

ರಾಜ್ಯಕ್ಕೆ ಸರಣಿ ಕಾಯಿಲೆಗಳು ಕಾಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಹವಾಮಾನ ಬದಲಾವಣೆ ಮತ್ತು ಚಳಿಯ ಹೆಚ್ಚಳ. ಒಂದೆಡೆ ಉಸಿರಾಟದ ತೊಂದರೆ ಹಾಗೂ ಶೀತಸಂಬಂಧಿ ಸಮಸ್ಯೆ ಹೆಚ್ಚಾಗಿದ್ದರೆ, ಮತ್ತೊಂದೆಡೆ, ಡೆಂಘ ಮತ್ತು ಚಿಕೂನ್ ಗುನ್ಯಾ ಪ್ರಕರಣಗಳು ಏರಿಕೆ ಕಂಡಿವೆ. ರಾಜ್ಯದಲ್ಲಿ ಈವರೆಗೂ (ನ. 23ವರೆಗೆ) ಡೆಂಘೆಯ 13,999 (9 ಸಾವು), ಚಿಕೂನ್ ಗುನ್ಯಾದ 1,400 ಪ್ರಕರಣಗಳು ವರದಿಯಾಗಿವೆ. ಇವಲ್ಲದೆ ಏಕರೂಪ ಲಕ್ಷಣಗಳನ್ನು ಹೊಂದಿರುವ ವೈರಾಣು ಜ್ವರ ಹೆಚ್ಚಾಗಿದ್ದು, ವೈದ್ಯರಿಗೂ ಸವಾಲಾಗಿ ಪರಿಣಮಿಸಿದೆ. ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ ವಾತಾವರಣದಲ್ಲಿನ ಏರುಪೇರಿನಿಂದಾಗಿ ನಾನಾ ವೈರಾಣು ಜ್ವರದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದ್ದು, ಇವರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳು ಹಾಗೂ ವೃದ್ಧರು ಇದ್ದಾರೆ.
ಸಾಮಾನ್ಯವಾಗಿ ಚಳಿಗಾಲ ಆರಂಭವಾಗುತ್ತಿದ್ದಂತೆ ಈ ಬಗೆಯ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ಆರೋಗ್ಯ ಇಲಾಖೆ ಈ ಪರಿಸ್ಥಿತಿಯನ್ನು ಎದುರಿಸಲು ಈ ಹೊತ್ತಿಗೆ ಸನ್ನದ್ಧವಾಗಿರಬೇಕಿತ್ತು. ಆದರೆ, ತಾಲೂಕು, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ, ವೈದ್ಯರ ಅಲಭ್ಯತೆ ಮುಂತಾದ ಸಮಸ್ಯೆಗಳ ಕಾರಣದಿಂದ ಜನರು ಖಾಸಗಿ ಕ್ಲಿನಿಕ್ಗಳನ್ನೇ ಹೆಚ್ಚಾಗಿ ಅವಲಂಬಿಸುವಂತಾಗಿದೆ. ಈ ಪರಿಸ್ಥಿತಿ ಬದಲಾಗಬೇಕು. ಸರಣಿ ಕಾಯಿಲೆಗಳ ನಿಯಂತ್ರಣದ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸವೂ ಆಗಬೇಕು.
ಆರೋಗ್ಯ ವ್ಯವಸ್ಥೆಯನ್ನು ಸನ್ನದ್ಧವಾಗಿ ಇರಿಸಿ, ರೋಗಿಗಳಿಗೆ ಸೂಕ್ತ ಹಾಗೂ ಪರಿಣಾಮಕಾರಿ ಚಿಕಿತ್ಸೆ ದೊರೆಯುವಂತೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದ್ದರೆ, ಸೂಕ್ತ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಹೊಣೆ ಜನರ ಮೇಲಿದೆ. ಡೆಂಘ, ಚಿಕೂನ್ ಗುನ್ಯಾ, ತೀವ್ರ ಉಸಿರಾಟದ ಸಮಸ್ಯೆ, ಶೀತಜ್ವರ ಮತ್ತು ಅಸ್ತಮಾದಂತಹ ಸಮಸ್ಯೆಗಳು ಉಲ್ಬಣಿಸುತ್ತಿರುವುದರಿಂದ ಜೀವನಶೈಲಿಯಲ್ಲೂ ಸೂಕ್ತ ಮಾರ್ಪಾಡು ಮಾಡಿಕೊಳ್ಳುವುದು ಅಗತ್ಯ. ಕುದಿಸಿ ಆರಿಸಿದ ಶುದ್ಧ ನೀರು, ತಾಜಾ ಆಹಾರದ ಸೇವನೆಗೆ ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆ ಔಷಧ ಮತ್ತು ಇತರ ಚಿಕಿತ್ಸಾ ಪರಿಕರಗಳ ಕೊರತೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಸ್ಥಿತಿ ಗಂಭೀರವಾದಾಗಲೇ ಎಚ್ಚೆತ್ತುಕೊಂಡು, ಪರಿಹಾರಕ್ಕಾಗಿ ಪರದಾಡುವಂಥ ಸನ್ನಿವೇಶ ಸೃಷ್ಟಿಯಾಗಬಾರದು. ಗ್ರಾಮೀಣ ಪ್ರದೇಶದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಈ ನಿಟ್ಟಿನಲ್ಲಿ ಸೂಕ್ತ ಸೌಕರ್ಯ ಕಲ್ಪಿಸಬೇಕು. ಕೊರತೆಗಳನ್ನು ನಿವಾರಿಸಬೇಕು. ಗ್ರಾಮೀಣ ವಾಸಿಗಳು ಜ್ವರ, ಕೆಮ್ಮಿನ ಚಿಕಿತ್ಸೆಗೂ ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುವಂಥ ಸ್ಥಿತಿ ಸರಿಯಲ್ಲ. ಇನ್ನಷ್ಟು ವಿಳಂಬವಾಗುವ ಮುನ್ನ ಸಂಬಂಧಪಟ್ಟ ವ್ಯವಸ್ಥೆ ಎಚ್ಚೆತ್ತುಕೊಳ್ಳಲಿ.