ಜನನ, ಮರಣ ತಿದ್ದುಪಡಿ ರಿಜಿಸ್ಟ್ರಾರ್ ಕರ್ತವ್ಯ

ವಿಜಯವಾಣಿ (7)
Published on

ತೃತೀಯ ಲಿಂಗಿಗಳ ಪ್ರಮಾಣಪತ್ರ ಮಾರ್ಪಾಡು | ಉಚ್ಚನ್ಯಾಯಾಲಯ ಸೂಚನೆ

ಬೆಂಗಳೂರು: ಜನನ ಮತ್ತು ಮರಣ ಕಾಯ್ದೆ ಮತ್ತು ಅದರ ಸಂಬಂಧಿತ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರುವವರೆಗೂ ತೃತೀಯ ಲಿಂಗಿಗಳ ಜನನ ಮತ್ತು ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿಕೊಡುವುದು ಜನನ ಮತ್ತು ಮರಣ ನೋಂದಣಿ ರಿಜಿಸ್ಟ್ರಾರ್ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ.

ಶಸ್ತ್ರ ಚಿಕಿತ್ಸೆ ಮೂಲಕ ಲಿಂಗ ಬದಲಾಯಿಸಿಕೊಂಡು ಮಹಿಳೆಯಾದ ಮಂಗಳೂರಿನ ಬೋಳಾರುವಿನ ತೃತೀಯ ಲಿಂಗಿಯೊಬ್ಬರು ತನ್ನ ಜನನ ಪ್ರಮಾಣಪತ್ರದಲ್ಲಿ ಹೆಸರು ಮತ್ತು ಲಿಂಗವನ್ನು ಬದಲಾಯಿಸಲು ಮಂಗಳೂರು ಮಹಾನಗರ ಪಾಲಿಕೆಯ ಜನನ -ಮರಣ ನೋಂದಣಾಧಿಕಾರಿಗೆ ಸೂಚನೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅಲ್ಲದೇ, 1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆ ತಿದ್ದುಪಡಿಗಳನ್ನು ಮಾಡುವ ವರೆಗೂ ಲಿಂಗವನ್ನು ಬದಲಾಯಿಸಿ ಕೊಂಡವರಿಗೆ ಪರಿಷ್ಕೃತ ಜನನ- ಮರಣ ಪ್ರಮಾಣಪತ್ರವನ್ನು ವಿತರಣೆ ಮಾಡಬೇಕು ಎಂದು ಪೀಠ ಸೂಚನೆ ನೀಡಿದೆ.

2019ರ ತೃತಿಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆಯ ಅನುಸಾರ ಲಿಂಗ ಬದಲಾವಣೆ ಪ್ರಕ್ರಿಯೆಗಳಿಗೆ ಒಳಗಾದ ವ್ಯಕ್ತಿಯು ಲಿಂಗ ಪರಿವರ್ತನೆಯಾದ ಬಳಿಕ ಎಲ್ಲ ದಾಖಲೆಗಳಲ್ಲಿ ಹೆಸರು ಮತ್ತು ಲಿಂಗ ಬದಲಾಯಿಸಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ, ಲಿಂಗವನ್ನು ಬದಲಾಯಿಸಿಕೊಂಡ ಕುರಿತು ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದ ಬಳಿಕ ಪರಿಷ್ಕೃತ ಜನನ ಪ್ರಮಾಣ ಪತ್ರ ಪಡೆಯುವುದಕ್ಕೆ ಅವಕಾಶ ಇಲ್ಲವಾಗಿದೆ. ಆದ್ದರಿಂದ 1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆ ಅನ್ವಯ ಸೂಕ್ತ ರೀತಿಯಲ್ಲಿ ನಿಯಮಗಳಿಗೆ ತಿದ್ದುಪಡಿ ತರುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡುವಂತೆ ಕಾನೂನು ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಪ್ರಕರಣವೇನು?: ಅರ್ಜಿದಾರರು 1983 ಏ.6ರಂದು ಗಂಡು ಮಗುವಾಗಿ ಜನಿಸಿದ್ದರು. 2007ರ ಜು.16ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮನೋವಿಜ್ಞಾನ ತಪಾಸಣೆಯ ವೇಳೆ ಇವರ ದೇಹದಲ್ಲಿ ಮಹಿಳೆಯ ಭಾವನೆ ವ್ಯಕ್ತವಾಗಿದ್ದು, ಲಿಂಗ ಡಿಸ್ಪೊರಿಯಾದಿಂದ ಬಳಲುತ್ತಿರುವುದು ಖಚಿತವಾಯಿತು.

ಬಳಿಕ ಅವರನ್ನು ವೈದ್ಯರು ಪರೀಕ್ಷಿಸಿದ್ದು, ಪ್ರಾಧಿಕಾರವು ಮರು ಮೌಲ್ಯಮಾಪನ ನಡೆಸಿದ ಬಳಿಕ ಅರ್ಜಿದಾರರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಹೆಸರು ಬದಲಿಸಿಕೊಂಡಿದ್ದು, ಆಧಾರ್, ಚಾಲನಾ ಪರವಾನಗಿ ಮತ್ತು ಪಾಸ್​ಪೋರ್ಟ್ ಇತ್ಯಾದಿ ದಾಖಲೆಗಳಲ್ಲಿ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು.

ಅಲ್ಲದೆ, ಮಂಗಳೂರು ನಗರ ಪಾಲಿಕೆಯ ಜನನ ಮತ್ತು ಮರಣ ಸರ್ಟಿಫಿಕೆಟ್ ನೀಡುವ ರಿಜಿಸ್ಟ್ರಾರ್ ಅಥವಾ ಆರೋಗ್ಯಾಧಿಕಾರಿಗೆ ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಲಿಂಗ ಬದಲಾವಣೆ ಮಾಡುವಂತೆ ಕೋರಿದ್ದರು. ಆಗ ಆರೋಗ್ಯಾಧಿಕಾರಿಯು ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಸೆಕ್ಷನ್ 15ರ ಅಡಿ ಈಗಾಗಲೇ ನೀಡಿರುವ ಸರ್ಟಿಫಿಕೆಟ್​ನಲ್ಲಿ ದೋಷಗಳಿದ್ದರೆ ಸರಿಪಡಿಸಬಹುದೇ ವಿನಾಃ ಅರ್ಜಿದಾರರು ಕೋರುವ ಬದಲಾವಣೆ ಮಾಡಲಾಗದು ಎಂದು ಹೇಳಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯಲ್ಲಿ ಏನಿದೆ?

ತೃತೀಯ ಲಿಂಗಿ ಕಾಯ್ದೆ ಜಾರಿಗೆ ಬಂದ ಬಳಿಕ 1969ರ ಜನನ ಮತ್ತು ಮರಣ ಕಾಯ್ದೆ ಬದಲಾವಣೆಯಾಗಬೇಕಿತ್ತು. ಆದರೆ, ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ, ತೃತೀಯ ಲಿಂಗಿ ಕಾಯ್ದೆಯಲ್ಲಿ ತೃತೀಯ ಲಿಂಗಿಗಳಿಗೆ ಕಲ್ಪಿಸಲಾಗಿರುವ ಹಕ್ಕುಗಳನ್ನು ಜನನ ಮತ್ತು ಮರಣ ಕಾಯ್ದೆ ಒಳಗೊಂಡಿಲ್ಲ. ಈ ಕಾರಣಕ್ಕೆ, ನ್ಯಾಯಾಲಯ ಅರ್ಜಿದಾರೆಯ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದರು. ಸರ್ಕಾರದ ಪರ ವಕೀಲರು ಅರ್ಜಿದಾರರ ಕೋರಿಕೆಗೆ ಜನನ ಮತ್ತು ಮರಣ ಕಾಯ್ದೆಯಲ್ಲಿ ಅವಕಾಶವಿಲ್ಲ. ದೋಷಗಳಿದ್ದರೆ ಸರಿಪಡಿಸಬಹುದು ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net