

ಕರೊನಾ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ಲಾಕ್ಡೌನ್ ಅವಧಿಯಲ್ಲಿ ಜನಸಾಮಾನ್ಯರನ್ನು, ದೇಶದ ವಿವಿಧ ವಲಯ-ರಂಗಗಳನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ, ರಾಜ್ಯ ಸರ್ಕಾರ ಹಲವು ಹಂತದ ಪ್ಯಾಕೇಜ್ ಘೋಷಿಸಿದ್ದವು. ಲಾಕ್ಡೌನ್ ತೆರವಿನ ಬಳಿಕ ಆರ್ಥಿಕತೆ ಹಳಿಗೆ ಮರಳಬಹುದು ಎಂಬ ನಿರೀಕ್ಷೆ ಇತ್ತಾದರೂ, ಸೋಂಕು ಪ್ರಕರಣಗಳ ಹೆಚ್ಚಳ, ಮತ್ತಿತರ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಈ ನಡುವೆ, ಕೆಲವೇ ದಿನಗಳಲ್ಲಿ ನವರಾತ್ರಿ ಆರಂಭವಾಗಲಿದ್ದು, ದಸರಾ, ದೀಪಾವಳಿ ಸಮೀಪಿಸಲಿವೆ. ಈ ಹಬ್ಬಗಳು ಭಾರತೀಯರಿಗೆ ಸಂಭ್ರಮ ತರುವುದರ ಜತೆಗೆ, ಆರ್ಥಿಕತೆಗೂ ಚೈತನ್ಯ ತುಂಬಬಲ್ಲವು. ಆದರೆ, ಆರ್ಥಿಕ ಹಿಂಜರಿತದ ಕಾರಣ ಜನರು ಈ ಬಾರಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಣದ ಹರಿವು ಹೆಚ್ಚಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಸಕಾಲಿಕ ನೆರವನ್ನು ಘೋಷಿಸಿದ್ದು, 73 ಸಾವಿರ ಕೋಟಿ ರೂಪಾಯಿ ಮೊತ್ತದ ಸೌಲಭ್ಯಗಳನ್ನು ಪ್ರಕಟಿಸಿದೆ. ಇದರಿಂದ ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಹೆಚ್ಚಲು ಅನುಕೂಲವಾಗಲಿದೆ.
ರಾಜ್ಯ ಸರ್ಕಾರಗಳಿಗೆ ಬಡ್ಡಿರಹಿತವಾಗಿ 12 ಸಾವಿರ ಕೋಟಿ ರೂಪಾಯಿ ವಿಶೇಷ ಸಾಲಸೌಲಭ್ಯ ಸಿಗಲಿದ್ದು, ಇದರ ಮರುಪಾವತಿಗೆ 50 ವರ್ಷಗಳ ಕಾಲಾವಧಿ ನೀಡಲಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ ಸಿಕ್ಕಿದ್ದು, ಹಬ್ಬದ ಮುಂಗಡವಾಗಿ 10 ಸಾವಿರ ರೂಪಾಯಿ ಕೈಗೆ ಸೇರಲಿದೆ. 1 ಕೋಟಿ ಸಿಬ್ಬಂದಿಗೆ ಇದರಿಂದ ಲಾಭವಾಗಲಿದೆ. ಅಲ್ಲದೆ, ಶೇ.12ರಷ್ಟು ಅಥವಾ ಇದಕ್ಕಿಂತ ಹೆಚ್ಚಿನ ಜಿಎಸ್ಟಿ ಇರುವ ಉತ್ಪನ್ನಗಳ ಖರೀದಿಗೆ ಎಲ್ಟಿಸಿ ಟಿಕೆಟ್ ಮೊತ್ತದ ಬದಲು ನಗದನ್ನೇ ನೀಡಲಿದೆ. ಇದಕ್ಕಾಗಿ ಕೇಂದ್ರ ಮಾಡುತ್ತಿರುವ ವೆಚ್ಚ 5,675 ಕೋಟಿ ರೂಪಾಯಿ. ಈ ಕ್ರಮದಿಂದ ಮಾರುಕಟ್ಟೆಗೆ/ಅರ್ಥವ್ಯವಸ್ಥೆಗೆ 19 ಸಾವಿರ ಕೋಟಿ ರೂಪಾಯಿ ಹರಿದು ಬರುವ ವಿಶ್ವಾಸ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರದ್ದು. ರಾಜ್ಯಗಳು ಇದೇ ಮಾದರಿಯ ಕ್ರಮ ಕೈಗೊಂಡಲ್ಲಿ ಹೆಚ್ಚುವರಿಯಾಗಿ 9 ಸಾವಿರ ರೂಪಾಯಿ ಕೋಟಿ ಅರ್ಥವ್ಯವಸ್ಥೆಗೆ ಹರಿದು ಬರಲಿದೆ. ಒಂದು ವೇಳೆ ಖಾಸಗಿ ವಲಯದವರು ತಮ್ಮ ಸಿಬ್ಬಂದಿಗೆ ಈ ಬಗೆಯ ಸೌಲಭ್ಯ ಕಲ್ಪಿಸಿದ್ದಲ್ಲಿ ಅರ್ಥವ್ಯವಸ್ಥೆಯಲ್ಲಿ ಹೆಚ್ಚುವರಿಯಾಗಿ 1 ಲಕ್ಷ ಕೋಟಿ ರೂಪಾಯಿಯ ಬೇಡಿಕೆ ಸೃಷ್ಟಿ ಆಗಲಿದೆ.
ರಸ್ತೆ, ರಕ್ಷಣಾ ಮೂಲಸೌಕರ್ಯ, ನೀರು ಪೂರೈಕೆ ಮತ್ತು ನಗರಾಭಿವೃದ್ಧಿಗಾಗಿ ಹೆಚ್ಚುವರಿಯಾಗಿ 25 ಸಾವಿರ ಕೋಟಿ ರೂಪಾಯಿ ಒದಗಿಸಿರುವುದು ಮಹತ್ವದ ಕ್ರಮ. ಈ ವಲಯಗಳಿಗೆ ಬಜೆಟ್ನಲ್ಲಿ 4.31 ಲಕ್ಷ ಕೋಟಿ ರೂಪಾಯಿ ಒದಗಿಸಲಾಗಿತ್ತು. ಆರ್ಥಿಕತೆ ವೇಗ ಪಡೆದುಕೊಳ್ಳದ ಸಂದಿಗ್ಧ ಸ್ಥಿತಿಯಲ್ಲಿ ಹಣದ ಹರಿವು ಹೆಚ್ಚಬೇಕಾದರೆ, ಜನರ ಕೈಯಲ್ಲಿ ಹಣ ಬೇಕು. ಸರ್ಕಾರದ ಈ ಸರಣಿ ಕ್ರಮಗಳು ಹಬ್ಬ-ಉತ್ಸವಗಳ ಹೊತ್ತಲ್ಲಿ ಹೊಸ ಆಶಾಭಾವ ಮೂಡಿಸಿವೆ. ಆದರೆ, ರಾಜ್ಯಗಳಿಗೆ ನೀಡಬೇಕಾದ ಜಿಎಸ್ಟಿ ಪರಿಹಾರ ಇನ್ನೂ ಬಗೆಹರಿಯದ ಕಗ್ಗಂಟಾಗಿ ಉಳಿದದ್ದು, ಕೇಂದ್ರ ಈ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಲಿ.