ದೇಶದಲ್ಲಿ ಜಿಎಸ್ಟಿ ವ್ಯವಸ್ಥೆ ಜಾರಿಯಾಗಿ ಈಗಾಗಲೇ 7 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಸವಾಲುಗಳು, ಅಪಸವ್ಯಗಳನ್ನು ನಿವಾರಿಸಿಕೊಂಡು ಈ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳ್ಳಬೇಕಿತ್ತು. ಆದರೆ, ವರ್ಷದಿಂದ ವರ್ಷಕ್ಕೆ ಜಿಎಸ್ಟಿ ವಂಚನೆಯ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ. ಈ ವಂಚನೆಯಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ.
2024ರ ಆಗಸ್ಟ್ನಿಂದ ಅಕ್ಟೋಬರ್ವರೆಗೆ ನಡೆದ ಜಿಎಸ್ಟಿ ವಂಚನೆ ಶೋಧ ಕಾರ್ಯಾಚರಣೆಯಲ್ಲಿ ದೇಶಾದ್ಯಂತ 18 ಸಾವಿರ ಬೋಗಸ್ ಕಂಪನಿಗಳು ಪತ್ತೆಯಾಗಿದ್ದು, ಅವುಗಳಿಂದ 25 ಸಾವಿರ ಕೋಟಿ ರೂ. ಜಿಎಸ್ಟಿ ವಂಚನೆಯಾಗಿರುವುದು ದೃಢಪಟ್ಟಿದೆ. ಯಾವುದೇ ವಸ್ತುಗಳ ಮಾರಾಟ ಮಾಡದಿದ್ದರೂ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆಯುವ ಉದ್ದೇಶದಿಂದಲೇ 73 ಸಾವಿರ ಬೇನಾಮಿ ಜಿಎಸ್ಟಿ ಐಡೆಂಟಿಫಿಕೇಶನ್ ನಂಬರ್ಗಳು (ಜಿಎಸ್ಟಿಐಎನ್) ರೂಪುಗೊಂಡಿರುವುದೂ ಗೊತ್ತಾಗಿದೆ. ಈ ಹಿಂದೆ 2023ರ ಮೇ 16ರಿಂದ ಜುಲೈ 15ರವರೆಗೆ ನಡೆದಿದ್ದ ಪ್ರಥಮ ವಿಶೇಷ ಅಭಿಯಾನದಲ್ಲಿ 21,791 ಬೋಗಸ್ ಕಂಪನಿಗಳಿಂದ 24,010 ಕೋಟಿ ರೂ. ಜಿಎಸ್ಟಿ ವಂಚನೆ ಆಗಿರುವುದು ಪತ್ತೆಯಾಗಿತ್ತು. ಕೇಂದ್ರ ಸರ್ಕಾರ ಉದ್ಯಮಿಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ತೆರಿಗೆ ವಂಚಕರ ಸಂಖ್ಯೆ ಕಡಿಮೆ ಆಗದಿರುವುದು ದುರದೃಷ್ಟಕರ ಸಂಗತಿ.
ಆನ್ಲೈನ್ ಗೇಮಿಂಗ್, ಬ್ಯಾಂಕಿಂಗ್ (ರಾಷ್ಟ್ರೀಕೃತವಲ್ಲದ), ಹಣಕಾಸು ಸೇವೆ ಮತ್ತು ವಿಮೆ (ಬಿಎಫ್ಎಸ್ಐ), ಕಬ್ಬಿಣ, ತಾಮ್ರ ಹಾಗೂ ಮಿಶ್ರಲೋಹದ ಸರಕು ವಲಯದಲ್ಲಿ ಅತಿ ಹೆಚ್ಚು ವಂಚನೆ ಕಂಡುಬಂದಿದೆ. ಅಲ್ಲದೆ, ಪಾನ್ ಮಸಾಲಾ, ತಂಬಾಕು, ಸಿಗರೇಟ್, ಬೀಡಿ ತಯಾರಿಕಾ ವಲಯದಲ್ಲೂ ತೆರಿಗೆ ವಂಚನೆ ಪ್ರಕರಣಗಳು ಹೆಚ್ಚಿವೆ. 2017-18ರಲ್ಲಿ 7,879 ಕೋಟಿ ರೂ., 2018-19ರಲ್ಲಿ 19,319 ಕೋಟಿ ರೂ., 2019-20ರಲ್ಲಿ 21,739 ಕೋಟಿ ರೂ., 2020-21ರಲ್ಲಿ 31,908 ಕೋಟಿ ರೂ., 2021-22ರಲ್ಲಿ 50,325 ಕೋಟಿ ರೂ. ಜಿಎಸ್ಟಿ ವಂಚನೆಯನ್ನು ಪತ್ತೆ ಹಚ್ಚಲಾಗಿದೆ.
‘ತೆರಿಗೆ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಇದಕ್ಕೆ ಕಡಿವಾಣ ಹಾಕಲು ಕಸ್ಟಮ್ಸ್ ಮಂಡಳಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಹೇಳಿದ್ದು, ತೆರಿಗೆ ವಂಚನೆ ಎಸಗುವ ವರ್ತಕರಿಗೆ ಕೆಲ ನಿರ್ಬಂಧಗಳನ್ನು ವಿಧಿಸಲು ಚಿಂತನೆ ನಡೆಸಿದೆ. ಈ ರೀತಿ ತೆರಿಗೆ ವಂಚಿಸುವ ಉದ್ಯಮಿಗಳಿಗೆ ಕೇಂದ್ರ ಸರ್ಕಾರ ದಂಡನೀಯ ನಿರ್ಬಂಧಗಳನ್ನು ವಿಧಿಸಬೇಕು. ಇಲ್ಲವಾದಲ್ಲಿ, ಮತ್ತಷ್ಟು ವಲಯಗಳಿಗೆ ಈ ವಂಚನೆ ಜಾಲ ವಿಸ್ತರಿಸುವ ಅಪಾಯ ತಪ್ಪಿದ್ದಲ್ಲ.
ಇಂತಹ ವಂಚನೆಗಳನ್ನು ಪತ್ತೆ ಮಾಡುವುದಕ್ಕಾಗಿ ಈಗ ಕೇಂದ್ರ ವಿತ್ತ ಸಚಿವಾಲಯ ವರ್ಷದಲ್ಲಿ ಆಗೊಮ್ಮೆ ಈಗೊಮ್ಮೆ ಅಭಿಯಾನ ನಡೆಸುತ್ತಿದೆ. ಇದನ್ನು ನಿರಂತರ ಪ್ರಕ್ರಿಯೆ ಮಾಡಿದರೆ ವಂಚಕರಲ್ಲಿ ಭಯ ಮೂಡಿಸಲು ಸಾಧ್ಯವಾಗುತ್ತದೆ. ಕಠಿಣ ಕ್ರಮ ಕೈಗೊಳ್ಳದೆ ತೆರಿಗೆ ವಂಚಕರ ಜಾಲ ನಿಯಂತ್ರಿಸುವುದು ಕಷ್ಟ. ಹಾಗಾಗಿ, ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ನೀತಿ ರೂಪಿಸಿ, ಅನುಷ್ಠಾನಕ್ಕೆ ತರುವ ಅಗತ್ಯವಿದೆ.