ಮಿಕರನ್ನು 48 ಗಂಟೆಗಳೊಳಗೆ ಮರು ನೇಮಕ ಮಾಡಲಾಗಿದೆ. ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಕೈಗಾರಿಭಿವೃದ್ಧಿ, ಅದರಲ್ಲಿ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳಿಗೆ ಶಕ್ತಿ ತುಂಬಲಾಗುತ್ತಿದೆ. ಆದರೆ, ಯುಪಿಎ ಸರ್ಕಾರದ ಕಾಲದಲ್ಲಿ ಇವುಗಳನ್ನು ಸಂಪೂರ್ಣ ಹಾಳು ಮಾಡಲಾಗಿತ್ತು ಇಂದು ಸಚಿವರು ದೂರಿದ್ದಾರೆ.
ಸೆಪ್ಟೆಂಬರ್ 27ರಂದು ಸೇವೆಯಿಂದ ತೆಗೆದು ಹಾಕಲ್ಪಟ್ಟ ಕಾರ್ಖಾನೆಯ 4,200 ಗುತ್ತಿಗೆ ಕಾರ್ಮಿಕರನ್ನು ಕೇವಲ 48 ಗಂಟೆಗಳ ಒಳಗಾಗಿ ಮರು ನೇಮಕ ಮಾಡಿಕೊಳ್ಳಲಾಗಿದೆ. ಸೆಪ್ಟೆಂಬರ್ 29ಕ್ಕೆ ಎಲ್ಲಾ ನೌಕರರಿಗೂ ಮತ್ತೆ ಉದ್ಯೋಗ ಕಲ್ಪಿಸಲಾಗಿದೆ. ಇದರ ಬಗ್ಗೆ ಎಳ್ಳಷ್ಟೂ ಮಾಹಿತಿ ಇಲ್ಲದ ವೇಣುಗೋಪಾಲ್ ಅವರು ರಾಜಕೀಯ ಲಾಭಕ್ಕಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ನಿಮ್ಮ ಮಾಹಿತಿ ತಪ್ಪು, ಕೇವಲ ಇಂಥ ಮಾಹಿತಿಗಳನ್ನು ಹಬ್ಬಿಸಲು ಎಲ್ಲಿಲ್ಲದ ಆತುರಪಡುತ್ತಿದ್ದೀರಿ ಎಂದು ಕೇಂದ್ರ ಸಚಿವರು ಕಿಡಿಕಾರಿದ್ದಾರೆ.
ವೈಜಾಗ್ ಉಕ್ಕು ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಹಾಗೂ ನಾನು ಕೂಡ ವಿಶಾಖಪಟ್ಟಣಕ್ಕೆ ತೆರಳಿ ಕಾರ್ಖಾನೆಯನ್ನು ವೀಕ್ಷಿಸಿದ್ದೇನೆ. ಕಾರ್ಮಿಕರು, ಕಾರ್ಮಿಕ ಸಂಘಟನೆಗಳು, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸಚಿವಾಲಯದಲ್ಲಿ ಕೂಡ ಹಲವಾರು ಸಭೆಗಳನ್ನು ನಡೆಸಿದ್ದೇನೆ. ನನ್ನ ಸಹೋದ್ಯೋಗಿ ಸಚಿವರಾದ ಶ್ರೀನಿವಾಸ ಭೂಪತಿರಾಜು ವರ್ಮ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಅಲ್ಲದೆ; ಕಾರ್ಖಾನೆಯ ಭವಿಷ್ಯದ ಬಗ್ಗೆ ಪ್ರಧಾನಿಗಳಿಗೆ ಮನವಿ ಮಾಡಿದ್ದೇನೆ ಹಾಗೂ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೆ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
Haryana Polls | ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಕೋಮುವಾದ; ‘ಕೈ’ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ