ಸಂಪಾದಕೀಯ| ಸಾಧಕಬಾಧಕ ಅರಿಯಲಿ

online class
Published on

ಕರೊನಾ ಹಾವಳಿಯಿಂದ ಈ ಬಾರಿಯ ಶೈಕ್ಷಣಿಕ ವರ್ಷವೂ ಹಳಿತಪ್ಪಿದೆ. ಅನೇಕ ಪ್ರಯತ್ನಗಳ ತರುವಾಯ ಇತ್ತೀಚೆಗಷ್ಟೇ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪೂರ್ಣಗೊಂಡಿದ್ದು, ಸಣ್ಣ ಸಮಾಧಾನ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಶಾಲೆಗಳು ಆರಂಭವಾಗಿ, ಶೈಕ್ಷಣಿಕ ಚಟುವಟಿಕೆಗಳು ಗರಿಗೆದರುತ್ತವೆ. ಈ ಬಾರಿ ಕರೊನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದೆ ಇರುವುದರಿಂದ ಶಾಲೆಗಳು ಯಾವಾಗ ಪುನರಾರಂಭಗೊಳ್ಳಬಹುದು ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ಅವಸರದ ಕ್ರಮದಲ್ಲಿ ಶಾಲೆಗಳನ್ನು ಆರಂಭಿಸುವಂತೆಯೂ ಇಲ್ಲ. ಅತ್ತ ಶಾಲೆಗಳಿಲ್ಲದೆ, ಇತ್ತ ಕಲಿಕೆಯೂ ಇಲ್ಲದೆ ಮಕ್ಕಳ ಭವಿಷ್ಯ ಹೇಗೆ, ಈ ವರ್ಷ ಪೋಲಾಗಲಿದೆಯೇ ಎಂಬ ಆತಂಕ ಪಾಲಕರನು ಇನ್ನಿಲ್ಲದಂತೆ ಕಾಡುತ್ತಿದೆ. ಇದಕ್ಕಾಗಿ ಆನ್​ಲೈನ್ ಬೋಧನೆ ಬಗ್ಗೆ ಭಾರಿ ಚರ್ಚೆ ನಡೆದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಈ ಬಗ್ಗೆ ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ತನ್ನ ವರದಿಯನ್ನು ಸಲ್ಲಿಸಿದ್ದು, ಕೆಲ ಷರತ್ತುಗಳೊಂದಿಗೆ ಆನ್​ಲೈನ್ ತರಗತಿ ನಡೆಸಬಹುದು ಎಂದಿದೆ.

ತಂತ್ರಜ್ಞಾನ ಬಳಕೆಯ ನೆಪದಲ್ಲಿ ಸರ್ಕಾರಿ ಶಾಲೆ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು, ವಿದ್ಯಾರ್ಥಿಗಳ ವಯೋಮಿತಿ ಆಧಾರದ ಮೇಲೆ ಆನ್​ಲೈನ್ ಬೋಧನೆ ಮಾಡಬೇಕು. ತಂತ್ರಜ್ಞಾನದ ಬಳಕೆ ಏಕೈಕ ಆಯ್ಕೆಯಾಗದೆ, ಇತರ ಕಾರ್ಯಸಾಧುವಾದ ಆಯ್ಕೆಗಳನ್ನು ಬಳಸಬೇಕು. ನೇರಪ್ರಸಾರ ಮಾತ್ರವಲ್ಲದೆ ಪಾಠಗಳನ್ನು ಮುಂಚಿತವಾಗಿ ಮುದ್ರಿಸಿ, ಕಲಿಸುವ ಪ್ರಕ್ರಿಯೆಗೂ ಒತ್ತು ನೀಡಬೇಕು ಎಂಬ ಮುಖ್ಯ ಅಂಶಗಳನ್ನು ಈ ವರದಿ ಒಳಗೊಂಡಿದ್ದು, ವರದಿಯ ಅಧ್ಯಯನದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಅಲ್ಲದೆ, ಎನ್​ಸಿಇಆರ್​ಟಿ ಪಠ್ಯವನ್ನು ಶೇಕಡ 30ರಷ್ಟು ಕಡಿತಗೊಳಿಸಿರುವಂತೆಯೇ, ರಾಜ್ಯದ ಪಠ್ಯವನ್ನೂ ಶೇಕಡ 30ರಷ್ಟು ಕಡಿಮೆ ಮಾಡುವ ಆಶ್ವಾಸನೆಯನ್ನು ಸಚಿವರು ನೀಡಿದ್ದಾರೆ. ಆನ್​ಲೈನ್ ಬೋಧನೆಗೆ ನಮ್ಮ ವ್ಯವಸ್ಥೆ, ಶಾಲೆಗಳು ಸೇರಿ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಸನ್ನದ್ಧಗೊಂಡಿವೆಯೇ ಎಂಬುದು ಮುಖ್ಯವಾದ ಪ್ರಶ್ನೆ.

ಇಲ್ಲಿ ಗಮನ ಕೇಂದ್ರೀಕರಿಸಬೇಕಾದದ್ದು ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ. ಗ್ರಾಮೀಣ ಭಾಗದಲ್ಲಿ ಇಂಟರ್​ನೆಟ್ ಸೌಲಭ್ಯ ಪರಿಣಾಮಕಾರಿಯಾಗಿಲ್ಲ, ಅಲ್ಲದೆ, ಬಹುತೇಕ ಪಾಲಕರು ಸ್ಮಾರ್ಟ್​ಫೋನ್​ಗಳಂಥ ಸಾಧನಗಳನ್ನು ಹೊಂದಿಲ್ಲ. ಬೆಂಗಳೂರಿನಂಥ ಮಹಾನಗರದಲ್ಲೇ ಕೆಲ ಪಾಲಕರು ಶೈಕ್ಷಣಿಕ ಸಂಸ್ಥೆಗಳ ಒತ್ತಡಕ್ಕೆ ಮಣಿದು ಸಾಲಸೋಲ ಮಾಡಿ ಮೊಬೈಲ್ ಇಲ್ಲವೆ ಲ್ಯಾಪ್​ಟಾಪ್ ಖರೀದಿಸುತ್ತಿದ್ದಾರೆ. ಮತ್ತೊಂದು ಕಳವಳ ಸ್ಕ್ರೀನಿಂಗ್ ವೇಳೆಯದ್ದು. ಅಂದರೆ, ಮಕ್ಕಳು ತರಗತಿಗಳ ನೆಪದಲ್ಲಿ ಹೆಚ್ಚು ಹೊತ್ತು ಮೊಬೈಲ್ ಇಲ್ಲವೆ ಲ್ಯಾಪ್ ಟಾಪ್ ಎದುರು ಕುಳಿತರೆ ಅದರಿಂದ ಹಲವು ಅಡ್ಡ ಪರಿಣಾಮಗಳಿವೆ. ಈ ಬಗೆಯ ಬೋಧನೆ ಮಕ್ಕಳ ಮೇಲೆ ಮಾನಸಿಕ ಒತ್ತಡವನ್ನೂ ಸೃಷ್ಟಿಸುತ್ತದೆ, ಸಹಜ ಕಲಿಕೆಗೆ ತಡೆ ಒಡ್ಡುತ್ತದೆ ಎಂಬುದು ತಜ್ಞರ ಅಂಬೋಣ. ಹಾಗಂತ, ಪಾಠಗಳನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರೆ ಮಕ್ಕಳ ಶೈಕ್ಷಣಿಕ ವರ್ಷದ ಗತಿಯೇನು ಎಂಬ ಪ್ರಶ್ನೆಯೂ ಇದೆ. ಒಟ್ಟಾರೆ ಇದು ಸಂದಿಗ್ಧದ ಸ್ಥಿತಿ. ಹಾಗಾಗಿ ಸರ್ಕಾರ ಎಲ್ಲ ಸಾಧಕಬಾಧಕಗಳನ್ನು ಅಳೆದು ತೂಗಿ ಮಕ್ಕಳು ಮತ್ತು ಪಾಲಕರ ಹಿತದೃಷ್ಟಿಯಿಂದ ಸಮಂಜಸವಾದ ನಿರ್ಧಾರ ಕೈಗೊಳ್ಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net