ಸಂಪಾದಕೀಯ: ಮಧ್ಯವರ್ತಿಗಳ ಹಾವಳಿ ತಪ್ಪಲಿ

Health (6)
Published on

ಸಂಪಾದಕೀಯ: ಪ್ರಾದೇಶಿಕ ಸಾರಿಗೆ ಕಚೇರಿ(ಆರ್​ಟಿಒ)ಗಳು ಲಂಚ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ಕುಖ್ಯಾತಿ ಪಡೆದಿರುವುದು ಗೊತ್ತಿರುವಂಥದ್ದೇ. ಯಾವುದೇ ಕೆಲಸ ಆಗಬೇಕಾದರೂ ಮಧ್ಯವರ್ತಿಗಳ ಮೂಲಕವೇ ತೆರಳಬೇಕು. ಒಂದೊಮ್ಮೆ, ನೇರವಾಗಿ ಅಲ್ಲಿನ ಸಂಬಂಧಪಟ್ಟ ಸಿಬ್ಬಂದಿಯನ್ನು ಸಂಪಕಿಸಿದರೂ, ‘ದಲ್ಲಾಳಿ ಮೂಲಕ ಬನ್ನಿ, ಕೆಲಸ ಬೇಗ ಆಗುತ್ತದೆ’ ಎಂಬ ಅಲಿಖಿತ ಸೂಚನೆಯನ್ನು ಯಾವುದೇ ಮುಲಾಜಿಲ್ಲದೆ ನೀಡುವ ನಿದರ್ಶನಗಳಿಗೆ ಕೊರತೆ ಇಲ್ಲ. ಅಲ್ಲದೆ, ಕಚೇರಿಗೆ ಬರುವ ಸಾರ್ವಜನಿಕರಿಂದ ಕೆಲವಡೆ ಫೈಲ್ ಸ್ವೀಕಾರ, ಶುಲ್ಕ ಪಾವತಿ ಎಲ್ಲವನ್ನೂ ಮಧ್ಯವರ್ತಿಗಳೇ ಮಾಡುತ್ತಾರೆ. ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಯಂತೆಯೇ ವರ್ತಿಸಿ ಹೆಚ್ಚುವರಿ ಹಣಕ್ಕಾಗಿ ಕಿರುಕುಳ ಕೊಡುವ ಪ್ರಕರಣಗಳಿಗೆ ಸಂಬಂಧಿಸಿ ಸಾರ್ವಜನಿಕರು ಸಾಕಷ್ಟು ಬಾರಿ ದೂರು ನೀಡಿದ್ದಾರೆ.

‘ಪ್ರಾದೇಶಿಕ ಸಾರಿಗೆ ಕಚೇರಿಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲಾಗುವುದು’ ಎಂಬ ಆಶ್ವಾಸನೆಗಳನ್ನು ಜನಸಾಮಾನ್ಯರು ಕೇಳಿ ಕೇಳಿ ರೋಸಿಹೋಗಿದ್ದಾರೆ. ಇಂಥ ಅಪಸವ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಆರ್​ಟಿಒನ 32 ಸೇವೆಗಳನ್ನು ಆನ್​ಲೈನ್ ಮೂಲಕ ಬೆರಳ ತುದಿಯಲ್ಲಿ ಸಿಗುವಂತೆ ಮಾಡಲು ಉದ್ದೇಶಿಸಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಆದರೆ, ಜಾರಿಯಲ್ಲಿ ಯಾವುದೇ ಲೋಪವಾಗದಂತೆ, ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಮುಖ್ಯ. ಈ ನಿಟ್ಟಿನಲ್ಲಿ ಆರ್​ಟಿಒ ಕಚೇರಿಗಳನ್ನು ಸರ್ಕಾರ ಹಂತಹಂತವಾಗಿ ಶುದ್ಧೀಕರಣ ಮಾಡಬೇಕಿದೆ. ಆರ್​ಟಿಒ ಸೇವೆಗಳನ್ನು ಆನ್​ಲೈನ್ ಮೂಲಕ ಜಾರಿಗೆ ತರುವ ಬಗ್ಗೆ ಈ ಹಿಂದೆಯೂ ಹೇಳಲಾಗಿತ್ತು ಮತ್ತು ಕೆಲ ಮಟ್ಟಿಗೆ ಅನುಷ್ಠಾನಕ್ಕೆ ಬಂದರೂ ನ್ಯೂನತೆಗಳು ದೊಡ್ಡ ಪ್ರಮಾಣದಲ್ಲಿದ್ದವು ಎಂಬುದು ಗಮನಾರ್ಹ.

ರಾಜ್ಯದಲ್ಲಿ ವಾಹನ್-4, ಸಾರಥಿ-4 ಮತ್ತು ಇ-ಪೇಮೆಂಟ್ ಆಫ್ ಟ್ಯಾಕ್ಸ್​ನಂತಹ ಆನ್​ಲೈನ್ ಸೇವೆಗಳನ್ನು ಇಲಾಖೆಯ ಎಲ್ಲ ಕಚೇರಿಗಳಲ್ಲಿ ಜಾರಿಗೆ ತರಲಾಗಿದೆ. ಕರ್ನಾಟಕ-1, ಬೆಂಗಳೂರು-1 ಮತ್ತು ಮೊಬೈಲ್-1 ಆಪ್​ಗಳಲ್ಲೂ ವಾಹನದ ವಿವರ ಹಾಗೂ ಮಾಹಿತಿ ಪಡೆಯಲು ಈಗ ಅವಕಾಶ ಕಲ್ಪಿಸಲಾಗಿದೆ. ‘ಆರ್​ಟಿಒ ಕಚೇರಿಗಳಲ್ಲಿ ಈ ಮೊದಲು ಮಧ್ಯವರ್ತಿಗಳ ಹಾವಳಿ ಜಾಸ್ತಿ ಇತ್ತು. ಆದರೀಗ 32 ಸೇವೆಗಳನ್ನು ಆನ್​ಲೈನ್ ಮಾಡಿದ್ದೇವೆ. ಶೇಕಡ 80ರಷ್ಟು ಕಡಿವಾಣ ಬಿದ್ದಿದೆ. ಶೇ.100 ನಿಯಂತ್ರಣ ಮಾಡುತ್ತೇವೆ. ಕಚೇರಿಯ ಒಳಗೆ ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳು ಇರಬಾರದು.

ಒಂದು ವೇಳೆ ಇದ್ದರೆ ಸಂಬಂಧಿಸಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಸಾರಿಗೆ ಆಯುಕ್ತರಿಗೆ ಈಗಾಗಲೇ ಸೂಚಿಸಿದ್ದೇನೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಹೇಳಿದ್ದಾರೆ. ಸಚಿವರ ಕಾಳಜಿ ಶ್ಲಾಘನೀಯವೇ. ಆದರೆ, ಈ ಪ್ರಯತ್ನಗಳು ಆರಂಭಿಕ ಉತ್ಸಾಹದಲ್ಲೇ ಮುಗಿದು ಹೋಗದೆ, ರ್ತಾಕ ಅಂತ್ಯ ಕಾಣಬೇಕು. ಏಕೆಂದರೆ, ಜನರು ಆರ್​ಟಿಇ ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ರೋಸಿಹೋಗಿದ್ದಾರೆ. ಆನ್​ಲೈನ್ ಸೇವೆಗಳ ಲಭ್ಯತೆ ಕುರಿತಂತೆ ಸಾರಿಗೆ ಇಲಾಖೆ ವತಿಯಿಂದ ಸೂಕ್ತ ಜಾಗೃತಿ ಮತ್ತು ಅರಿವನ್ನು ಮೂಡಿಸಬೇಕು. ಆ ಮೂಲಕ ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು ಲಂಚಮುಕ್ತಗೊಳಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net