

ವ್ಯವಸ್ಥೆಯಲ್ಲಿನ ಗೊಂದಲ, ವಿಳಂಬ ಮತ್ತು ಅತಿ ದೀರ್ಘ ಪ್ರಕ್ರಿಯೆಗಳೇ ಉತ್ತಮ ಆಶಯಗಳನ್ನು, ಮೂಲೋದ್ದೇಶಗಳನ್ನು ಹಾಳು ಮಾಡಿ ಬಿಡುತ್ತವೆ. ಈ ದೋಷಗಳನ್ನು ನಿವಾರಿಸಿ ಸಮರ್ಪಕ, ಪಾರದರ್ಶಕ ಸುಧಾರಣೆಗಳನ್ನು ತಂದರೆ ಅದರಿಂದ ವ್ಯವಸ್ಥೆಯ ಶುದ್ಧೀಕರಣ ಸಾಧ್ಯ. ‘ಒಂದು ದೇಶ ಒಂದು ತೆರಿಗೆ (ಜಿಎಸ್ಟಿ)’, ಹೊಸ ಶಿಕ್ಷಣ ನೀತಿಯ ಬಳಿಕ ಕೇಂದ್ರ ಸರ್ಕಾರ ಮತ್ತೊಂದು ಐತಿಹಾಸಿಕ ಸುಧಾರಣೆಯನ್ನು ಘೋಷಿಸಿದೆ. ದೇಶದಲ್ಲಿನ ವಿವಿಧ ಉದ್ಯೋಗಗಳಿಗಾಗಿ ಈವರೆಗೆ ಹಲವು ಪರೀಕ್ಷೆಗಳನ್ನು ಬರೆಯಬೇಕಿತ್ತು, ಅಲ್ಲದೆ ಪದೇಪದೆ ಶುಲ್ಕ ತುಂಬುವುದು, ದೂರದ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸುವುದು ಸೇರಿ ಹಲವು ಸಮಸ್ಯೆಗಳು ಉದ್ಯೋಗಾಕಾಂಕ್ಷಿಗಳ ಉತ್ಸಾಹವನ್ನು ತಗ್ಗಿಸುತ್ತಿದ್ದವು. ಈ ಸಮಸ್ಯೆಯನ್ನು ಹೊಗಲಾಡಿಸಲು ದೇಶದ ವಿವಿಧ ಉದ್ಯೋಗಗಳಿಗೆ ಒಂದೇ ಸಾಮಾನ್ಯ ಅರ್ಹತಾ ಪರೀಕ್ಷೆ ಅಥವಾ ಪ್ರವೇಶ ಪರೀಕ್ಷೆ ನಡೆಸಲು ಮತ್ತು ರಾಷ್ಟ್ರೀಯ ನೇಮಕಾತಿ ಪ್ರಾಧಿಕಾರ ರಚಿಸಲು ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಹೊಸ ಪ್ರಾಧಿಕಾರ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಮುಂದಿನ ಮೂರು ವರ್ಷಗಳಿಗೆ 1,517 ಕೋಟಿ ರೂ.ವೆಚ್ಚವಾಗಲಿದೆ. ಇದನ್ನೂ ಓದಿ: ಸಂಪಾದಕೀಯ- ಶಾಂತಿ ಕದಡುವುದು ಬೇಡ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ
ನೇಮಕಾತಿ ಪ್ರಕ್ರಿಯೆ ಸರಳ ಗೊಳಿಸುವುದು, ಅರ್ಜಿ ಸಲ್ಲಿಕೆಯಲ್ಲಿನ ವಿಳಂಬ, ಅಕ್ರಮ ತಪ್ಪಿಸುವುದು, ಗ್ರಾಮೀಣ ಮತ್ತು ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸುವುದು, ಪರೀಕ್ಷೆಗಳಿಗೆ ಹಲವು ಬಾರಿ ಶುಲ್ಕ ತುಂಬುವುದನ್ನು ತಪ್ಪಿಸುವುದು-ಹೀಗೆ ಮಹತ್ವದ ಸುಧಾರಣೆಗಳ ಆಶಯಗಳನ್ನು ಒಳಗೊಂಡು, ಈ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ. ದೇಶದಲ್ಲಿ ಪ್ರತಿ ವರ್ಷ ಸರಾಸರಿ 1.25 ಲಕ್ಷ ಸರ್ಕಾರಿ ಹುದ್ದೆ/ಸ್ಥಾನಗಳಿಗೆ ಭರ್ತಿ ಪ್ರಕ್ರಿಯೆ ನಡೆಯುತ್ತದೆ. ಪ್ರಸ್ತುತ 20ಕ್ಕೂ ಹೆಚ್ಚು ಏಜೆನ್ಸಿಗಳು ಪರೀಕ್ಷೆಗಳನ್ನು ನಡೆಸುತ್ತಿವೆ. 2.5-3 ಕೋಟಿಗೂ ಅಧಿಕ ಉದ್ಯೋಗಾಕಾಂಕ್ಷಿಗಳು ಪರೀಕ್ಷೆ ತೆಗೆದುಕೊಳ್ಳುತ್ತಾರೆ.
ಮೊದಲ ಹಂತದಲ್ಲಿ ಮೂರು ಏಜೆನ್ಸಿಗಳ ವಿಲೀನ ನಡೆಯಲಿದೆ (ರೈಲ್ವೆ ರಿಕ್ರೂಟ್ವೆುಂಟ್ ಬೋರ್ಡ್ (ಆರ್ಆರ್ಬಿ), ಐಬಿಪಿಎಸ್, ಎಸ್ಎಸ್ಬಿ). ಎಲ್ಲ ಗ್ರೂಪ್ ಬಿ ಹಾಗೂ ಸಿ ವೃಂದದ ನಾನ್ ಗೆಜೆಟಡ್ ಹುದ್ದೆಗಳಿಗೆ ಒಂದೇ ಪ್ರವೇಶ ಪರೀಕ್ಷೆ ಇರಲಿದೆ. ಪರೀಕ್ಷೆಯ ಫಲಿತಾಂಶ ಮೂರು ವರ್ಷಗಳ ಅವಧಿವರೆಗೆ ಮಾನ್ಯತಾ ಅವಧಿ ಹೊಂದಿರುತ್ತದೆ. ಎಲ್ಲ ಆಕಾಂಕ್ಷಿಗಳಿಗೆ ಒಂದೇ ನೋಂದಣಿ ಪೋರ್ಟಲ್ ಇರಲಿದ್ದು, ಎಷ್ಟು ಬಾರಿಯಾದರೂ ಪರೀಕ್ಷೆ ಎದುರಿಸಬಹುದಾಗಿದೆ. ಗ್ರಾಮೀಣ ಪ್ರದೇಶದ ಉದ್ಯೋಗಾಕಾಂಕ್ಷಿಗಳು ಮಾಹಿತಿ, ಸೌಲಭ್ಯದ ಕೊರತೆಯಿಂದ ಅವಕಾಶ ವಂಚಿತರಾಗುತ್ತಿದ್ದರು. ಅಲ್ಲದೆ, ಪದೇಪದೆ ಶುಲ್ಕ ಭರಿಸಲಾಗದೆ, ದೂರಪ್ರಯಾಣ ಮಾಡಲಾಗದೆ ಪರೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಹೊಸ ವ್ಯವಸ್ಥೆಯಿಂದ ಅಂಥ ಸಮಸ್ಯೆಗಳು ನಿವಾರಣೆ ಆಗಲಿವೆ. ಅಲ್ಲದೆ, ನೇಮಕಾತಿ ಪ್ರಾಧಿಕಾರ ರಚನೆಯಿಂದ ಭ್ರಷ್ಟಾಚಾರ, ವಿಳಂಬ ಧೋರಣೆ, ಸ್ವಜನಪಕ್ಷಪಾತಕ್ಕೂ ಕಡಿವಾಣ ಬೀಳಲಿದೆ. ದೇಶದ ಕೋಟ್ಯಂತರ ಉದ್ಯೋಗಾಕಾಂಕ್ಷಿಗಳು ಭರವಸೆಯಿಂದ, ಹೊಸ ಹುಮ್ಮಸ್ಸಿನಿಂದ ಪರೀಕ್ಷೆ ಎದುರಿಸಲು ಸಾಧ್ಯವಾಗಲಿದೆ. ಇತರ ನೇಮಕಾತಿ ಏಜೆನ್ಸಿಗಳ ವಿಲೀನದ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಬೇಕು