ಸಂಪಾದಕೀಯ| ಸುಸೂತ್ರ ಸಾಗಲಿ

vidhana soudha
Published on

ಈ ವರ್ಷ ಕರೊನಾ ಕಾರಣದಿಂದಾಗಿ ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಇಲ್ಲ ಎಂಬುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಆದರೆ ಇದೀಗ ಸರ್ಕಾರದ ನಿರ್ಧಾರ ಬದಲಾಗಿದ್ದು, ಶೇ.6ರ ಮಿತಿಗೊಳಪಟ್ಟು ವರ್ಗಾವಣೆ ನಡೆಸಲು ನಿರ್ಧರಿಸಲಾಗಿದೆ. ಈಗ ಇಡೀ ಸರ್ಕಾರದ ಗಮನ ಬಹುತೇಕ ಕರೊನಾ ನಿರ್ವಹಣೆ ಮತ್ತು ನಿಯಂತ್ರಣದ ಮೇಲೆ ಇದ್ದು, ನೌಕರರ ವರ್ಗಾವಣೆಯು ಈ ಪ್ರಕ್ರಿಯೆ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಬೇಕಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ಕರೊನಾ ಸೋಂಕು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವತ್ರಿಕ ವರ್ಗಾವಣೆ ಬೇಡವೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದರು. ಆದರೆ ಇದಕ್ಕೆ ಆಡಳಿತ ಪಕ್ಷದ ಶಾಸಕರಿಂದಲೇ ವಿರೋಧ ವ್ಯಕ್ತವಾಯಿತು. ಹೀಗಾಗಿ ಮುಖ್ಯಮಂತ್ರಿಗಳು ಅನಿವಾರ್ಯವಾಗಿ ತಮ್ಮ ನಿರ್ಧಾರ ಬದಲಿಸಿದರೆನ್ನಲಾಗಿದೆ. ಬಿ ಮತ್ತು ಸಿ ವೃಂದದ ಅಧಿಕಾರಿ ಹಾಗೂ ನೌಕರರ ವರ್ಗಾವಣೆಗೆ ಈಗ ಒಪ್ಪಿಗೆ ನೀಡಲಾಗಿದ್ದು, ಶೇ.6ರ ಮಿತಿ ವಿಧಿಸಲಾಗಿದೆ. ಜುಲೈ 10ರೊಳಗೆ ವರ್ಗಾವಣೆ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಆದೇಶ ಹೊರಡಿಸಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿ ಆಯಾ ಇಲಾಖೆ ಸಚಿವರಿಗೆ ಅಧಿಕಾರ ನೀಡಲಾಗಿದೆ.

ಸಾಮಾನ್ಯವಾಗಿ ಪ್ರತಿವರ್ಷ ನೌಕರರ ವರ್ಗಾವಣೆ ನಡೆಯುತ್ತದೆ. ಎಷ್ಟು ನೌಕರರನ್ನು ವರ್ಗಾಯಿಸಬೇಕು ಎಂಬುದಕ್ಕೆ ಸಂಖ್ಯಾಮಿತಿ ಇರುತ್ತದೆ. ಈ ಪ್ರಮಾಣ ಶೇ.4ರಿಂದ ಶೇ.7ರವರೆಗೂ ಇರುತ್ತದೆ. ಹಾಗೇ ವರ್ಗಾವಣೆಗೆ ಸಮಯದ ಗಡುವನ್ನೂ ವಿಧಿಸಲಾಗುತ್ತದೆ. ಆದರೆ ಅನೇಕ ಸಲ ಈ ಎರಡೂ ನಿಯಮಗಳು ಪಾಲನೆಯಾಗುವುದಿಲ್ಲ. ಹಾಗೇ, ವರ್ಗಾವಣೆಯ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ಕೂಡ ಸರ್ಕಾರ ಪ್ರಕಟಿಸುತ್ತದೆ. ಖಾಲಿ ಇರುವ ಹಾಗೂ ಆಡಳಿತಾತ್ಮಕವಾಗಿ ತ್ವರಿತವಾಗಿ ತುಂಬಬೇಕಾದ ಹುದ್ದೆಗಳಿಗೆ ಆದ್ಯತೆ, ಪತಿ-ಪತ್ನಿ ಪ್ರಕರಣ, ಸಾರ್ವಜನಿಕವಾಗಿ ದೂರು ಬಂದಿರುವವರು ಈ ಮುಂತಾದವಕ್ಕೆ ಆದ್ಯತೆ ನೀಡಬೇಕೆಂದು ಮಾರ್ಗಸೂಚಿ ಇರುತ್ತದೆ. ಆದರೆ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದೂ ವಿರಳ. ಅದೇ ರೀತಿ, ವರ್ಗಾವಣೆಯಲ್ಲಿ ವಶೀಲಿ ಮತ್ತು ಹಣದ ವ್ಯವಹಾರವಿರುತ್ತದೆಂಬ ಆಪಾದನೆಯೂ ಹಳೆಯದೇ. ಇಂಥ ಆಕ್ಷೇಪಗಳಿಗೆ ಎಡೆಯಾಗದಿರಲಿ. ವರ್ಗಾವಣೆ ನಿರ್ಣಯ ಪ್ರಕಟವಾದ ನಂತರ ಎಲ್ಲ ಇಲಾಖೆಗಳಲ್ಲೂ 15-20 ದಿನ ಬರೀ ಇದರದೇ ಮಾತು-ಚರ್ಚೆ ಇರುತ್ತದೆ ಹೊರತು ಬೇರೆ ಕೆಲಸಗಳು ನಡೆಯುವುದು ಕಡಿಮೆ. ಈಗ ಸರ್ಕಾರದ ಅನೇಕ ಇಲಾಖೆಗಳು ಕರೊನಾ ನಿರ್ವಹಣೆ ಮತ್ತು ನಿಯಂತ್ರಣ ಕಾರ್ಯದಲ್ಲಿ ತೊಡಗಿಕೊಂಡಿವೆ. ಕರೊನಾ ಸೋಂಕಿನ ಪ್ರಮಾಣ ರಾಜ್ಯದಲ್ಲಿ ಏರಿಕೆಯಾಗುತ್ತಲೇ ಇರುವುದರಿಂದಾಗಿ ಈ ಇಲಾಖೆಗಳ ಹೊಣೆಗಾರಿಕೆ ಹೆಚ್ಚುತ್ತಲೇ ಇದೆ. ಕರೊನಾ ನಿಯಂತ್ರಣ ಒಂದು ಹಂತಕ್ಕೆ ಬರುವವರೆಗೂ ಇವರ ಕೆಲಸ ನಡೆಯುತ್ತಿರಲೇಬೇಕು. ಈ ಕೆಲಸದಲ್ಲಿ ವ್ಯತ್ಯಾಸವಾದರೆ ಒಟ್ಟಾರೆ ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ಮೇಲೆ ಪರಿಣಾಮವಾಗುತ್ತದೆ ಮತ್ತು ನಂತರದ ಸನ್ನಿವೇಶ ಮತ್ತಷ್ಟು ಗಡಚಾಗುತ್ತದೆ. ಹೀಗಾಗಿ ಆಯಾ ಇಲಾಖೆಗಳು ಮತ್ತು ಅಧಿಕಾರಿ-ನೌಕರರು ತಂತಮ್ಮ ಜವಾಬ್ದಾರಿ- ಕರ್ತವ್ಯಗಳನ್ನು ಅರಿತುಕೊಂಡು, ವರ್ಗಾವಣೆ ಭರಾಟೆಯಲ್ಲಿ ಕರೊನಾ ಕಾರ್ಯದ ಮೇಲೆ ದುಷ್ಪರಿಣಾಮ ಆಗದಂತೆ ನೋಡಿಕೊಳ್ಳುವ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಇಷ್ಟು ದಿನಗಳ ಶ್ರಮಕ್ಕೆ ಪ್ರತಿಫಲ ಇಲ್ಲದಂತಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net