

ರಾಜ್ಯ ಸರ್ಕಾರ ತಡವಾಗಿಯಾದರೂ ಜನರಿಗೆ ಅನುಕೂಲವಾಗುವಂಥ ನಿರ್ಣಯವನ್ನು ತೆಗೆದುಕೊಂಡಿದೆ. ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅನಧಿಕೃತ ಮನೆ, ನಿವೇಶನಗಳ ಮಾಲೀಕರಿಗೆ ಒಂದು ಬಾರಿಗೆ ಅನ್ವಯಿಸಿ ಇ-ಖಾತಾಗೆ ಸಮಾನಾಂತರವಾದ ಬಿ-ಖಾತಾ ನೀಡಲು ರಾಜ್ಯ ಸರ್ಕಾರ ತೀರ್ವನಿಸಿದ್ದು, ಆನ್ಲೈನ್ ಮುಖೇನವೇ ಬಿ-ಖಾತಾ (ಇ-ಆಸ್ತಿ) ತಲುಪಿಸುವ ರಾಜ್ಯವ್ಯಾಪಿ ಅಭಿಯಾನದಡಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಕ್ರಮ ಆಗಲಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅನಧಿಕೃತ ಆಸ್ತಿಗಳಿಗೆ ಬಿ-ಖಾತಾಗೆ ಸಮಾನಾಂತರ ಇ-ಖಾತಾ ವಿತರಿಸುವುದರಿಂದ, ಎಲ್ಲ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರಲಿವೆ. ಈ ಮೂಲಕ ಸರ್ಕಾರಕ್ಕೂ ತೆರಿಗೆ ಸಂಗ್ರಹ ಹೆಚ್ಚಳವಾಗಲಿದೆ. ಅಲ್ಲದೆ, ಜನಸಾಮಾನ್ಯರ ಹಳೆಯ ಸಮಸ್ಯೆ ನಿವಾರಣೆಯಾಗಲಿದೆ. ಫೆಬ್ರವರಿ 10ರಿಂದ ಈ ನಿಟ್ಟಿನಲ್ಲಿ ಅಭಿಯಾನ ನಡೆಯಲಿದ್ದು, 3 ತಿಂಗಳ ಗಡುವು ವಿಧಿಸಲಾಗಿದೆ.
ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ಮುಖೇನ ಭಾಗಶಃ ಮಾಲೀಕತ್ವ ಲಭಿಸಲಿದೆ. ಹಾಗೆಯೇ ನಗರ- ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ರೂಪದ ಆದಾಯವೂ ವೃದ್ಧಿಸಲಿದೆ. ಇದಾದ ಬಳಿಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಇ-ಖಾತಾ ವಿತರಿಸಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬೆಂಗಳೂರು ಹೊರತುಪಡಿಸಿ ನಗರ-ಪಟ್ಟಣಗಳ 55 ಲಕ್ಷ ಆಸ್ತಿ (ಮನೆ/ನಿವೇಶನ)ಗಳಿಗೆ ಇ-ದಾಖಲೆಯಿದೆ. ಉಳಿದ 34 ಲಕ್ಷ ಆಸ್ತಿಗಳಿಗೆ ಯಾವುದೇ ಖಾತೆಗಳಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯಂತೆ ಒಂದು ಬಾರಿಗೆ ಇಂತಹ ಆಸ್ತಿಗಳಿಗೆ ಬಿ-ಖಾತೆಗೆ ಸಮಾನಾಂತರವಾದ ಇ-ಖಾತಾ ವಿತರಿಸಲು ಕಂದಾಯ ಸಚಿವರು ಸೂಚಿಸಿರುವುದರಿಂದ, ಈ ಆಸ್ತಿ ಮಾಲೀಕರು ಒಂದಿಷ್ಟು ನಿರಾಳರಾಗಿದ್ದಾರೆ.
ನಗರ, ಪಟ್ಟಣ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಅನಧಿಕೃತ ಬಡಾವಣೆ, ಆಸ್ತಿಗಳ ನಿರ್ಮಾಣ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಸ್ಪಷ್ಟ ಸೂಚನೆ ನೀಡಿದರೂ, ಇಂಥ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಅಲ್ಲದೆ, ಕೆಲ ಪ್ರದೇಶಗಳಲ್ಲಿ ತಾಂತ್ರಿಕ ತೊಡಕು, ಭೂವ್ಯಾಜ್ಯ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಂದಲೂ ಅನಧಿಕೃತ ಮನೆ, ನಿವೇಶನಗಳ ಮಾಲೀಕರು ದಿಕ್ಕು ಕಾಣದಂತಾಗಿದ್ದಾರೆ. ಸೂಕ್ತ ದಾಖಲಾತಿ ಇಲ್ಲದೆ ಮುಂದೇನು ಎಂದು ಇವರು ಚಿಂತಿತರಾಗಿದ್ದರು.
ಈ ನಿಟ್ಟಿನಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ ರ್ತಾಕ ಪರಿಹಾರ ಸೂಚಿಸುವುದು ಅಗತ್ಯವಾಗಿತ್ತು. ಆದ್ದರಿಂದ ಸರ್ಕಾರ ಇ-ಖಾತಾಗೆ ಸಮಾನಾಂತರವಾದ ಬಿ-ಖಾತಾ ನೀಡಲು ಮುಂದಾಗಿರುವುದು ಸಮಸ್ಯೆಯ ತೀವ್ರತೆಯನ್ನು ತಗ್ಗಿಸಲು ನೆರವಾಗಲಿದೆ. ಆದರೆ, ಬಿ ಖಾತಾ ನೀಡಿಕೆ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳದ್ದೇ ಜವಾಬ್ದಾರಿ ಆಗಿರುವುದರಿಂದ ಇದನ್ನು ಸಮರ್ಪಕವಾಗಿ ನಿರ್ವಹಿಸಬೇಕೆ ಹೊರತು ಹೊಸದಾಗಿ ಮತ್ತಷ್ಟು ಗೊಂದಲ ಸೃಷ್ಟಿಸುವಂತಾಗಬಾರದು. ಜಾರಿಯ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಮೇಲ್ವಿಚಾರಣೆಯ ಹಕ್ಕಿದ್ದು, ಸಮರ್ಪಕ ಅನುಷ್ಠಾನ ಅಗತ್ಯ. ಗ್ರಾಮ ಪಂಚಾಯಿತಿಗಳಲ್ಲೂ ಅಪಸವ್ಯಗಳು ನುಸುಳದೆ ಪಾರದರ್ಶಕವಾಗಿ ಜಾರಿಯಾಗಲಿ.