ಸಂಪಾದಕೀಯ| ಉಸಿರಾಗಲಿ ಕನ್ನಡ

Karnataka
Published on

ಕನ್ನಡನಾಡು ಹಲವು ಶತಮಾನಗಳ ಶ್ರೀಮಂತ ಇತಿಹಾಸ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ರಾಜ್ಯ. ಒಂದು ಕಾಲಕ್ಕೆ ದಕ್ಷಿಣದಲ್ಲಿರುವ ಕಾವೇರಿ ನದಿಯಿಂದ ಉತ್ತರದಲ್ಲಿರುವ ಗೋದಾವರಿ ನದಿಯವರೆಗೆ ಕನ್ನಡ ನಾಡು ವ್ಯಾಪಿಸಿತ್ತು. ನಂತರದ ಸಮಯದಲ್ಲಿ ಆಡಳಿತಕ್ಕೆ ಬಂದ ವಿವಿಧ ಧರ್ಮ ಮತ್ತು ಭಾಷೆಗಳ ರಾಜರಿಂದಾಗಿ ನಮ್ಮ ನಾಡಿನ ಜನರು ಇಪ್ಪತ್ತಕ್ಕೂ ಹೆಚ್ಚು ಪ್ರಭುತ್ವಗಳಲ್ಲಿ ಹಂಚಿಹೋಗಬೇಕಾಯಿತು. ಅದು ಆ ಕಾಲಘಟ್ಟದ ರಾಜಕೀಯ ಅನಿವಾರ್ಯತೆಗಳಲ್ಲೊಂದು. ಹೀಗೆ ಹಂಚಿಹೋಗಿದ್ದವರನ್ನು ಮತ್ತೆ ಒಂದುಗೂಡಿಸಿದ್ದು ಏಕೀಕರಣದ ಹೋರಾಟ. ಹತ್ತಾರು ಸಂಘ-ಸಂಸ್ಥೆಗಳು, ನೂರಾರು ಕವಿ-ಸಾಹಿತಿಗಳು, ಸಾವಿರಾರು ನಾಡಪ್ರೇಮಿಗಳ ತ್ಯಾಗ-ಬಲಿದಾನದ ಫಲವಾಗಿ ಕನ್ನಡನಾಡು ಏಕೀಕರಣ ಸಾಧಿಸಿತು. 1956ರ ನ. 1ರಂದು ಮೈಸೂರು ರಾಜ್ಯವಾಗಿ ಉದಯವಾಯಿತು. ನಂತರ ಕೋಟ್ಯಂತರ ಕನ್ನಡಿಗರ ಮನದಾಳದ ಅಪೇಕ್ಷೆಯಂತೆ 1973ರ ನ. 1ರಂದು ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣಗೊಂಡಿತು. ಪ್ರತಿ ವರ್ಷ ಅದೇ ದಿನವನ್ನು ರಾಜ್ಯೋತ್ಸವವನ್ನಾಗಿ ಕನ್ನಡಿಗರು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅದಾಗಿ ಈಗ ಏಳು ದಶಕಗಳಾಗುತ್ತ ಬಂದಿದೆ. ಈ ಸಂದರ್ಭದಲ್ಲಿ, ಈವರೆಗೆ ಆಗಿರುವ ಸಾಧನೆಗಳನ್ನು ಸ್ಮರಿಸಿಕೊಂಡು ಸಂಭ್ರಮಿಸುವುದು ಒಂದೆಡೆಯಾದರೆ, ಇನ್ನೊಂದೆಡೆ ಕನ್ನಡಿಗರು ಮತ್ತು ಕನ್ನಡ ಭಾಷೆ ಈಗಲೂ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿದೆ.

ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮುಂತಾದ ನೆರೆರಾಜ್ಯಗಳೊಂದಿಗಿನ ಗಡಿ ವಿವಾದಗಳು, ಕೃಷ್ಣೆ- ಕಾವೇರಿ ಮತ್ತಿತರ ನದಿಗಳ ನೀರಿನ ಹಂಚಿಕೆಯ ಸಮಸ್ಯೆಗಳು ಇನ್ನೂ ಹಾಗೇ ಉಳಿದಿವೆ. ರಾಜ್ಯ ವಿಭಜನೆಯ ಕೂಗು ಆಗೊಮ್ಮೆ ಈಗೊಮ್ಮೆ ಕರ್ನಾಟಕದ ಉತ್ತರ ಭಾಗದಿಂದ ಕೇಳಿಬಂದರೂ ಅದೇನು ಅಷ್ಟು ಗಂಭೀರವಾಗಿಲ್ಲ. ಆದರೆ ಪ್ರಾದೇಶಿಕ ಅಸಮತೋಲನದ ಬಗ್ಗೆ ಗಮನ ಕೊಡದೇ ಇದ್ದರೆ ಮುಂದೊಂದು ದಿನ ಅದು ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯವೂ ಆಗಿಬಿಡಬಹುದು. ಉದ್ಯೋಗ, ವೃತ್ತಿಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಕನ್ನಡಿಗರಿಗೇ ಮೊದಲ ಪ್ರಾಶಸ್ಱ ಸಿಗಬೇಕು ಎಂಬ ಕೂಗಿಗೆ ಈವರೆಗೂ ಮನ್ನಣೆ ಸಿಕ್ಕಿಲ್ಲ. ಹೊರರಾಜ್ಯದವರು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ವಿಜೃಂಭಿಸುತ್ತಿರುವುದು ದೃಗ್ಗೋಚರವಾಗಿದೆ. ಇದಕ್ಕೆ ಆಳುವವರಲ್ಲಿನ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ. ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರು ಸಾಕಷ್ಟು ಮುಂದೆ ಬಂದಿದ್ದರೂ ಕನ್ನಡ ಮಾತ್ರ ಹಿಂದುಳಿದಿದೆ. ಈವರೆಗೂ ಏಕರೂಪದ ಕನ್ನಡ ಕೀಲಿಮಣೆಯೊಂದನ್ನು ಜನಪ್ರಿಯಗೊಳಿಸುವುದು ನಮ್ಮಿಂದ ಸಾಧ್ಯವಾಗದಿರುವುದು ಅದಕ್ಕೊಂದು ಉದಾಹರಣೆ. ಕನ್ನಡವು ಅನ್ನದ ಭಾಷೆಯಾಗದ ಹೊರತು ಅದರ ಬಳಕೆ ಅನಿವಾರ್ಯವಾಗುವುದಿಲ್ಲ ಎಂಬ ಸತ್ಯ ಇನ್ನೂ ನಮ್ಮ ಮನಸ್ಸಿನೊಳಗೆ ನಾಟಿಲ್ಲ. ಈ ದಿಸೆಯಲ್ಲಿ ಕರ್ನಾಟಕ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪರ ಸಂಘ ಸಂಸ್ಥೆಗಳು, ಅಕಾಡೆಮಿ-ಪ್ರಾಧಿಕಾರಗಳು ಮಾತ್ರ ಕೆಲಸ ಮಾಡಿದರೆ ಸಾಲದು, ಸ್ವತಃ ಕನ್ನಡಿಗರೂ ಕನ್ನಡವನ್ನು ಉಸಿರಾಗಿಸಿಕೊಳ್ಳಲು ಮುಂದಾಗಬೇಕು. ಆಗ ಮಾತ್ರ ಕನ್ನಡ ಇನ್ನಷ್ಟು ಬೆಳೆಯಲು, ಬೆಳಗಲು ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net