

ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಗಲಭೆ ಪ್ರಕರಣದ ತನಿಖೆ ಮುಂದುವರಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮುಂದೇನು ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಗಲಭೆಗೆ ಸ್ಥಳೀಯ ರಾಜಕೀಯ ವೈಷಮ್ಯ ಕಾರಣವೆಂಬ ಅನುಮಾನದ ಬೆನ್ನಲ್ಲೇ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಕೈವಾಡವಿರುವ ಬಗ್ಗೆ ಪ್ರಾಥಮಿಕ ಸಾಕ್ಷ್ಯಗಳು ಲಭಿಸಿರುವುದು ಆತಂಕ ಮೂಡಿಸಿದೆ. ಗಲಭೆ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಪ್ರಮುಖ ಆರೋಪಿಗಳ ಬಂಧನವೂ ಆಗಿದೆ. ಆದರೆ, ಘಟನೆಯ ಆಳ ಹೊಕ್ಕಿದಂತೆ ಗಲಭೆಗೆ ಹಲವು ಬಗೆಯ ನಂಟುಗಳು ಇರುವುದು ಸ್ಪಷ್ಟವಾಗುತ್ತಿದ್ದು, ಒಟ್ಟಾರೆ ಪ್ರಕರಣ ಮತ್ತಷ್ಟು ಕಗ್ಗಂಟಾಗುತ್ತಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯಬೇಕು, ಗಲಭೆ ಸೃಷ್ಟಿಸಿದವರ ಹಿಂದೆ ಯಾರಿದ್ದಾರೆ? ಅವರ ನೆರವಿಗೆ ನಿಂತ ಶಕ್ತಿಗಳು ಯಾವವು? ಪೂರ್ವತಯಾರಿ, ಯೋಜನೆ ಇಲ್ಲದೆ ರಾತ್ರೋರಾತ್ರಿ ಮೂರು-ನಾಲ್ಕು ಸಾವಿರ ಜನ ಒಟ್ಟಾಗಲು ಹೇಗೆ ಸಾಧ್ಯ? ಈ ಎಲ್ಲ ಅಂಶಗಳು ತನಿಖೆಗೆ ಒಳಪಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಉಗ್ರ ನಂಟಿನ ಸಾಕ್ಷ್ಯಗಳು ಲಭ್ಯ ಆಗಿರುವ ಪ್ರಯುಕ್ತ ಇಡೀ ಪ್ರಕರಣವನ್ನು ಇನ್ನಷ್ಟು ಎಚ್ಚರಿಕೆಯಿಂದ ನಿಭಾಯಿಸಬೇಕಿದೆ ಎಂಬುದು ವಾಸ್ತವ.
ಫೇಸ್ಬುಕ್ನಲ್ಲಿ ವಿವಾದಾತ್ಮಕ ಪೋಸ್ಟ್ ಗಲಭೆಗೆ ನೆಪಮಾತ್ರ. ಇದರ ಹಿಂದೆ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕತ್ವ ಕಾಯ್ದೆ (ಎನ್ಆರ್ಸಿ) ಹಾಗೂ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ಈ ಎಲ್ಲ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಅಥವಾ ಶಾಂತಿ ಕದಡಬೇಕೆಂದು ದೊಡ್ಡ ಸಂಚು ರೂಪಿತವಾಗಿತ್ತು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಂಪಾದಕೀಯ: ಭವಿಷ್ಯಕ್ಕೆ ದಿಕ್ಸೂಚಿ; ಸರ್ಕಾರ, ವಿದ್ಯಾರ್ಥಿಗಳು ಅಭಿನಂದನೆಗೆ ಪಾತ್ರರು
ಗಲಭೆಯ ಹೊತ್ತಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ವ್ಯಾಪಕ ಪ್ರಮಾಣದಲ್ಲಿ ಹಾನಿ ಎಸಗಲಾಗಿದೆ. ಈ ಹಾನಿ ಮೊತ್ತವನ್ನು ತಪ್ಪಿತಸ್ಥರಿಂದಲೇ ವಸೂಲು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಉತ್ತಮ ಹೆಜ್ಜೆಯೇ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದ್ದು, ಹಲವು ಮಹತ್ವದ ನಿರ್ಣಯಗಳನ್ನು ತಳೆದಿದ್ದಾರೆ. ಮತ್ತು ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲು ಅಗತ್ಯವಿರುವ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆದರೆ, ಎಲ್ಲೇ ಗಲಭೆಗಳು ನಡೆದರೂ, ಅಲ್ಲಿ ತನಿಖೆಗೆ ಆಯೋಗವೋ, ಮತ್ತೊಂದು ಸಮತಿಯನ್ನೋ ರಚಿಸಲಾಗುವುದು ಸ್ವಾಭಾವಿಕ. ಇದು ಅವಶ್ಯಕ ಕ್ರಮವೂ ಹೌದು. ಇಂಥ ತನಿಖೆಗಳು ನಿದಗಿತ ಗಡುವಿನಲ್ಲಿ ಮುಗಿಯುವುದಿಲ್ಲ ಮತ್ತು ವರ್ಷಗಟ್ಟಲೇ ಎಳೆಯಲ್ಪಡುವುದರಿಂದ ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗಲು ಯತ್ನಿಸುತ್ತಾರೆ ಮತ್ತು ಗಲಭೆ ಸಂತ್ರಸ್ತರು ನ್ಯಾಯಕ್ಕಾಗಿ ದೀರ್ಘಾವಧಿ ಕಾಯಬೇಕಾಗುತ್ತದೆ. ಬೆಂಗಳೂರಿನ ವಿಷಯದಲ್ಲಿ ಇದು ಮರುಕಳಿಸದಂತಾಗಲಿ. ತನಿಖೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಸಂತ್ರಸ್ತರಿಗೆ ನ್ಯಾಯ ಮತ್ತು ತಪ್ಪಿತಸ್ಥರಿಗೆ ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಶಿಕ್ಷೆ ಆಗಬೇಕು.